ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಇಂದಿಗೆ ಒಂದು ವರ್ಷ

0

ದೇಶದಲ್ಲೇ ಸಂಚಲನ ಸೃಷ್ಠಿಸಿದ್ದ ಹತ್ಯೆ ಬಿಂಬಿಸಿದ ಪ್ರತಿಫಲನವೇನು? ಘಟನೆಯ ನಂತರ ಏನೇನಾಯ್ತು? – ಇಲ್ಲಿದೆ ಒಂದು ಪ್ಲ್ಯಾಶ್ ಬ್ಯಾಕ್

✍️ ದುರ್ಗಾಕುಮಾರ್ ನಾಯರ್ ಕೆರೆ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮತ್ತು ಸಂಚಲನಕ್ಕೆ ಕಾರಣವಾದ ಆ ಘಟನೆ ನಡೆದು ಇಂದಿಗೆ ಭರ್ತಿ ಒಂದು ವರ್ಷ. 2022 ಜುಲೈ 26 ರಾತ್ರಿ ಎಂಟೂವರೆ ಗಂಟೆಯ ವೇಳೆಗೆ ಆ ದುರ್ಘಟನೆ ನಡೆದು ಹೋಯಿತು. ಅಸಂಖ್ಯ ಕನಸುಗಳನ್ನು ಕಣ್ಣಲ್ಲಿಟ್ಟು ಬದುಕುತ್ತಿದ್ದ ಯುವಕನೊಬ್ಬ ದಾರುಣವಾಗಿ, ನಿರ್ದಯವಾಗಿ ಕೊಲೆಗಡುಕರ ತಲವಾರಿನೇಟಿಗೆ ಬಲಿಯಾದರು.

ಆದರೆ ಆ ಹತ್ಯೆ ಪ್ರತಿಫಲಿಸಿದ ವಿದ್ಯಮಾನಗಳು ನೂರಾರು. ರಾಜಕೀಯವಾಗಿಯೂ ಸೃಷ್ಠಿಸಿದ ತಲ್ಲಣಗಳು ಹಲವಾರು. ಚಲಿಸಿದ ಕಾಲವು ಕಲಿಸಿದ ಪಾಠವೂ ಹತ್ತು ಹಲವಾರು.

ಹೌದು, ಇವರು ಪ್ರವೀಣ್ ನೆಟ್ಟಾರು. ಪ್ರವೀಣ್ ನೆಟ್ಟಾರು ಎಂಬ ಹೆಸರು ಇಂದು ರಾಜ್ಯದ ಬಹು ಪಾಲು ಜನರಿಗೆ ಗೊತ್ತು. ಆದರೆ ವರ್ಷವೊಂದರ ಹಿಂದೆ ಹೆಚ್ಚೂ ಕಡಿಮೆ ಅನಾಮಿಕರಂತೆ ಬದುಕು ಸವೆಸುತ್ತಿದ್ದವರೂ ಇದೇ ಪ್ರವೀಣ್.

ತನ್ನ ಮನೆ, ಕುಟುಂಬ, ಉದ್ಯಮ, ಒಂದಷ್ಟು ಸಮಾಜಸೇವೆ; ನಂಬಿದ್ದ ಗಟ್ಟಿ ಸಿದ್ಧಾಂತ… ಇದರಾಚೆಗೆ ಪ್ರವೀಣ್ ಹೆಸರಿರಲಿಲ್ಲ. ಆದರೆ ದೇಹದಲ್ಲಿ ಕಸುವಿತ್ತು, ಕಣ್ಣ ತುಂಬೆಲ್ಲಾ ಕನಸುಗಳಿತ್ತು. ಏನೋ ಸಾಧಿಸಬಹುದೆಂಬ ಮನೋದಾರ್ಢ್ಯತೆ ಇತ್ತು. ಅದಕ್ಕೆಲ್ಲ ಕೊಡಲಿ ಪೆಟ್ಟು ನೀಡಿದ್ದು ನಿಷ್ಪಾಪಿ ಹಂತಕರ ಕತ್ತಿಯೇಟು.

ನೆಟ್ಟಾರಿನ ಶೇಖರ ಪೂಜಾರಿ – ರತ್ನಾವತಿ ದಂಪತಿಯ ಏಕ ಮಾತ್ರ ಪುತ್ರನಾಗಿದ್ದ 34 ರ ಹರೆಯದ ಪ್ರವೀಣ್ ಕಾಲೇಜು ಜೀವನದ ನಂತರ ಅಲ್ಲಿ ಇಲ್ಲಿ ಕೆಲವು ವೃತ್ತಿ ಮಾಡಿ ಕೊನೆಗೆ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ಅಕ್ಷಯ ಚಿಕನ್ ಸೆಂಟರ್‌ ನ ಔಟ್‌ಲೆಟ್ ಹೊಂದಿದ್ದರು.

ಯುವಕ ಮಂಡಲ ಸಹಿತ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದ ಪ್ರವೀಣ್ ಸಮಾಜ ಮುಖಿ ಆಶಯದ ಪರೋಪಕಾರಿ ವ್ಯಕ್ತಿ. ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ. ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ. ಸಮುದಾಯ ಸಂಘಟನೆ, ಹಿಂದೂ ಸಂಘಟನೆ, ಧಾರ್ಮಿಕ ಸಂಘಟನೆಗಳಲ್ಲಿ ಮುಂಚೂಣಿ ಸೇವೆಯ ಅದಮ್ಯ ಉತ್ಸಾಹ ಹೊಂದಿದ್ದ ತಾರುಣ್ಯ ಶಕ್ತಿ.

ಹಾಗೆ ಅಂದು ರಾತ್ರಿ ತನ್ನ ಚಿಕನ್ ಸೆಂಟರ್ ಮುಚ್ಚಿ ಮನೆಯತ್ತ ಹೆಜ್ಜೆ ಹಾಕಲು ಸಿದ್ದರಾಗುತ್ತಿದ್ದರು ಪ್ರವೀಣ್. ದಿನಂಪ್ರತಿ ಜತೆಯಾಗುತ್ತಿದ್ದ ಮಡದಿ ನೂತನ ಅಂದು ತವರು ಮನೆಗೆ ಹೋಗಿದ್ದರು. ಬಾಗಿಲು ಹಾಕಿ ಹೊರಡಲುನುವಾಗುತ್ತಿದ್ದ ಪ್ರವೀಣ್ ಮೇಲೆ ತಂಡವೊಂದು ಎರಗಿ ಬಂದು ಮಾರಣಾಂತಿಕ ದಾಳಿ ನಡೆಸಿ ತಲವಾರುಗಳಿಂದ ಕೊಚ್ಚಿ ಹಾಕಿತ್ತು. ಗಂಭೀರ ಗಾಯಗೊಂಡ ಪ್ರವೀಣ್ ಪುತ್ತೂರು ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಇಹಲೋಕದ ಇರುವು‌ ಮುಗಿಸಿದ್ದರು.

ಇವೆಲ್ಲ ಐದರಿಂದ ಹತ್ತು ನಿಮಿಷದೊಳಗೆ ನಡೆದು ಹೋದ ಘಟನೆ. ಆದರೆ ಬಲಿಯಾದದ್ದು ಕನಸು ಕಂಗಳ ಒಂದು ಮಾನವ ಜೀವ. ಈ ಕೃತ್ಯದ ಕಾರಣದಿಂದ ಮತ್ತು ಹತ್ಯೆಯ ಹಿಂದಿನ ಕಾರಣದಿಂದ ಈ ಘಟನೆಯು ಮುಂದಿನ ದಿನಗಳಲ್ಲಿ ರಾಜಕೀಯ , ಸಾಮಾಜಿಕ ನೆಲೆಗಳಲ್ಲಿ ವಿಪ್ಲವಕ್ಕೆ ಕಾರಣವಾಗಿ ಬೆಳ್ಳಾರೆಯ ಹೆಸರು ವಿಶ್ವ ವ್ಯಾಪಿಯಾಯಿತು.

ತಮ್ಮ ಒಡನಾಡಿ ಪ್ರವೀಣ್ ಹತ್ಯೆಯಾದ ಸುದ್ದಿ ತಿಳಿಯುತ್ತಿದ್ದಂತೆ ಹಿಂದೂ ಕಾರ್ಯಕರ್ತರ ರಕ್ತ ಕುದಿಯತೊಡಗಿತು. ರಾತ್ರೋ ರಾತ್ರಿ ಪ್ರವೀಣ್ ಮೃತದೇಹವಿದ್ದ ಪುತ್ತೂರಿನ ಆಸ್ಪತ್ರೆಗೆ ಧಾವಿಸಿದರು. ಪ್ರವೀಣ್ ಪತ್ನಿ, ಮನೆಯವರೂ ಆಸ್ಪತ್ರೆಗೆ ಬಂದರು. ಜಿಲ್ಲಾಧಿಕಾರಿಗಳು ಬಾರದ ಹೊರತು, ಒಂದು ಕೋಟಿ ಪರಿಹಾರ ಘೋಷಿಸಿದ ಹೊರತು ಪೋಸ್ಟ್ ಮಾರ್ಟಂ ಸಾಧ್ಯವಿಲ್ಲವೆಂದು ಪಟ್ಟು ಹಿಡಿದು ಕೂತರು. ಕಾರ್ಯಕರ್ತರ ಆಕ್ರೋಶದ ಎದುರು ಯಾವ ನಾಯಕರ ಸಮಾಧಾನದ ಮಾತುಗಳಿಗೂ ಜಾಗವಿರಲಿಲ್ಲ. ಕೊನೆಗೆ ಮಧ್ಯರಾತ್ರಿ ಕಳೆಯುತ್ತಿದ್ದ ವೇಳೆ ಅಂದಿನ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರೇ ಆಸ್ಪತ್ರೆಗೆ ಧಾವಿಸಿ ಬಂದರು. ಕಾರ್ಯಕರ್ತರನ್ನು ಸಮಾಧಾನಪಡಿಸಿದರು.

ಮರುದಿನ ಬೆಳಿಗ್ಗೆ ನಡೆದದ್ದು ಕಂಡು ಕೇಳರಿಯದ ಅಂತಿಮ ಯಾತ್ರೆ. ಆಸ್ಪತ್ರೆಯಿಂದ ಆವರಣದಿಂದ ಮೊದಲ್ಗೊಂಡ ಪ್ರವೀಣ್ ನೆಟ್ಟಾರು ಪಾರ್ಥಿವ ಶರೀರದ ಅಂತಿಮ ಯಾತ್ರೆ ಪುತ್ತೂರು ನಗರ, ದರ್ಬೆ, ಸವಣೂರು, ಕಾಣಿಯೂರು ನಿಂತಿಕಲ್ಲು , ಬಾಳಿಲ ಮಾರ್ಗವಾಗಿ ಬೆಳ್ಳಾರೆಗೆ ಬಂದು ಸೇರಿದಾಗ ಮಟ ಮಟ ಮಧ್ಯಾಹ್ನ. ದಾರಿಯುದ್ದಕ್ಕೂ ಸೇರಿದ ಸಹಸ್ರ ಸಹಸ್ರ ಹಿತೈಷಿಗಳು ಮತ್ತು ಕಾರ್ಯಕರ್ತರು ಅಂತಿಮ ನಮನ ಸಲ್ಲಿಸಿದರು. ಜೈಕಾರದ ಘೋಷಣೆ ಮೊಳಗಿತ್ತು.

ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಈ ಭಾಗದಲ್ಲಿ ಬಂದ್ ಗೆ ಕರೆ ನೀಡಲಾಗಿತ್ತು. ಅಂಗಡಿ, ವ್ಯವಹಾರಗಳು ಸಂಪೂರ್ಣ ಸ್ತಬ್ಧವಾಗಿತ್ತು. ಎಲ್ಲ ದಾರಿಗಳೂ ಬೆಳ್ಳಾರೆಗೇ ಬರುವಂತಿತ್ತು. ಎಲ್ಲೆಲ್ಲಿ ನೋಡಿದರೂ ಜನಸಾಗರ. ಜನರಲ್ಲಿ ಆಕ್ರೋಶವೂ ಮುಗಿಲು ಮುಟ್ಟುತ್ತಿತ್ತು.

ಬೆಳ್ಳಾರೆಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರವೀಣ್ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಅನೇಕ ನಾಯಕರು, ಜನಪ್ರತಿನಿಧಿಗಳು ಧಾವಿಸಿ ಬಂದರು. ಆದರೆ ಕಾರ್ಯಕರ್ತರ ಬೇಸರ, ಬೇಗುದಿಗಳ ಎದುರು ಅವರೆಲ್ಲಾ ಅಸಹಾಯಕರಾಗಿ ನಿಲ್ಲಬೇಕಾಯಿತು. ನಾಯಕರು ತಡವಾಗಿ ಆಗಮಿಸಿದರೆಂದು ಜನ ಕ್ರುದ್ಧರಾದರು. ಒಂದು ಹಂತದಲ್ಲಿ ಸ್ಪೋಟಗೊಂಡ ಕಾರ್ಯಕರ್ತರ ಆಕ್ರೋಶಕ್ಕೆ ಜನಪ್ರತಿನಿಧಿಗಳು ಗುಂಪಿನೊಳಗೆ ಸೇರಿ ಹೊರಬರಲಾರದೆ ಚಡಪಡಿಸಿದರು. ಸಂಸದರ ಕಾರನ್ನು ಕಾರ್ಯಕರ್ತರು ಹಿಡಿದು ಅಲ್ಲಾಡಿಸತೊಡಗಿದರು. ಪೊಲೀಸರು, ಸ್ಥಳೀಯ ನಾಯಕರು ಪ್ರಯಾಸದಿಂದ ಮಧ್ಯ ಪ್ರವೇಶಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆದರು.

ಪರಿಸ್ಥಿತಿ ಒಂದು ಹಂತಕ್ಕೆ ತಹಬಂದಿಗೇನೋ ಬಂತು. ಆದರೆ ತರುವಾಯ ನಡೆದ ಘಟನೆಯೊಂದರ ಪರಿಣಾಮ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಮತ್ತೆ ಹಿಂದೂ ಕಾರ್ಯಕರ್ತರು ಸ್ಫೋಟಗೊಂಡರು. ಸಂಜೆಯ ವೇಳೆಗೆ ಎಲ್ಲವೂ ಸಮಾಧಾನವಾಯಿತು. ಸೆಕ್ಷನ್ ಘೋಷಣೆಯಾಯಿತು. ಎಲ್ಲೆಲ್ಲೂ ಖಾಕಿ ಸರ್ಪಗಾವಲು. ಅತ್ತ ಪ್ರವೀಣ್ ದೇಹ ನೆಟ್ಟಾರಿನ ಮಣ್ಣಿನಲ್ಲಿ ಮಣ್ಣಾಯಿತು.

ಸ್ವತಃ ಬಿಜೆಪಿ ಸರಕಾರವಿದ್ದಾಗಲೂ ನಡೆದ ಹಿಂದೂ ಕಾರ್ಯಕರ್ತನೊಬ್ಬನ ಹತ್ಯೆ ಮತ್ತು ಘಟನೆಗೆ ನಾಯಕರು ಸ್ಪಂದಿಸಿದ ರೀತಿ ಇಡೀ ವ್ಯವಸ್ಥೆಯ ವಿರುದ್ಧ ಕಾರ್ಯಕರ್ತರ ರೋಷಾವೇಶಕ್ಕೆ ಕಾರಣವಾಯಿತು. ಸಹಜವಾಗಿಯೇ ಪ್ರಕರಣದ ಗಂಭೀರತೆ ಅರಿತ ರಾಜ್ಯ ಸರಕಾರ ಪೊಲೀಸ್ ತನಿಖೆಯನ್ನು ಚುರುಕುಗೊಳಿಸಿತು.

ಸ್ವತಃ ಅಂದಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‌ಕುಮಾರ್ ಅವರೇ ಬೆಳ್ಳಾರೆಗೆ ಧಾವಿಸಿ ಬಂದರು. ತನಿಖಾ ಕಾರ್ಯದ ನೇತೃತ್ವ ವಹಿಸಿದರು. ಹಲವು ಸ್ಥಳೀಯ ಪೊಲೀಸ್ ಅಧಿಕಾರಿಗಳ ತಲೆ ದಂಡವಾಯಿತು. ಘಟನೆಯ ದಿನದಿಂದಲೇ ರಾಷ್ಟ್ರದ ನೂರಾರು ಚಾನೆಲ್‌ಗಳು ನೆಟ್ಟಾರಿನತ್ತ ಕ್ಯಾಮರಾ ತಿರುಗಿಸಿತು. ನೇರ ಪ್ರಸಾರದ ಓ.ಬಿ. ವಾಹನಗಳು ಠಿಕಾಣಿ ಹೂಡಿತು. ಹಲವು ದಿನಗಳ ಕಾಲ ಮಾಧ್ಯಮ ಮಂದಿ ಇಲ್ಲೇ ಬೀಡುಬಿಟ್ಟರು.

ಇತ್ತ ಪ್ರವೀಣ್ ಮೃತದೇಹ ಮಣ್ಣಾದ ನೆಟ್ಟಾರಿನ ಮನೆಗೆ ಜನಪ್ರತಿನಿಧಿಗಳ, ನಾಯಕರುಗಳ, ಗಣ್ಯರ, ಸ್ವಾಮೀಜಿಗಳ ಗಡಣವೇ ಹರಿದು ಬಂತು. ಈ ಪೈಕಿ ಹಲವು ಮಂದಿ ಪ್ರವೀಣ್ ಮನೆಯವರ , ಸ್ಥಳೀಯರ ಆಕ್ರೋಶವನ್ನೂ ಎದುರಿಸಬೇಕಾಯಿತು.

ರಾಜ್ಯದ ಅಂದಿನ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಹೆಚ್.ಡಿ.ಕುಮಾರಸ್ವಾಮಿ, ಗೃಹ ಸಚಿವ ಅರಗ ಜ್ಞಾನೇಂದ್ರ ಸಹಿತ ನಾಯಕರೆಲ್ಲರೂ ಧಾವಿಸಿ ಬಂದು ಮನೆಯವರಿಗೆ ಸಾಂತ್ವಾನ ಹೇಳಿದರು. ಸರಕಾರದಿಂದ, ವಿವಿಧ ಪಕ್ಷಗಳ, ಸಂಘಟನೆಗಳ ವತಿಯಿಂದ ಲಕ್ಷ ಲಕ್ಷಗಳ ಧನ ಸಹಾಯ ಹರಿದು ಬಂತು.

ಆದರೆ ಯಾವ ಸಾಂತ್ವಾನಕ್ಕೂ, ಸಹಾಯಧನಕ್ಕೂ ಪ್ರವೀಣ್ ನೆಟ್ಟಾರು ಎಂಬ ಮನೆಮಗನನ್ನು ಮರಳಿಸುವ ಹಾಗಿರಲಿಲ್ಲ. ಪುತ್ರ ಶೋಕದಿಂದ ತಂದೆ ತಾಯಿ ಜರ್ಝರಿತರಾದರು. ಪತಿಯ ಅಗಲಿಕೆಯಿಂದ ಪತ್ನಿ ನೂತನ, ಮುದ್ದಿನ ತಮ್ಮನ ಅಗಲಿಕೆಗೆ ಸಹೋದರಿಯರು, ಕುಟುಂಬದ ಸದಸ್ಯನಂತಿದ್ದ ಪ್ರವೀಣ್ ಅಗಲಿಕೆಗೆ ಊರವರು ಕಣ್ಣೀರಾದರು.

ಪೊಲೀಸ್ ತನಿಖೆ ಆರಂಭಿಸಿದ ಅಧಿಕಾರಿಗಳು ಆರೋಪಿಗಳ ಹೆಡೆಮುರಿ ಕಟ್ಟಲು ಆರಂಭಿಸಿದರು. ಬಂಧನ ಸತ್ರ ಆರಂಭವಾಯಿತು.

ಅಂದಿಗೆ ಕೆಲವು ದಿನಗಳ ಹಿಂದಷ್ಟೇ ಪಕ್ಕದ ಕಳಂಜದಲ್ಲಿ ಮಸೂದ್ ಎಂಬ ಯುವಕ ಗುಂಪು ಹಲ್ಲೆಗೊಳಗಾಗಿ ಮೃತಪಟ್ಟ ಘಟನೆ ನಡೆದಿದ್ದರಿಂದ ಈ ಘಟನೆಗೆ ತಳುಕು ಹಾಕಲ್ಪಟ್ಟಿತು. ಪೊಲೀಸ್ ಆಧಿಕಾರಿಗಳು ಎಲ್ಲ ಆಯಾಮಗಳಿಂದ ತನಿಖೆ ಶುರುವಿಟ್ಟರು.

ಈ ಮಧ್ಯೆ ಹಲವು ನಾಯಕರ, ಜನರ ಆಗ್ರಹಕ್ಕೆ ಮಣಿದು ಸರಕಾರ ಈ ಪ್ರಕರಣವನ್ನು ಎನ್‌ಐಎ ಗೆ ವಹಿಸಿತು. ಖುದ್ದು ಮುಖ್ಯಮಂತ್ರಿಗಳೇ ನೆಟ್ಟಾರಿನಲ್ಲಿ ಈ ಘೋಷಣೆ ಮಾಡಿದರು. ಎನ್‌ಐಎ ತನಿಖೆಯ ನೇತೃತ್ವ ತೆಗೆದುಕೊಂಡಿತು.
ಬಂಧಿತರಾಗಿದ್ದ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದರು. ಯುಎ(ಪಿ) ಸಹಿತ ಕಠಿಣ ಕಾಯ್ದೆಗಳಡಿ ಆರೋಪಿಗಳ ವಿರುದ್ಧ ಕೇಸು ಜಡಿದರು.

ಹೀಗೆ ಕಾನೂನಿನ ಕುಣಿಕೆ ಒಂದು ಕಡೆಯಾದರೆ ಮತ್ತೊಂದು ಕಡೆ ಪ್ರವೀಣ್ ಕುಟುಂಬದ ಸಹಾಯಕ್ಕೆ ಸರಕಾರ, ಬಿಜೆಪಿ ಪಕ್ಷ, ವಿಶೇಷವಾಗಿ ಸಂಸದರು ಮುಂದಾದರು. ನಳಿನ್‌ಕುಮಾರ್ ಕಟೀಲ್ ಆಸಕ್ತಿಯಲ್ಲಿ ಪ್ರವೀಣ್ ಪತ್ನಿ ನೂತನಾ ಅವರಿಗೆ ತಾತ್ಕಾಲಿಕ ನೆಲೆಯಲ್ಲಿ ಸರಕಾರಿ ನೇಮಕಾತಿ ನಡೆಯಿತು. ಪ್ರವೀಣ್ ಕನಸಾಗಿದ್ದ ಸುಂದರ ಮನೆ ನಿರ್ಮಾಣದ ಜವಾಬ್ದಾರಿಯನ್ನೂ ಸಂಸದರು ವಹಿಸಿದರು. ಕೆಲವೇ ತಿಂಗಳಲ್ಲಿ ಸುಂದರ, ಸುಸಜ್ಜಿತ ಮನೆ ನಿರ್ಮಾಣವಾಗಿ ಗೃಹ ಪ್ರವೇಶವೂ ಸಾಂಗವಾಗಿ ನೆರವೇರಿತು. ಪ್ರವೀಣ್ ಸಮಾಧಿ ಸ್ಥಳದಲ್ಲಿ ಪುತ್ಥಳಿಯನ್ನೂ ನಿರ್ಮಿಸಲಾಯಿತು.

ಇತ್ತ ಹಲವು ಸಮಯದಿಂದ ನಿಷೇಧದ ತೂಗುಗತ್ತಿ ಎದುರಿಸುತ್ತಿದ್ದ ಪಿ.ಎಫ್.ಐ. ಸಹಿತ ಕೆಲವು ಸಂಘಟನೆಗಳ ನಿಷೇಧಕ್ಕೆ ಪ್ರವೀಣ್ ಹತ್ಯೆ ಪ್ರಕರಣ ನಿರ್ಣಾಯಕ ಕಾರಣವಾಯಿತು. ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳೆಲ್ಲ ಪಿ.ಎಫ್.ಐ. ಸಕ್ರಿಯ ಕಾರ್ಯಕರ್ತರಾಗಿರುವುದು ಇದಕ್ಕೆ ಪ್ರಮುಖ ಸಾಕ್ಷ್ಯವನ್ನೊದಗಿಸಿತು. ಅಂತಿಮವಾಗಿ ಪಿ.ಎಫ್.ಐ. ಸಹಿತ ಕೆಲವು ಸಂಘಟನೆಗಳನ್ನು ಕೇಂದ್ರ ಗೃಹ ಇಲಾಖೆ ನಿಷೇಧಿಸಿ ಆದೇಶ ಹೊರಡಿಸಿತು. ರಾಜ್ಯದ ಹಲವು ಕೇಂದ್ರಗಳಲ್ಲಿ ಎನ್.ಐ.ಎ. ದಾಳಿ ನಡೆಸಿತು.
ಅದರ ಪ್ರಮುಖ ನಾಯಕರು ಬಂಧನಕ್ಕೊಳಗಾದರು. ಅವರ ಕಾರ್ಯಚಟುವಟಿಕೆಗಳ ಹಲವು ಕೇಂದ್ರಗಳನ್ನು ಜಫ್ತಿ ಮಾಡಲಾಯಿತು.

ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ಸಂದರ್ಭದಲ್ಲಿ ತಾತ್ಕಾಲಿಕ ನೇಮಕಾತಿ ಪಡೆದಿದ್ದ ಪ್ರವೀಣ್ ಪತ್ನಿ ನೂತನ ಅವರು ಸರಕಾರ ಬದಲಾವಣೆ ಸಂದರ್ಭ ಸಹಜವಾಗಿ ಹುದ್ದೆ ಕಳೆದುಕೊಳ್ಳಬೇಕಾಯಿತು. ಆದರೆ ಸಿದ್ಧರಾಮಯ್ಯ ಸರಕಾರ ನೂತನ ಅವರನ್ನು ಅದೇ ಹುದ್ದೆಯಲ್ಲಿ‌ ಮರು ನೇಮಕಾತಿ ಮಾಡಿತು.

ಪೊಲೀಸ್ ಇಲಾಖೆ ಮತ್ತು ಎನ್.ಐ.ಎ. ಇದುವರೆಗೆ 15 ಆರೋಪಿಗಳನ್ನು ಬಂಧಿಸಿದೆ. ಶಫೀಕ್ ಬೆಳ್ಳಾರೆ, ಝಾಕೀರ್ ಸವಣೂರು, ಆಬೀದ್ ನಾವೂರು, ನೌಫಲ್ ಗೌರಿಹೊಳೆ, ಸದ್ದಾಂ ಪಳ್ಳಿಮಜಲು, ಹ್ಯಾರೀಸ್ ಪಳ್ಳಿಮಜಲು, ಬಶೀರ್, ರಿಯಾಝ್, ಶಿಯಾಬುದ್ದಿನ್, ಇಬ್ರಾಹಿಂ ಷಾ, ತುಫೈಲ್ ಎಂ.ಎಚ್., ಶಾಫಿ ಬೆಳ್ಳಾರೆ, ಇಕ್ಬಾಲ್ ಬೆಳ್ಳಾರೆ, ಶಹೀದ್ ಎಂ., ಸಹಿತ ಹದಿನೈದು ಆರೋಪಿಗಳು ಬಂಧಿತರಾಗಿದ್ದಾರೆ. ಬಂಧಿತರ ಮನೆಗಳಿಂದ ಡಿಜಿಟಲ್ ಸಾಧನಗಳು, ಕರ ಪತ್ರಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಮ್ಮರ್ ಫಾರೂಕ್, ಅಬೂಬಕರ್ ಸಿದ್ದೀಕ್, ಮಹಮ್ಮದ್ ಮುಸ್ತಫ, ಮಹಮ್ಮದ್ ಷರೀಫ್, ಮಸೂದ್ ಕೆ.ಎ. ಇನ್ನೂ ತಲೆಮರೆಸಿಕೊಂಡಿದ್ದಾರೆ.

ತಲೆಮರೆಸಿಕೊಂಡವರಲ್ಲಿ ಕೃತ್ಯದ ಮಾಸ್ಟರ್ ಮೈಂಡ್ ಗಳೂ ಸೇರಿರುವುದರಿಂದ ಇವರನ್ನು ಮೋಸ್ಟ್ ವಾಂಟೆಡ್ ಎಂದು ಎನ್.ಐ.ಎ. ಭಾವಿಸಿದೆ. ಅರಬ್ ರಾಷ್ಟ್ರಗಳಲ್ಲೂ ಪತ್ತೆಗೆ ಬಲೆ ಬೀಸಿದ್ದಾರೆ. ತಲೆಮರೆಸಿಕೊಂಡವರ ಪತ್ತೆಗೆ ಈಗಾಗಲೇ ಲುಕೌಟ್ ನೋಟೀಸ್ ಜಾರಿಗೊಳಿಸಲಾಗಿದೆ. ಸುಳಿವು ನೀಡಿದರೆ ಲಕ್ಷ ಲಕ್ಷ ಬಹುಮಾನ ನೀಡುವುದಾಗಿಯೂ ಘೋಷಿಸಲಾಗಿದೆ. ಶರಣಾಗದಿದ್ದರೆ ಮನೆ ಹಾಗೂ ಆಸ್ತಿಯನ್ನು ಜಫ್ತಿ ಮಾಡಲಾಗುವುದು ಎಂಬ ಘೋಷಣೆಯೂ ಹೊರಬಿದ್ದಿದೆ. ಪ್ರಕರಣದ ತನಿಖೆ ಮಾಡುತ್ತಿರುವ ಎನ್.ಐ.ಎ. ಇಡೀ ಪ್ರಕರಣವನ್ನು ತಾರ್ಕಿಕ‌ ಅಂತ್ಯಕ್ಕೆ ಕೊಂಡೊಯ್ಯಲು ಟೊಂಕ ಕಟ್ಟಿದೆ.

ಈಗಾಗಲೇ ಎನ್.ಐ.ಎ. ಈ ಪ್ರಕರಣದ ದೋಷಾರೋಪಣಾ ಪಟ್ಟಿಯನ್ನು ಜನವರಿ 20 ರಂದು ಎನ್.ಐ.ಎ. ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. 240 ಸಾಕ್ಷಿಗಳ ಹೇಳಿಕೆ ಸಹಿತ 20 ಮಂದಿ ಆರೋಪಿಗಳ ವಿರುದ್ಧ 1500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಹಿಂದೂಗಳಲ್ಲಿ ಭಯ ಹುಟ್ಟಿಸುವ ಸಲುವಾಗಿ ಹತ್ಯೆ ನಡೆಸುವುದು, 2047 ರ ವೇಳೆಗೆ ಇಸ್ಲಾಮಿಕ್ ಸ್ಟೇಟ್ ಸ್ಥಾಪಿಸುವುದಕ್ಕಾಗಿ ಸರ್ವಿಸ್ ಟೀಂ ಮತ್ತು ಕಿಲ್ಲರ್ಸ್ ಸ್ಕ್ವಾಡ್ ಮೂಲಕ ಹತ್ಯೆ ನಡೆಸುವುದು ಆರೋಪಿಗಳ ಉದ್ದೇಶ ಎಂದು ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆ ಬಳಿಕ ಮತ್ತೊಂದು ಪೂರಕ ದೋಷಾರೋಪಣಾ ಪಟ್ಟಿಯನ್ನೂ ಸಲ್ಲಿಸಲಾಗಿದ್ದು ಹತ್ಯೆ ಆರೋಪಿಗಳಿಗೆ ಆಶ್ರಯ ನೀಡಿದ ಬಗ್ಗೆ, ಶಸ್ತ್ರಾಸ್ತ್ರ ತರಬೇತಿ ನಡೆಸಿದ ಬಗ್ಗೆ ಉಲ್ಲೇಖಿಸಲಾಗಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಪ್ರವೀಣ್ ನೆಟ್ಟಾರು ಹತ್ಯೆಗೆ ಇಂದು ಒಂದು ವರ್ಷ ತುಂಬುತ್ತಿದೆ. ಪುತ್ರ ಶೋಕಂ ನಿರಂತರಂ . ಶೇಖರ ಪೂಜಾರಿ – ರತ್ನಾವತಿ ದಂಪತಿ ಮಗನ ನೆನಪಾಗುತ್ತಲೇ ಕಣ್ಣೀರಾಗುತ್ತಾರೆ. ಮನೆ ಸಿಕ್ಕಿದರೂ ಮನೆ ಮಗನಿಲ್ಲವಲ್ಲಾ ಎಂಬ ಕೊರಗು ಅವರದು. ದಾಂಪತ್ಯದ ಸುಖ ಸಂತೋಷ ಅನುಭವಿಸುವ ಮುನ್ನವೇ ಮತಾಂಧ ಶಕ್ತಿಗಳಿಂದ ಹತರಾದ ಪತಿಯ ಅಗಲಿಕೆಯಿಂದ ಪತ್ನಿ ನೂತನ ಇನ್ನೂ ಪೂರ್ಣವಾಗಿ ಚೇತರಿಸಿಲ್ಲ. ಕಷ್ಟಗಳಿಗೆ ಕಣ್ಣಾಗುತ್ತಿದ್ದ ಮುದ್ದಿನ ತಮ್ಮನ ನೆನಪು ಸಹೋದರಿಯರಿಗೆ ಮಾಸುತ್ತಿಲ್ಲ. ಹಿಂದೂ ಸಮಾಜಕ್ಕಾಗಿ ಬಲಿದಾನವಾಗಿದೆ ಎಂಬ ನಂಬಿಕೆಯಿರಿಸಿರುವ ಕಾರ್ಯಕರ್ತರು ಪ್ರವೀಣ್ ನೆನಪಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಲೇ ಇದ್ದಾರೆ.

ಉಸಿರು ನಿಂತರೂ ಪ್ರವೀಣ್ ನೆಟ್ಟಾರು ಎಂಬ ಹೆಸರು ರಾಜ್ಯದಲ್ಲಿ , ರಾಜಕಾರಣದಲ್ಲಿ ಈ ಒಂದು ವರ್ಷದಲ್ಲಿ ಎಂದೂ ಮರೆಯಲಾಗದ, ಮರೆಯಬಾರದ ವಿಪ್ಲವಗಳನ್ನು ಸೃಷ್ಟಿಸಿ ಆಗಿದೆ.

ಎಲ್ಲರನ್ನೂ, ಎಲ್ಲವನ್ನೂ ಗಮನಿಸುವಂತೆ ಪ್ರವೀಣ್ ಪುತ್ಥಳಿ ಮಾತ್ರ ನೆಟ್ಟಾರಿನ ಮಣ್ಣಿನಲ್ಲಿ ನಗು ಮುಖ ಚೆಲ್ಲುತ್ತಿದ್ದ ಪ್ರವೀಣ್ ಮುಖದಂತೆ ಮತ್ತೆ ಮತ್ತೆ ಕಂಗೊಳಿಸುತ್ತಿದೆ.