ನಾವೂರು ಕಳಪೆ ಕಾಮಗಾರಿ ರಸ್ತೆ ನಿರ್ಮಾಣ ಜಾಗಕ್ಕೆ ಮಂಗಳೂರು ಸಹಾಯಕ ಕಾರ್ಯಪಾಲಕ ಅಭಿಯಂತರರು ಭೇಟಿ

0

ಗುತ್ತಿಗೆದಾರರು ಮತ್ತು ಇಂಜಿನಿಯರ್‌ರನ್ನು ಸ್ಥಳಕ್ಕೆ ಕರೆದು ಕೂಡಲೇ ದುರಸ್ಥಿ ಕಾರ್ಯ ನಡೆಸುವಂತೆ ಸೂಚನೆ

ಸುಳ್ಯ ಸಂತೋಷ್ ಟಾಕೀಸ್ ಬಳಿಯಿಂದ ಬೋರುಗುಡ್ಡೆಗೆ ಸಂಪರ್ಕಿಸುವ ನಾವೂರು ರಸ್ತೆಯನ್ನು ಕಳೆದ 6 ತಿಂಗಳ ಹಿಂದೆ ಕಾಂಕ್ರೀಟಿಕರಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.

ಆದರೆ ಕಾಮಗಾರಿ ಪೂರ್ಣಗೊಂಡು ಕೇವಲ 3 ತಿಂಗಳುಗಳಲ್ಲಿಯೇ ರಸ್ತೆ ಅಲ್ಲಲ್ಲಿ ಬಿರುಕುಗಳು ಮತ್ತು ಸಣ್ಣ ಪುಟ್ಟ ಹೊಂಡಗಳು ನಿರ್ಮಾಣವಾಗಲು ತೊಡಗಿದವು. ಈ ಸಂದರ್ಭದಲ್ಲಿ ಈ ರಸ್ತೆಯ ಕಾಮಗಾರಿಯಲ್ಲಿ ಕಳಪೆ ಕೆಲಸ ಕಾರ್ಯ ನಡೆದಿದೆ ಎಂದು ಸ್ಥಳೀಯ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಈ ವೇಳೆ ಸ್ಥಳೀಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ನಗರ ಪಂಚಾಯತ್ ಮುಖ್ಯ ಅಧಿಕಾರಿಗಳಿಗೆ ಮತ್ತು ಮಂಗಳೂರು ಮುಖ್ಯ ಕಛೇರಿಗೆ ಕಳೆಪೆ ಕಾಮಗಾರಿಯ ಕುರಿತು ದೂರನ್ನು ನೀಡಿದರು.ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಮಾಹಿತಿಯನ್ನು ಪಡೆದು ತೆರಳಿದ್ದರು.

ಇದೀಗ ಮತ್ತೆ ಸ್ಥಳೀಯ ಪಂಚಾಯತ್ ಸದಸ್ಯ ಅಧಿಕಾರಿಯ ಬಳಿ ರಸ್ತೆ ಸರಿಪಡಿಸಿಕೊಡುವಂತೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದಿರುವ ಮಂಗಳೂರು ಜಿಲ್ಲಾಧಿಕಾರಿಯವರ ಕಛೇರಿಯ ನಗರಾಭಿವೃದ್ಧಿ ಕೋಶ ಸಹಾಯಕ ಕಾರ್ಯಪಾಲಕ ಅಭಿಯಂತರರು ಅರುಣ್ ಕೆ. ರಸ್ತೆ ನಿರ್ಮಿಸಿದ್ದ ಗುತ್ತಿಗೆದಾರರು ಮತ್ತು ಇಂಜಿನಿಯರ್‌ರನ್ನು ಸ್ಥಳಕ್ಕೆ ಕರೆದು 2 ತಿಂಗಳೊಳಗೆ ಕಾಮಗಾರಿ ನಡೆಸಿರುವ ಅಷ್ಟೂ ಜಾಗದಲ್ಲಿ 4 ಇಂಚು ಕಾಂಕ್ರೀಟ್ ಅನ್ನು ಗುಣಮಟ್ಟವಾಗಿ ಮರು ಕಾಮಗಾರಿ ಮಾಡಿಕೊಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.