ಸುಳ್ಯದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ : 21 ಶಿಕ್ಷಕರಿಗೆ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪ್ರದಾನ

0

ಶಿಕ್ಷಣ ನೀತಿಯ ಬಗ್ಗೆ ಶಿಕ್ಷಕರು ಮೌನ ಮುರಿಯಬೇಕು : ಕೋಟ ಶ್ರೀನಿವಾಸ ಪೂಜಾರಿ

“ಶಿಕ್ಷಣ ನೀತಿಯ ಕುರಿತ ವಿಚಾರವನ್ನು ರಾಜಕಾರಣಿಗಳ ಪ್ರತಿಷ್ಠೆಗೆ ಬಿಡದೆ, ಶಿಕ್ಷಕರು ಮೌನ ಮುರಿದು ಮಾತನಾಡಬೇಕು. ಶಿಕ್ಷಕರೊಳಗೆ ಚರ್ಚೆ ನಡೆಯಬೇಕು” ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ‌ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸೆ‌.5 ರಂದು ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ವೇದಿಕೆಯಲ್ಲಿ ಜಿಲ್ಲಾಡಳಿತ ‌ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಳಿಕ ಅವರು ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನಗೈದು ಅವರು ಮಾತನಾಡಿದರು.

“ಹೊಸ ಶಿಕ್ಷಣ ನೀತಿಯ ಕುರಿತು ಚರ್ಚೆಗಳಾಗುವ ಈ ದಿನದಲ್ಲಿ ಯಾವ ರೀತಿಯ ಶಿಕ್ಷಣ ಮಕ್ಕಳಿಗೆ‌ ಬೇಕು ಎನ್ನುವುದನ್ನು ಶಿಕ್ಷಕರು ತಿಳಿಸಬೇಕು. ತಾಲೂಕು, ಜಿಲ್ಲಾ ಹಂತದಲ್ಲಿಯೂ ಗುಣ ಮಟ್ಟದ ಚರ್ಚೆಗಳಾಗಬೇಕು ಎಂದ ಅವರು, ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಸರಕಾರ ಎಲ್ಲ ಸವಲತ್ತುಗಳನ್ನು ನೀಡುತ್ತಿದ್ದರೂ ಸರಕಾರಿ ಶಾಲೆಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗೆ ಮುಂದುವರಿದರೆ ಮುಂದಿನ 5 ವರ್ಷದಲ್ಲಿ ರಾಜ್ಯದಲ್ಲಿ ಸುಮಾರು 10 ಸಾವಿರ ಶಾಲೆಗಳು‌ ಮುಚ್ಚಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಉದ್ಘಾಟನೆ ವಹಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಭಾಷಣಗಾರರಾಗಿದ್ದ ಮಂಗಳೂರು ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ವಿಶ್ವನಾಥ ಬದಿಕಾನ ಮಾತನಾಡಿ, “ಶಿಕ್ಷಿಸುವ – ಕ್ಷಮಿಸುವ- ಕಲಿಸುವ ಗುಣ ಶಿಕ್ಷಕರಲ್ಲಿರಬೇಕು. ಶಿಕ್ಷಕರು ಪಾಠ ಮಾಡುವ ಜತೆಗೆ ಮಕ್ಕಳಲ್ಲಿ ಪ್ರತೀ ದಿನ ಮಾತನಾಡಬೇಕು. ಅವರಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ ಕೊಂಡು ತಪ್ಪುಗಳೆಂದು ಕಂಡಾಗ ಆಪ್ತ ಸಲಹೆ ನೀಡುವ ಕೆಲಸವನ್ನು ಶಿಕ್ಷಕರು‌ ಮಾಡಬೇಕು. ಜತೆಗೆ ಒಳ್ಳೆಯ ವಿಚಾರಗಳನ್ನು ತುಂಬಿ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ‌ ಮಾಡುವ ಜವಾಬ್ದಾರಿಯೂ ಶಿಕ್ಷಕರಾದ ನಮ್ಮ ಮೇಲಿದೆ ಎಂದು ಹೇಳಿದರು.

ಸುಬ್ರಹ್ಮಣ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಮಂಗಳೂರು ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂಪದ ನಿಮಿತ್ತ ಸಹ ನಿರ್ದೇಶಕ ಡಾ.ಸಿಪ್ರಿಯನ್ ಮೊಂತೆರೋ,
ಮಂಗಳೂರು ಡಯಟ್ ಪ್ರಾಂಶುಪಾಲರು ಹಾಗೂ ಪದನಿಮಿತ್ತ ಉಪನಿರ್ದೇಶಕಿ ಶ್ರೀಮತಿ ರಾಜಲಕ್ಷ್ಮಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಭುವನೇಶ್, ಸುಳ್ಯ ತಹಶೀಲ್ದಾರ್ ಮಂಜುನಾಥ್, ಸುಳ್ಯ ತಾ.ಪಂ. ಇ.ಒ.‌ರಾಜಣ್ಣ ಹಾಗೂ ಶಿಕ್ಷಕರ ಸಂಘಗಳ ಜಿಲ್ಲಾ ಮತ್ತು ತಾಲೂಕು ಸಂಘಗಳ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಶ್ರೀಮತಿ ಪೂರ್ಣಿಮಾ ಮಡಪ್ಪಾಡಿ ಮತ್ತು ತಂಡ ನಾಡಗೀತೆ, ರೈತ ಗೀತೆ ಹಾಡಿದರು. ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಯಾನಂದ ರಾಮಚಂದ್ರ ನಾಯ್ಕ್ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಈ.ರಮೇಶ್ ಅತಿಥಿಗಳ ಶುಭ‌ನುಡಿ ಓದಿದರು.
ಶಿಕ್ಷಕರಾದ ಶ್ರೀಮತಿ ಆಶಾ ಅಂಬೆಕಲ್ಲು, ಶ್ರೀಮತಿ ಮಮತಾ, ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.