ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಏಕತಾ ದಿನಾಚರಣೆ ಕಾರ್ಯಕ್ರಮ ಅ.31ರಂದು ಜರಗಿತು. ಕಾರ್ಯಕ್ರಮದಲ್ಲಿ ಏಕತಾ ದಿನಾಚರಣೆಯ ಕುರಿತಾಗಿ ಶಾಲಾ ಶಿಕ್ಷಕ ದೇವಿಪ್ರಸಾದ ಜಿ. ಸಿ ಕಾಯರ್ತೋಡಿ ಮಾತನಾಡಿ “ಸರ್ದಾರ್ ವಲ್ಲಭಭಾಯಿ ಪಟೇಲರು ಪ್ರಾತಃ ಸ್ಮರಣೀಯರಾಗಿದ್ದು, ಭಾರತದ ಬಿಸ್ಮಾರ್ಕ್ ಎನಿಸಿಕೊಂಡಿದ್ದಾರೆ.
ಏಕತೆಯ ಮಂತ್ರವನ್ನು ಪಠಿಸಿ, ಭಾರತದ ಏಕೀಕರಣಕ್ಕೆ ತನ್ನ ಕೊಡುಗೆಯನ್ನು ನೀಡಿದ ಅಪ್ಪಟ ದೇಶಪ್ರೇಮಿ, ಅಜಾತಶತ್ರು ಮತ್ತು ಉಕ್ಕಿನ ಮನುಷ್ಯ ಎಂದೆನಿಸಿಕೊಂಡಿರುವ ಭಾರತದ ಮೊದಲ ಗೃಹ ಸಚಿವ ಮತ್ತು ಉಪ ಪ್ರಧಾನಮಂತ್ರಿಗಳೂ ಆಗಿರುವ ಶ್ರೀ ಸರದಾರ್ ವಲ್ಲಭಭಾಯಿ ಪಟೇಲರ ಕೊಡುಗೆ ಅಪಾರ. ಗುಜರಾತಿನ ಸೂರತ್ ಜಿಲ್ಲೆಯ ಬಾರ್ಡೋಲಿಯಲ್ಲಿ ಬ್ರಿಟಿಷರು ಹೇರಿದ ಅತಿಯಾದ ತೆರಿಗೆಯ ವಿರುದ್ಧ ನಡೆದ ರೈತಪರ ಹೋರಾಟದಲ್ಲಿ ಮುಂದಾಳತ್ವವನ್ನು ವಹಿಸಿದ್ದರು. ಭಾರತದ ಸಂಸ್ಥಾನಗಳ ವಿಲೀನೀಕರಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವುದರ ಮೂಲಕ ಸರದಾರರು ಎನಿಸಿಕೊಂಡರು. ಭಾರತದ ವಿಭಜನೆಯ ಸಂದರ್ಭದಲ್ಲಿ ಪಾರ್ಟಿಶನ್ ಕೌನ್ಸಿಲ್ ನ ಭಾರತದ ಪರವಾದ ಸದಸ್ಯರಾಗಿದ್ದುಕೊಂಡು, ಜಿನ್ನಾರವರು ಹೆಚ್ಚಿನ ಪಾಲನ್ನು ಪಡೆಯದಂತೆ ಜಾಗೃತಿ ವಹಿಸಿದ್ದರು.
ರಾಷ್ಟ್ರ ನಿರ್ಮಾಣದ ಕೆಲಸ ಮಾಡಿರುವ ಇವರ ಪ್ರತಿಮೆಯು ಪ್ರಪಂಚದ ಅತ್ಯಂತ ಎತ್ತರದ ಪ್ರತಿಮೆಯಾಗಿ ನರ್ಮದಾ ನದಿ ತೀರದಲ್ಲಿ ನರೇಂದ್ರ ಮೋದಿ ಅವರಿಂದ 2018ರಲ್ಲಿ ಲೋಕಾರ್ಪಣೆಗೊಂಡದ್ದನ್ನು ನಾವೆಲ್ಲರೂ ಸ್ಮರಿಸಬೇಕು. ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ಎಚ್ಚರದಿಂದಿರಬೇಕಲ್ಲದೆ ಸನ್ನದ್ಧರಾಗಿರಬೇಕು. ಎಲ್ಲವೂ ಇದ್ದೂ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ ದೇಶವು ಪರಕೀಯರ ಪರವಾದಿತು. ಹಾಗಾಗಿ ಸರ್ದಾರ್ ವಲ್ಲಭಭಾಯಿಯವರ ಮಾದರಿ ವ್ಯಕ್ತಿತ್ವವನ್ನು ಅನುಸರಿಸಿಕೊಂಡು ಬದುಕೋಣ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಸವಿತಾ ಎಂ ಮಾತನಾಡಿ “ಸರ್ದಾರ್ ವಲ್ಲಭಭಾಯಿ ಪಟೇಲರ ಜೀವನ ಚರಿತ್ರೆ, ಶಿಸ್ತು, ಸ್ವಾತಂತ್ರ್ಯಕ್ಕೆ ನೀಡಿದ ತ್ಯಾಗ, ಬಲಿದಾನವನ್ನು ಜೀವನದಲ್ಲಿ ಅಳವಡಿಸಿಕೊಂಡು ನಮಗೆ ಸಿಕ್ಕ ಅವಕಾಶದಲ್ಲಿ ದೇಶಕ್ಕಾಗಿ ತಮ್ಮದಾದ ಕೊಡುಗೆಯನ್ನು ನೀಡಬೇಕು.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಕುಮಾರಿ ಲಿಕ್ಷಿತಾ ಅವರು ಸ್ವಾಗತಿಸಿದರು. ಶಿಕ್ಷಕಿ ಕುಮಾರಿ ದಿವ್ಯಶ್ರೀ ಪಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಜಯಂತಿ ಕೆ ಅವರು ನಿರೂಪಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.