ನುಡಿದಂತೆ ನಡೆದ ರಾಜ್ಯ ಸರಕಾರ, ಗೃಹಲಕ್ಷ್ಮಿ ಯೋಜನೆ ಲಕ್ಷಾಂತರ ಬಡ ಕುಟುಂಬಗಳಿಗೆ ಆಸರೆಯಾಗಲಿದೆ : ಟಿ ಎಂ ಶಹೀದ್

0

ಕರ್ನಾಟಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಕರ್ನಾಟಕ ರಾಜ್ಯಾದ್ಯಂತ ಇಂದು ಅನುಷ್ಠಾನಕ್ಕೆ ಬಂದ ಗೃಹಲಕ್ಷ್ಮಿ ಯೋಜನೆಯಿಂದಾಗಿ ಲಕ್ಷಾಂತರ ಬಡ ಕುಟುಂಬಗಳಿಗೆ ಸರಕಾರ ಆಸರೆ ನೀಡಿದಂತಾಗಿದೆ ಎಂದು ಕೆಪಿಸಿಸಿ ವಕ್ತಾರ ಟಿ ಎಂ ಶಹೀದ್ ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರು ಚುನಾವಣೆಯ ಪೂರ್ವ ರಾಜ್ಯದ ಜನತೆಗೆ ನೀಡಿರುವಂತಹ ಬಹು ಮುಖ್ಯವಾದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ಮೂರು ಗ್ಯಾರೆಂಟಿಗಳನ್ನು ಅನ್ನಭಾಗ್ಯ ಯೋಜನೆ, ಗ್ರಹ ಜ್ಯೋತಿ ಯೋಜನೆ, ಮಹಿಳಾ ಶಕ್ತಿ ಯೋಜನೆಯನ್ನು ಜನರಿಗೆ ನೀಡುವ ಮೂಲಕ ದೇಶದಲ್ಲಿ ಇತಿಹಾಸವನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.
ಅದೇ ರೀತಿ ಆದಷ್ಟು ಶೀಘ್ರದಲ್ಲಿ ಯುವಕ ಯುವತಿಯರಿಗೆ ನೀಡಿರುವಂತಹ ಮತ್ತೊಂದು ಮಹತ್ಕಾಂಕ್ಷಿ ಯುವ ನಿಧಿ ಯೋಜನೆಯನ್ನು ಜಾರಿಗೆಗೋಳಿಸುವ ಸಿದ್ಧತೆಗಳು ಸರ್ಕಾರದ ವತಿಯಿಂದ ನಡೆಯುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವು ಪ್ರತಿಯೊಂದು ವರ್ಗದವರಿಗೂ ಜಾತಿ ಧರ್ಮ ಭೇದ ಭಾವವಿಲ್ಲದೆ ಯೋಜನೆಗಳನ್ನು ರೂಪಿಸಿಕೊಂಡಿವೆ. ರಾಜ್ಯದ ಜನತೆಯನ್ನು ಅಭಿವೃದ್ಧಿಯತ್ತ ಕೊಂಡೋಗುವುದರ ಜೊತೆಗೆ ರಾಜ್ಯವನ್ನು ಕೂಡ ಅಭಿವೃದ್ಧಿಪಡಿಸುವ ಕಾರ್ಯಗಳನ್ನು ಮಾಡುತ್ತಿದೆ. ಇದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ ಎಂದು ಹೇಳಿದರು.
ಇದೀಗ ಕೇಂದ್ರ ಸರ್ಕಾರವು ಗ್ಯಾಸಿನ ಬೆಲೆಯಲ್ಲಿ ಇನ್ನೂರು ರೂಪಾಯಿ ಕಡಿತಗೊಳಿಸಿರುವುದು ಅದು ದೊಡ್ಡ ಸಾಧನೆ ಏನು ಅಲ್ಲ.

460 ರೂ ಇದ್ದ ಗ್ಯಾಸ್ ಸಿಲೆಂಡರನ್ನು 1090 ರೂ ವರೆಗೆ ಹೆಚ್ಚಿಸಿ ಇದೀಗ ಕೇವಲ ರೂ.200 ಕಡಿಮೆ ಮಾಡಿರುವುದು ಸರಿಯಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ರಾಜ್ಯ ಸರ್ಕಾರಗಳು ಸಿಲೆಂಡರ್ ಬೆಲೆಯನ್ನು 500 ರೂಪಾಯಿಗೆ ಮಾಡಿ ಜನರಿಗೆ ವಿತರಿಸುತ್ತದೆ ಎಂಬ ಮಾತುಗಳು ಕೇಳಿ ಬಂದಾಗ ಈ ರೀತಿಯ ಬೆಲೆ ಕಡಿಮೆ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ.

ಅವರಿಗೆ ಸಾಧ್ಯವಾದರೆ ಗ್ಯಾಸ್ ಸಿಲೆಂಡರ್ ಬೆಲೆಯನ್ನು ಐನೂರು ರೂಪಾಯಿಗೆ, ಮತ್ತು ಪೆಟ್ರೋಲ್ ಬೆಲೆಯನ್ನು 60 ರೂಪಾಯಿಗೆ ತಂದು ನಿಲ್ಲಿಸಲಿ ಎಂದು ಅವರು ಆಗ್ರಹಿಸಿದರು.

ದಿನದಿಂದ ದಿನಕ್ಕೆ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಕೇಂದ್ರ ಸರ್ಕಾರ ಅವರ ಬಗ್ಗೆ ಕಾಳಜಿ ವಹಿಸಲಿ. ಕೇವಲ ಸುಳ್ಳನ್ನೇ ಅಸ್ತ್ರವಾಗಿ ಬಳಸಿಕೊಂಡು ರಾಜಕೀಯ ಮಾಡುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರದ ಚಾಳಿಯಾಗಿದೆ ಎಂದು ಅವರು ಆರೋಪಿಸಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆದು ದೇಶದ ಜನತೆಗೆ ಉತ್ತಮ ಆಡಳಿತವನ್ನು ನೀಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಯೂಥ್ ಕಾಂಗ್ರೆಸ್ ಉಪಾಧ್ಯಕ್ಷ ರಂಜಿತ್ ರೈ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಡವರಿಗೆ ನೀಡಿದ ಗ್ಯಾರೆಂಟಿ ಯೋಜನೆಗಳು ಜಾರಿಗೆ ತರುವ ಮೂಲಕ ಯಶಸ್ವಿ ಆಡಳಿತವನ್ನು ನೀಡುತ್ತಿದೆ. ಕೋಟ್ಯಂತರ ಬಡವರ ಆಶೀರ್ವಾದ ಈ ಸರ್ಕಾರಕ್ಕೆ ಸದಾ ಇರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಅಡ್ವಕೇಟ್ ಮೂಸಾ ಪೈಂಬೆಚ್ಚಾಲು,ಸಿದ್ದೀಕ್ ಕೊಕ್ಕೊ,ಅಡ್ವಕೇಟ್ ಶಿವಪ್ರಸಾದ್, ಸಂದೇಶ್ ಮೇನಾಲ,ಅಡ್ವಕೇಟ್ ರಿಯಾಜ್,ಕೃಷ್ಣಪ್ಪ ಮೆನಾಲ ಉಪಸ್ಥಿತರಿದ್ದರು.