ಸರಕಾರಿ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ : ಕೆಡಿಪಿ ಸಭೆಯಲ್ಲಿ ಸಮಸ್ಯೆ ಹೇಳಿಕೊಂಡ ಅಧಿಕಾರಿಗಳು

0

ಎಲ್ಲ ಇಲಾಖೆಗಳ ವರದಿ ಕೊಡಿ : ಸದನದಲ್ಲಿ ಪ್ರಸ್ತಾಪಿಸುವೆ : ಶಾಸಕರ ಭರವಸೆ

ಸುಳ್ಯ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ಸರಕಾರಿ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯ ಕುರಿತು ಅಧಿಕಾರಿಗಳು ಸಮಸ್ಯೆ ಹೇಳಿಕೊಂಡ ಹಾಗೂ ಎಲ್ಲ ಇಲಾಖೆಯಲ್ಲಿನ ಸಿಬ್ಬಂದಿಗಳ ಕೊರತೆಯ ಕುರಿತು ವರದಿ ನೀಡಿ ಸದನದಲ್ಲಿ ಪ್ರಸ್ತಾಪಿಸುವೆ ಎಂದು ಶಾಸಕರು ಹೇಳಿದ್ದಾರೆ.

ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದರು. ಬೆಳ್ಳಾರೆ, ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ವರ್ಗಾವಣೆ ಆಗಿದ್ದಾರೆ. ಗುತ್ತಿಗಾರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಉನ್ನತ ವ್ಯಾಸಂಗಕ್ಕೆ ತೆರಳಲು ಬಿಡುಗಡೆ ಆಗಿದ್ದಾರೆ ಎಂದು ಮಾಹಿತಿ ನೀಡಿದರು. ವೈದ್ಯರ ಕೊರತೆಯ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ವೈದ್ಯರ ನೇಮಕಕ್ಕೆ ಮತ್ತೊಮ್ಮೆ ಸಚಿವರ ಗಮನಕ್ಕೆ ತರಲಾಗುವುದು ಎಂದು ಶಾಸಕಿ ಭಾಗೀರಥಿ ತಿಳಿಸಿದರು. ಕೃಷಿ ಇಲಾಖೆ, ಪಶು ವೈದ್ಯಕೀಯ ಇಲಾಖೆ, ಮೆಸ್ಕಾಂ ಸೇರಿ ವಿವಿಧ ಇಲಾಖೆಗಳಲ್ಲಿ ಅಧಿಕಾರಿ, ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇರುವ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ಬಗ್ಗೆ ಪಟ್ಟಿ ನೀಡಲು ಶಾಸಕರು ಸೂಚಿಸಿದರು. ಈ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯುವುದಾಗಿ ಶಾಸಕರು ತಿಳಿಸಿದರು.

ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ರಹಿತ ಮನೆಗಳನ್ನು ಗುರುತಿಸಿ ವಿದ್ಯುತ್ತೀಕರಣ ಮಾಡಲು ಸಭೆಯಲ್ಲಿ ನಿರ್ಣಯ ಮಾಡಲಾಯಿತು. ಈ ಮನೆಗಳನ್ನು ಯಾವುದಾದರೂ ಯೋಜನೆಯಲ್ಲಿ ಸೇರಿಸಿ ವಿದ್ಯುತ್ ಒದಗಿಸಲು ಸರಕಾರದ ಗಮನಕ್ಕೆ ತರಲಾಗುವುದು. ಮೆಸ್ಕಾಂನಲ್ಲಿ ಲೈನ್‌ಮೆನ್, ಸಿಬ್ಬಂದಿಗಳ ಕೊರತೆ ಬಗ್ಗೆ ಪಟ್ಟಿ ನೀಡಲು ಶಾಸಕರು ಸೂಚಿಸಿದರು. ಅಡಿಕೆ ಹಳದಿ ರೋಗ ಬಾದಿತ ಪ್ರದೇಶಗಳಲ್ಲಿ ಪರ್ಯಾಯ ಕೃಷಿ ಬೆಳೆಸಲು ಪೂರಕ ವ್ಯವಸ್ಥೆ, ಸಹಕಾರ ನೀಡಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಸುಳ್ಯ ತಾಲೂಕಿನಲ್ಲಿ ಹೊಸತಾಗಿ 43 ಶಿಕ್ಷಕರ ನೇಮಕ ಆದೇಶ ಆಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತೆಯ ಭಾಗವಾಗಿ ಶಾಲೆಗಳಲ್ಲಿ ವಿಶೇಷ ತರಗತಿ, ಮೋಟಿವೇಷನ್ ಕ್ಲಾಸ್‌ಗಳು ನಡೆಯುತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಭೆಗೆ ತಿಳಿಸಿದರು. ಕುಡಿಯುವ ನೀರಿನ ಸರಬರಾಜಿಗೆ ಆದ್ಯತೆಯ ಮೇರೆಗೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ನಿರ್ದೇಶನ ನೀಡಿದರು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ ನೀಡಿದರು. ಎಲ್ಲಾ ಇಲಾಖೆಗಳು ಬಂದಿರುವ ಅನುದಾನ ಲ್ಯಾಪ್ಸ್ ಆಗದಂತೆ ಎಚ್ಚರ ವಹಿಸಿ ಎಂದು ಶಾಸಕರು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಹಶೀಲ್ದಾರ್ ಜಿ.ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.