ಜನಪ್ರತಿನಿಧಿಗಳು ಮತ್ತು ಪೋಷಕರ ಜತೆ ಮಾತುಕತೆ – ಹಿಂದಿ ಶಿಕ್ಷಕರ ವರ್ಗಾವಣೆಗೆ ಆದೇಶ
ಆಲೆಟ್ಟಿ ಗ್ರಾಮ ಪಂಚಾಯತ್ ಇದರ ದ್ವಿತೀಯ ಹಂತದ ಗ್ರಾಮ ಸಭೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿ ಶಿಕ್ಷಣಾಧಿಕಾರಿ ಬರಲಿಲ್ಲ ಎಂಬ ಕಾರಣಕ್ಕೆ ಸಭೆ ಮುಂದೂಡಲ್ಪಟ್ಟ ಘಟನೆಗೆ ಸಂಬಂಧಿಸಿ ಕ್ಷೇತ್ರಶಿಕ್ಷಣಾಧಿಕಾರಿಯವರು ಇಂದು (ಸೆ.26) ಆಲೆಟ್ಟಿ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿದರು.
ಆಲೆಟ್ಟಿ ಸರಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ ಸುನಿಲ್ ಎಂಬವರ ಮೇಲೆ ಆರೋಪಗಳಿದ್ದು ಅವರನ್ನು ವರ್ಗಾವಣೆ ಮಾಡಬೇಕೆಂದು ಪಟ್ಟು ಹಿಡಿದ ಗ್ರಾಮಸ್ಥರು ಶಿಕ್ಷಣಾಧಿಕಾರಿಯವರನ್ನು ಸಭೆಗೆ ಕರೆಸುವಂತೆ ಆಗ್ರಹಿಸಿದ್ದರು.ಅಧಿಕಾರಿಗಳು ಗ್ರಾಮ ಸಭೆಗೆ ಬರಲಿಲ್ಲವೆಂಬ ಕಾರಣದಿಂದ ಗ್ರಾಮಸ್ಥರ ಒತ್ತಾಯದ ಮೇರೆಗೆ ಅಧ್ಯಕ್ಷರು ಸಭೆಯನ್ನು ಮುಂದೂಡಲ್ಪಟ್ಟರು.
ಈ ಬಗ್ಗೆ ವಿಷಯ ತಿಳಿದ ಶಿಕ್ಷಣಾಧಿಕಾರಿಗಳು ಇಂದು ಶಾಲೆಗೆ ಭೇಟಿ ನೀಡಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಎಸ್.ಡಿ.ಎಂ.ಸಿ ಯವರೊಂದಿಗೆ ಮಾತುಕತೆ ನಡೆಸಿದರು. ಪೋಷಕರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಆರೋಪದಡಿಯಲ್ಲಿ ಹಿಂದಿ ಶಿಕ್ಷಕ ಸುನಿಲ್ ಎಂಬವರನ್ನು ಬೇರೆ ಶಾಲೆಗೆ ಡೆಪ್ಯುಟೇಶನ್ ನಲ್ಲಿ ವರ್ಗಾವಣೆ ಮಾಡುವುದಾಗಿ ತೀರ್ಮಾನಿಸಲಾಯಿತು.
ಪ್ರಸ್ತುತ ಶಾಲೆಗೆ ಗೌರವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ವೀಣಾಕುಮಾರಿ ಆಲೆಟ್ಟಿ, ಸದಸ್ಯರಾದ ಶಿವಾನಂದ ರಂಗತ್ತಮಲೆ, ದಿನೇಶ್ ಕಣಕ್ಕೂರು,ಸೊಸೈಟಿ ನಿರ್ದೇಶಕ ಸುದರ್ಶನ ಪಾತಿಕಲ್ಲು,ಎಸ್.ಡಿ.ಎಂ.ಸಿ.ಅಧ್ಯಕ್ಷ ಗೋಪಾಲಕೃಷ್ಣ, ಮುಖ್ಯಶಿಕ್ಷಕಿವಿಜಯಲಕ್ಷ್ಮಿ,ಹಾಗೂ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.