ಎಸ್‌ಎಸ್‌ಪಿಯು ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಸೋಮಶೇಖರ್ ನಾಯಕ್ ಅಭಿಮತ
ಜಗತ್ತಿನಲ್ಲಿ ಬಹು ಭಾಷೆಗಳಲ್ಲಿ ಪರಿಣಿತರಾದರೆ ಮಾತ್ರ ಯಶ ಗಳಿಸಲು ಸಾಧ್ಯವಾಗುತ್ತದೆ. ನಾವು ನಮ್ಮ ನಾಡಭಾಷೆಯ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಕನ್ನಡವನ್ನು ಪ್ರೀತಿಸುತ್ತಾ ಇತರ ಭಾಷೆಗಳ ಮೇಲೆ ಅಭಿಮಾನವನ್ನು ಹೊಂದಿರಬೇಕು. ನಾಡು ನುಡಿಯ ಮೇಲೆ ಅಭಿಮಾನವನ್ನು ಹೊಂದುವುದು ಮನದಾಳದ ಸಂಕಲ್ಪವಾಗಬೇಕು.ಮಾತೃ ಭಾಷೆಯ ಬಗ್ಗೆ ಅಪಾರ ಪ್ರೀತಿ ಹೊಂದಿರುವುದು ಅತ್ಯಗತ್ಯ ಎಂದು ಎಸ್ ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾದ ಆಡಳಿತಕ್ಕೊಳಪಟ್ಟ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಕಂಪಿನ ನಾಡಿನಲ್ಲಿ ಹುಟ್ಟಿದ ನಾವು ಧನ್ಯರು. ನಮಗೆ ಜೀವನಕ್ಕೆ ಆಧಾರವಾದ ಈ ನೆಲದಲ್ಲಿ ಸಂವಹನಕ್ಕಿರುವ ಕನ್ನಡ ಭಾಷೆಯ ಬಗ್ಗೆ ಅಪರಿಮಿತ ಅಭಿಮಾನ ಹೊಂದುವುದು ಜೀವನದ ಗುರಿಯಾಗಬೇಕು.ಆಂಗ್ಲ ಭಾಷಾ ವ್ಯಾಮೋಹವನ್ನು ತ್ಯಜಿಸಿ ಮಾತೃಭಾಷಾ ಅಭಿಮಾನ ಬೆಳೆಸಿಕೊಳ್ಳುವುದು ನಮ್ಮ ಪ್ರಧಾನ ಆಧ್ಯತೆಯಾಗಬೇಕು ಎಂದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಚಿದಾನಂದ ಕಂದಡ್ಕ, ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ಎಂ.ಕೃಷ್ಣ ಭಟ್, ಪ್ರಾಥಮಿಕ ಶಾಲಾ ಮುಖ್ಯಗುರು ಮಾಧವ ಮೂಕಮಲೆ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂಧಿಗಳು, ಪ್ರಾಥಮಿಕ ಶಾಲಾ, ಪ್ರೌಢಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸರ್ವರಿಗೂ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ನೀಡಿದ ರವೆ ಲಾಡನ್ನು ಹಂಚಲಾಯಿತು.
ರಂಗೋಲಿಯಲ್ಲಿ ಕರ್ನಾಟಕದ ಚಿತ್ತಾರ:
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾಲೇಜಿನ ಕ್ರೀಡಾಂಗಣದಲ್ಲಿ ಬೃಹತ್ ರಂಗೋಲಿಯನ್ನು ಹಾಕಲಾಗಿತ್ತು.ಇದರ ಮದ್ಯದಲ್ಲಿ ಕರ್ನಾಟಕದ ಭೂಪಟವನ್ನು ಆಕರ್ಷಕವಾಗಿ ಬಿಡಿಸಲಾಗಿತ್ತು.ಭೂಪಟವನ್ನು ಕೇಂಪು ಮತ್ತು ಹಳದಿ ರಂಗಿನಿಂದ ಅಲಂಕೃತಗೊಳಿಸಲಾಗಿತ್ತು.ಇದರ ಸುತ್ತಲೂ ಬಿಳಿ ರಂಗಿನ ವರ್ತುಲ ನೀಲಿ ರಂಗಿನ ಆವರಣ, ಬಳಿಕ ಹೂವಿನ ದಳಗಳನ್ನು ರಚಿಸಿ ಅದಕ್ಕೆ ಬಿಳಿ, ಹಳದಿ, ನೀಲಿ, ಕೇಸರಿ, ಹಸಿರು ರಂಗವನ್ನು ಹಾಕಿ ಅತ್ಯಾಕರ್ಷಕವಾಗಿ ಬಿಡಿಸಲಾಗಿತ್ತು.ವಿದ್ಯಾರ್ಥಿಗಳು ಬಿಡಿಸಿದ ಈ ಬೃಹತ್ ರಂಗೋಲಿ ರಾಜ್ಯೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
೩೦೦ ವಿದ್ಯಾರ್ಥಿಗಳಿಂದ ನೃತ್ಯ:
ಕಾಲೇಜಿನ ಎನ್‌ಎಸ್‌ಎಸ್, ರೋವರ್ ರೇಂಜರ್‍ಸ್ ಮತ್ತು ರೆಡ್‌ಕ್ರಾಸ್ ವಿಭಾಗದ ಒಟ್ಟು ೩೦೦ ವಿದ್ಯಾರ್ಥಿಗಳು ಕನ್ನಡದ ಹಾಡುಗಳಿಗೆ ನೃತ್ಯ ಮಾಡಿದರು.ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಹೊತ್ತಿತೋ ಹೊತ್ತಿತೋ ಕನ್ನಡದ ದೀಪ, ಒಂದೇ ಒಂದೇ ಕರ್ನಾಟಕ ಒಂದೇ ಗೀತೆಗಳಿಗೆ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಉಳಿದ ವಿದ್ಯಾರ್ಥಿಗಳು ಕನ್ನಡ ಧ್ವಜವನ್ನು ಹಿಡಿದು ಸಂಭ್ರಮಿಸಿದರು.ಅಲ್ಲದೆ ಈ ಹಾಡುಗಳು ಸೇರಿದಂತೆ ಎಲ್ಲಾದರು ಇರು ಎಂತಾದರೂ ಇರು, ಹೆಸರಾಯಿತು ಕರ್ನಾಟಕ ಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದರು.