ಸುಳ್ಯ ಕಾಂಗ್ರೆಸ್ ಗೆ ಈ ಪರಿಸ್ಥಿತಿ ಬಂದಿರುವುದನ್ನು ಕಾಂಗ್ರೆಸ್ಸಿಗರಾರೂ ಸಹಿಸಿಕೊಂಡಿರುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡರು ಹೇಳಿದ್ದಾರೆ.
ಸುದ್ದಿಗೆ ಹೇಳಿಕೆ ನೀಡಿರುವ ಅವರು ” ಕಳೆದ 30 ವರ್ಷಗಳಿಂದಲೂ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ನಮ್ಮ ಪಕ್ಷದ ಯಾರೂ ಕೂಡಾ ಶಾಸಕರು ಇಲ್ಲದಿದ್ದರೂ ಪಕ್ಷದಲ್ಲಿ ಇದ್ದ ನಾಯಕರು ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಎಪಿಎಂಸಿ, ನಗರ ಪಂಚಾಯತ್ ಚುನಾವಣೆಗಳಲ್ಲಿ ನಮ್ಮ ಪಕ್ಷದ ಪ್ರತಿನಿಧಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದೇವೆ ಮತ್ತು ಆ ಮೂಲಕ ನಾವೆಲ್ಲ ನಾಯಕರು ನಮ್ಮ ಜಿಲ್ಲೆಯ ,ರಾಜ್ಯದ ಮತ್ತು ರಾಷ್ಟ್ರೀಯ ನಾಯಕರಿಂದ ಗೌರವ ಪಡೆದುಕೊಂಡಿದ್ದೇವೆ. ಈ ರೀತಿಯ ಗೌರವ ಕಳೆದ ಚುನಾವಣೆ ದಿನದ ತನಕವೂ ಸಿಕ್ಕಿರುತ್ತದೆ. ಆದರೆ ಚುನಾವಣೆ ನಂತರದ ಬೆಳವಣಿಗೆಗಳು ಪ್ರತಿಯೊಬ್ಬ ಕಾಂಗ್ರೆಸ್ ನವರಿಗೂ ಅತೀವ ನೋವು ತಂದಿದೆ. ನಾವೆಲ್ಲ ಪಕ್ಷ ಕಟ್ಟುವ ಉದ್ದೇಶದಿಂದ ಬಿಜೆಪಿ ಜೊತೆ ಸೆಣಸಾಡಿದರೆ , ಈಗಿನ ಕಾಂಗ್ರೆಸ್ ನ ಕೆಲವರು ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ವಿರುದ್ಧವೇ ಸೆಣಸಾಟ, ಹಗೆ ಸಾಧನೆ ಮಾಡುತ್ತಿರೋದು ಪಕ್ಷದ ಸಿದ್ಧಾಂತಕ್ಕೆ ಒಪ್ಪಿ ಬದ್ಧತೆಯಿಂದ ದುಡಿದ ಕಾಂಗ್ರೆಸಿಗರಿಗೆ ನೋವು ತಂದಿದೆ. ಇಂತಹ ದುಸ್ಥಿತಿಗೆ ಕಾರಣರಾದವರ ಮೇಲೆ ಪಕ್ಷದ ಹಿತೈಷಿಗಳು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ ಮತ್ತು ಈ ರೀತಿಯಾದರೆ ಮುಂದಿನ ಲೋಕಸಭಾ ಚುನಾವಣೆ ಹಾಗೂ ಸ್ಥಳೀಯ ಚುನಾವಣೆಗಳ ಪರಿಸ್ಥಿತಿ ಏನಾಗಬಹುದು ಎಂದು ಊಹಿಸಲು ಅಸಾಧ್ಯ ಅಂತ ಚಿಂತಿಸುತ್ತಿದ್ದಾರೆ. ವಾಸ್ತವವಾಗಿ ಇವರು ಪಕ್ಷದ ಒಳಗೆ ಈ ರೀತಿ ಬಡಿದಾಡುವ ಮತ್ತು ಬಡಿದಾಡಿಸುವ ಬದಲು ನಮ್ಮ ಸರಕಾರದ ಪಂಚ ಗ್ಯಾರಂಟಿಗಳನ್ನು ಪ್ರಚಾರಪಡಿಸುವ ಕಾರ್ಯಕ್ರಮಗಳನ್ನು ಮಾಡಿದರೆ ಅದು ಪಕ್ಷಕ್ಕೆ ಒಳ್ಳೆಯ ಭವಿಷ್ಯವನ್ನು ತಂದುಕೊಡಬಹುದು ಅಂತ ಸುಳ್ಯದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಹಿತೈಷಿಗಳು ಬಯಸುತ್ತಿದ್ದಾರೆ” ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡರು ತಿಳಿಸಿದ್ದಾರೆ.