“ರಾಜ ಪರಂಪರೆ, ಸ್ಮಾರಕಗಳು, ಶಾಸನ, ಕೋಟೆ ಕೊತ್ತಲಗಳು, ದೇವಸ್ಥಾನ, ಮಸೀದಿ, ಚರ್ಚ್ ಗಳು, ಗುಡಿ ಗೋಪುರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ, ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಕಾಯ್ದಿರಿಸುವ ಹಿತದೃಷ್ಟಿಯಿಂದ ಪ್ರಾಚ್ಯ ಪ್ರಜ್ಞಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ ಇ ರಮೇಶ್ ಹೇಳಿದರು.
ಅವರು ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ, ಸರಕಾರಿ ಮತ್ತು ಅನುದಾನಿತ ಪ್ರೌಢಶಾಲಾ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ತಾಲೂಕು ಮಟ್ಟದ ಪ್ರಾಚ್ಯ ಪ್ರಜ್ಞಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷರಾದ ಜಯಂತ ಹರ್ಲಡ್ಕ ವಹಿಸಿದ್ದರು. ಅತಿಥಿಗಳಾಗಿ ಸುಳ್ಯ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕರಾದ ಶ್ರೀಮತಿ ನಳಿನಿ ಕೆ, ದೇವಚಳ್ಳ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್ , ಮುಖ್ಯ ಶಿಕ್ಷಕಿ ಸಂಧ್ಯಾ ಕೆ. ಭಾಗವಹಿಸಿದ್ದರು. ಎಸ್.ಡಿ.ಎಂ.ಸಿ. ಸದಸ್ಯರಾದ ಧನಂಜಯ ಬಾಳೆತೋಟ, ಗೋವಿಂದ ಪಿ ಪಿ, ಅಚ್ಚುತ ಮುಂಡೋಕಜೆ ಹಾಗೂ ವಿವಿಧ ಶಾಲೆಯಿಂದ ಆಗಮಿಸಿದ ಶಿಕ್ಷಕರು, ನಿರ್ಣಾಯಕರು ಉಪಸ್ಥಿತರಿದ್ದರು. ಪ್ರಾಚ್ಯ ಪ್ರಜ್ಞಾ ಕಾರ್ಯಕ್ರಮದಲ್ಲಿ ಭಾಷಣ, ಪ್ರಬಂಧ, ಚಿತ್ರಕಲೆ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದು, ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕರಾದ ವಸಂತ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಸುಂದರ ಕೆ. ವಂದಿಸಿದರು. ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಸಹಕರಿಸಿದರು.