ಜಾಲ್ಸೂರು ಗ್ರಾಮದ ಬೊಳುಬೈಲಿನ ನವಚೇತನ ಯುವಕ ಮಂಡಲದ ವತಿಯಿಂದ 29ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವವು ಬೊಳುಬೈಲಿನ ನವಚೇತನ ಮೈದಾನದಲ್ಲಿ ಸೆ.6ರಂದು ಜರುಗಿತು.
ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ವಾಸುದೇವ ಗೌಡ ಅರ್ಭಡ್ಕ ಅವರು ಉದ್ಘಾಟಿಸಿ, ಶುಭಹಾರೈಸಿದರು. ಯುವಕ ಮಂಡಲದ ಅಧ್ಯಕ್ಷ ಶಶಿಪ್ರಸಾದ್ ಕಾಟೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಜಾಲ್ಸೂರು ವಲಯ ಮೇಲ್ವಿಚಾರಕ ತೀರ್ಥರಾಮ ಹೊಸೊಳಿಕೆ ಉಪಸ್ಥಿತರಿದ್ದರು.
ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಪುರುಷರಿಗೆ ಜಾರುಕಂಬ, ಮಡಿಕೆ ಒಡೆಯುವುದು, ಹಗ್ಗಜಗ್ಗಾಟ, ಬೆಲೂನ್ ಒಡೆಯುವುದು, ಬಲೂನ್ ಓಟ, ಮಹಿಳೆಯರಿಗೆ ಮಡಿಕೆ ಒಡೆಯುವುದು, ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಬೆಲೂನ್ ಒಡೆಯುವುದು, ಬಲೂನ್ ಓಟ, ಮಕ್ಕಳಿಗೆ ಸಂಗೀತ ಕುರ್ಚಿ, ಲಿಂಬೆ ಚಮಚ ಓಟ, ಶ್ರೀಕೃಷ್ಣ ವೇಷ ಸ್ಪರ್ಧೆ, ಕಾಳು ಹೆಕ್ಕುವುದು, ಕಪ್ಪೆ ಓಟ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಅವರು ತುರ್ತು ಕಾರ್ಯಕ್ರಮ ನಿಮಿತ್ತ ಸಮಾರೋಪ ಕಾರ್ಯಕ್ರಮಕ್ಕೆ ಮೊದಲು ಆಗಮಿಸಿ, ಶುಭಹಾರೈಸಿ, ತೆರಳಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಯು.ಮಂ.ಅಧ್ಯಕ್ಷ ಶಶಿಪ್ರಸಾದ್ ಕಾಟೂರು ಅಧ್ಯಕ್ಷತೆ ವಹಿಸಿದ್ದರು .ಮುಖ್ಯ ಅತಿಥಿ ಸ್ಥಾನದಿಂದ ಶಾಸಕಿ ಭಾಗೀರಥಿ ಮುರುಳ್ಯ ಅವರು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಯುವಕ ಮಂಡಲದ ವತಿಯಿಂದ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ 1837 ಸರಣಿ ಉಪನ್ಯಾಸ ಮಾಲಿಕೆಯ ಸಂಪನ್ಮೂಲ ವ್ಯಕ್ತಿಗಳಾದ ಕೆ.ಆರ್. ವಿದ್ಯಾಧರ ಕುಡೆಕಲ್ಲು, ತೇಜಕುಮಾರ್ ಬಡ್ಡಡ್ಕ , ಎ.ಕೆ.ಹಿಮಕರ, ಗೋಪಾಲ ಪೆರಾಜೆ ವಿನೋದ್ ಮೂಡಗದ್ದೆ ಅವರಿಗೆ ನವಚೇತನ ಗೌರವ ಸನ್ಮಾನವನ್ನು ಉಬರಡ್ಕ ಮಿತ್ತೂರು ಮಿತ್ತೂರುಜೋಡು ದೈವಗಳ ಆಡಳಿತ ಮೊಕ್ತೇಸರರಾದ ವೆಂಕಟ್ರಮಣ ಗೌಡ ಕೆದಂಬಾಡಿ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಜನಮೆಚ್ಚುಗೆ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಬೊಳುಬೈಲು ಸ.ಕಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಾಧಮ್ಮ ಅವರನ್ನು ಯುವಕ ಮಂಡಲದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ಕೌಶಿಕ್ ನೆಕ್ರಾಜೆ, ಆಶಿತಾ ನೆಕ್ರಾಜೆ ಅವರಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಸಮಾರೋಪ ಸಮಾರಂಭದ ಬಳಿಕ ಸ್ಥಳೀಯ ಪ್ರತಿಭೆಗಳಿಂದ ಮತ್ತು ಕಲಾಮಂದಿರ ಬೆಳ್ಳಾರೆ ಅರ್ಪಿಸುವ ಕ್ರೇಜಿ ಗೈಸ್ ನೃತ್ಯ ತಂಡದಿಂದ ನೃತ್ಯ ವೈವಿಧ್ಯ ಸಾಂಸ್ಕೃತಿಕ ಸಂಭ್ರಮ ಜರುಗಿತು.