ಸುಳ್ಯ ಜಟ್ಟಿಪಳ್ಳ ರಸ್ತೆಯ ಪರಿಸ್ಥಿತಿ ಚಿಂತಾಜನಕ
ಸುಳ್ಯದಿಂದ ಜಟ್ಟಿಪಳ್ಳ ಕೊಡಿಯಾಲಬೈಲ್ ಸಂಪರ್ಕ ರಸ್ತೆ ತೀರ ಹದಗೆಟ್ಟು ವರ್ಷಗಳು ಕಳೆದರೂ ರಸ್ತೆಯ ಅಭಿವೃದ್ಧಿ ಪಡಿಸಲು ಸ್ವಲ್ಪವು ಮುತುವರ್ಜಿ ವಹಿಸಲಾಗಿಲ್ಲ.
ಜಟ್ಟಿಪಳ್ಳ ಪರಿಸರದ ಜನರ ಸಮಸ್ಯೆಯನ್ನು ಯಾರಲ್ಲಿ ಹೇಳಬೇಕೆಂದು ಗೊತ್ತಾಗದ ಪರಿಸ್ಥಿತಿ ಸದ್ಯ ಜಟ್ಟಿಪಳ್ಳ ವಾರ್ಡಲ್ಲಿ ನಿರ್ಮಾಣವಾಗಿದೆ.
ಸುಳ್ಯ ಮುಖ್ಯರಸ್ತೆಯಿಂದ ಜಟ್ಟಿಪಳ್ಳ ರಸ್ತೆ ತಿರುವಿನಲ್ಲಿಂದ ಕೊಡಿಯಾಲಬೈಲ್‌ವರೆಗೆ ರಸ್ತೆಯಲ್ಲಿ ವಾಹನ ಸಂಚಾರ ಮಾಡಬೇಕಾದರೆ ಹರಸಾಹಸ ಮಾಡಬೇಕಾಗುತ್ತದೆ. ಕೊಡಿಯಾಲಬೈಲಿನಿಂದ ದುಗಲಡ್ಕದವರೆಗಿನ ಗೋಳನ್ನು ಪರಿಹರಿಸಲು ಆ ಭಾಗದ ಜನ ಹೋರಾಟವನ್ನೇ ಕೈಗೆತ್ತಿಕೊಂಡರೂ ಪ್ರಯೋಜನ ಆಗಲಿಲ್ಲ. ನಾನು ಆ ಬಗ್ಗೆ ಪ್ರಸ್ತಾಪಿಸುತ್ತಿಲ್ಲ. ಇದು ಕೊಡಿಯಾಲಬೈಲ್ – ಸುಳ್ಯ ರಸ್ತೆಯ ಬಗ್ಗೆ ಮಾತ್ರ. ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚಾರ ಮಾಡುತ್ತಾರೆ . ಮಕ್ಕಳು ಕಾಲೇಜು ತಲುಪಬೇಕಾದರೆ ಪಡುವ ಕಷ್ಟ ಅಷ್ಟಿಷ್ಟಲ್ಲ. ಸಂಚರಿಸುವ ವಾಹನಗಳು ಹೊಂಡಗುಂಡಿಯನ್ನು ತಪ್ಪಿಸುವ ಪ್ರಯತ್ನ , ನಡೆದುಕೊಂಡು ಹೋಗುವುದು ತುಂಬಾ ಕಷ್ಟಕರವಾಗಿದೆ.
ಈ ರಸ್ತೆಯಲ್ಲಿ ಮಮತ ಹೋಟೆಲ್ ದಾಟುತ್ತಿದ್ದಂತೆ ಆರಂಭವಾಗುವ ಡಾಮರು ರಸ್ತೆ ಹೊಂಡದ ಮೂಲಕವೇ ಜನರನ್ನು ಸ್ವಾಗತಿಸುತ್ತದೆ. ಮುಂದೆ ದಿನಕರ ಕಾನತ್ತಿಲರವರ ಅಂಗಡಿ ದಾಟುತ್ತಿದ್ದಂತೆ ರಸ್ತೆ ಕಿತ್ತು ಕಿತ್ತು ಹೋಗಿದ್ದು ವಾಹನಗಳು ಕುಲುಕಿಕೊಂಡೇ ಸಾಗಬೇಕು. ಮೂರು ಕಡೆ ರಸ್ತೆಯ ಬದಿಯೂ ಕಿತ್ತು ಹೋಗಿರುವುದರಿಂದ ವಾಹನಗಳು ಗುಂಡಿಗೆ ಬೀಳಲೇಬೇಕು. ಬೊಳಿಯಮಜಲುವರೆಗೂ ಇದೇ ಸ್ಥಿತಿ. ದಿ| ಮೋಹನ ಶೇಟ್ ರವರ ಮನೆಯ ಬಳಿಯಲ್ಲಿರುವ ತಿರುವಿನಲ್ಲಿ ಒಂದು ಮಳೆ ಬಂದರೆ ಸಾಕು ರಸ್ತೆಯಲ್ಲಿ ನೀರು ನಿಂತು ಕೃತಕ ಹೊಳೆ ನಿರ್ಮಾಣವಾಗುತ್ತದೆ.
ಇದೇ ರಸ್ತೆಯಲ್ಲಿ ಮಂದೆ ಸರಕಾರಿ ಪದವಿ ಕಾಲೇಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಛೇರಿ, ದೇವರಾಜ ಅರಸು ಭವನ, ಅತ್ಯುತ್ತಮವಾದ ಸಾರ್ವಜನಿಕ ಸ್ಮಶಾನ, ಪರಿಶಿಷ್ಟ ಜಾತಿಯವರ ಕಾಲನಿ, ಮಹಾತ್ಮ ಗಾಂಧಿ ಪ್ರೌಢಶಾಲೆ, ತಾಲೂಕಿನ ಹೆಮ್ಮೆಯಾಗಿರುವ ಗೌಡರ ಸಮುದಾಯ ಭವನ, ಪಶು ಸಂಗೋಪನೆ ಇಲಾಖೆಯ ಗೋಶಾಲೆ ಮತ್ತು ಗಾಂಧಿವನ , ಸುಳ್ಯಕ್ಕೆ ಗಣ್ಯರು ಬರುವ ಸಂದರ್ಭದಲ್ಲಿ ಹೆಲಿಪ್ಯಾಡ್ ಎಲ್ಲವೂ ಇದೇ ರಸ್ತೆಯಲ್ಲಿ ಸಾಗಿದರೆ ಸಿಗುವಂತಹ ಸ್ಥಳಗಳು.
ಕೊಡಿಯಾಲಬೈಲು ಇಷ್ಟು ಅಭಿವೃದ್ಧಿ ಹೊಂದಿದರೂ ಇಲ್ಲಿ ತೆರಳುವ ರಸ್ತೆ ಮಾತ್ರ ಅಭಿವೃದ್ಧಿ ಕಂಡಿಲ್ಲ.
ನಾಯಕರು ಹೆಲಿಕಾಪ್ಟರ್ ಮೂಲಕ ಬಂದು ಸುಳ್ಯ ನಗರ ತಲುಪಬೇಕಾದರೆ ಇದೇ ರಸ್ತೆಯಲ್ಲಿ ಬರಬೇಕಾರುವುದರಿಂದ ಅವರು ಬರುವಾಗ ಒಮ್ಮೆ ಕಾಟಾಚಾರಕ್ಕೆ ರಸ್ತೆಯ ಹೊಂಡಗುಂಡಿಗಳಿಗೆ ಮಣ್ಣು ತುಂಬಿಸಿ ಕೆಲವು ಕಡೆಗಳಲ್ಲಿ ಸ್ವಲ್ಪ ಡಾಮರು ಹಾಕಿ ಬಿಡುತ್ತಾರೆ. ಮರುದಿನ ಮಳೆ ಸುರಿದರೆ ಅಥವಾ ಮಳೆ ಸುರಿಯದಿದ್ದರೂ ಆ ಮಣ್ಣು ಮತ್ತು ಡಾಮರು ಕಿತ್ತು ಹೋಗಿ ರಸ್ತೆ ಯಥಾಸ್ಥಿತಿಗೆ ತಲುಪುತ್ತದೆ.
ಜನಪ್ರತಿನಿಧಿ ಊರಲ್ಲಿಲ್ಲ
ಚುನಾವಣೆ ಬರುವಾಗ ಎಲ್ಲಾ ರಾಜಕೀಯ ನಾಯಕರು ಜಟ್ಟಿಪಳ್ಳಕ್ಕೆ ಬರುತ್ತಾರೆ. ಭರವಸೆಯ ಪಟ್ಟಿಯನ್ನೇ ಕೊಟ್ಟು ಹೋಗುತ್ತಾರೆ. ಮತ್ತೆ ತಿರುಗಿ ನೋಡುವುದಿಲ್ಲ . ಮತ್ತೆ ಅವರನ್ನು ಕಾಣಸಿಗುವುದು ಮುಂದಿನ ಚುನಾವಣೆ ಸಂದರ್ಭದಲ್ಲಿ ಎಂಬ ಆರೋಪ ಜನರದ್ದು. ಜಟ್ಟಿಪಳ್ಳ ವಾರ್ಡ್ ನ ಪಂಚಾಯತ್ ಸದಸ್ಯರು ಕಳೆದ ಬಾರಿ ಚುನಾವಣೆ ಸ್ಪರ್ಧಿಸಿ ಗೆದ್ದ ನಂತರ ಮದುವೆಯಾಗಿ ಹೋದ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಯೂ ಇಲ್ಲದಂತಾಗಿದೆ. ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಕೊಡಬೇಕಾದವರು ಯಾರು ಎಂಬ ಪ್ರಶ್ನೆ ಎದ್ದಿದೆ.