ಲೇಖಕಿ ಚಂದ್ರಾವತಿ ಬಡ್ಡಡ್ಕ ಅವರ ಕೃತಿ ‘ಲಘುಬಿಗು’ 2022ನೇ ಸಾಲಿನ ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ) ದತ್ತಿ ಪ್ರಶಸ್ತಿಯನ್ನು ಕೃತಿಯು ಪಡೆದುಕೊಂಡಿರುತ್ತದೆ. ಇದೇ ವೇಳೆ ಸಹನಾ ಕಾಂತಬೈಲು ಅವರ ‘ಇದು ಬರಿ ಮಣ್ಣಲ್ಲ’ ಕೃತಿಯು 2021 ನೇ ಸಾಲಿನ ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ) ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಕರ್ನಾಟಕ ಲೇಖಕಿಯರ ಸಂಘದ 2021 ಮತ್ತು 2022ನೇ ಸಾಲಿನ ವಾರ್ಷಿಕ ವಿವಿಧ ದತ್ತಿ ಪ್ರಶಸ್ತಿಗಳಿಗೆ ನಾಡಿನ ವಿವಿಧ ಲೇಖಕಿಯರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಪ್ರಶಸ್ತಿಯು ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ.
ಸಮಾರಂಭವು ಜು. 23 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರು ಹಾಗೂ ಮಾಜಿ ಸಚಿವೆ ರಾಣಿ ಸತೀಶ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದರ ಜೊತೆಗೆ ಸಂಘದ 2020ನೇ ಸಾಲಿನಲ್ಲಿ ಪ್ರಶಸ್ತಿಗೆ ಆಯ್ಕೆಯಾದವರಿಗೂ ಇದೇ ವೇದಿಕೆಯಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.ಪ್ರಶಸ್ತಿಯು ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ.
ಆಯ್ಕೆ ಸಮಿತಿಯಲ್ಲಿ ಸಾಹಿತಿಗಳಾದ ಎಂ.ಎಸ್.ಆಶಾದೇವಿ, ಡಾ.ಬೈರಮಂಗಲ ರಾಮೇಗೌಡ ಹಾಗೂ ಚಂದ್ರಿಕಾ ಪುರಾಣಿಕ ಇವರುಗಳು ಇದ್ದರು.