ಕನ್ನಡ ಗೆಳೆಯರ ಬಳಗ ಬೆಂಗಳೂರು ಮತ್ತು ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ ಇವರ ಜಂಟಿ ಆಯೋಗದಲ್ಲಿ ನ.27ರಂದು ಸುಳ್ಯ ತಾಲೂಕು ಮಟ್ಟದ ಕಥೆ ರಚನೆ ಮತ್ತು ವಾಚನ ಸ್ಪರ್ಧೆ ನಡೆಯಿತು.
16 ಶಾಲೆಗಳಿಂದ 33 ವಿದ್ಯಾರ್ಥಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕನ್ನಡ ಗೆಳೆಯರ ಬಳಗದ ಅಧ್ಯಕ್ಷರಾಗಿರುವ ರಾ. ನಂ. ಚಂದ್ರಶೇಖರ ರವರು ಮಾತನಾಡಿ “ಕರ್ನಾಟಕ ಸರ್ಕಾರಕ್ಕೆ ಕನ್ನಡವನ್ನು ಉಳಿಸಲು ಸಾಧ್ಯವಿಲ್ಲ. ಅದನ್ನು ನಾವು ಮಾಡಬೇಕು. ಅಂತಹ ಕಾರ್ಯವನ್ನು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮಾಡಿ ತೋರಿಸಿದ್ದಾರೆಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಬಳಿಕ ಶಾಲೆಗೆ ಪುಸ್ತಕ ಕೊಡುಗೆಯನ್ನು ನೀಡಿದರು. ನಾವು ಕನ್ನಡವನ್ನು ಮಾತನಾಡುವುದರಿಂದ ಎಲ್ಲರಿಗೂ ತಿಳಿಯುವಂತಾಗುತ್ತದೆ. ಆ ಮೂಲಕ ಕನ್ನಡ ಉಳಿಯುತ್ತದೆ” ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಸಂಚಾಲಕರಾಗಿರುವ ಡಾ. ವಿದ್ಯಾ ಶಾಂಭವ ಪಾರೆ ಇವರು ಕನ್ನಡವನ್ನು ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು. ಶ್ರೀಮತಿ ಹೇಮಲತಾ ಗಣೇಶ ಅವರು ತೀರ್ಪುಗಾರರ ನೆಲೆಯಲ್ಲಿ ಮಾತನಾಡಿ “ಕನ್ನಡ ಕಥಾ ರಚನೆ ಮತ್ತು ವಾಚನ ಸ್ಪರ್ಧೆ ಒಂದು ಒಳ್ಳೆಯ ಸ್ಪರ್ಧಾ ಕಾರ್ಯಕ್ರಮವಾಗಿದೆ. ಈ ಸ್ಪರ್ಧೆಯಿಂದ ಕಥಾ ರಚನೆ ಸಾಮರ್ಥ್ಯ ಮಾತ್ರವಲ್ಲದೆ ಅದನ್ನು ವಾಚಿಸುವ ಕೌಶಲ್ಯವು ಉತ್ಕೃಷ್ಟಗೊಳ್ಳುತ್ತದೆ. ಎಲ್ಲಾ ಬರಹಗಳು ಕಥೆಯಾಗಲಾರವು. ಬರೆದ ಕಥೆಗಳು ವಾಚನ ಪ್ರಬುದ್ಧತೆಯ ಆಧಾರದಲ್ಲಿ ನಿರ್ಧರಿತವಾಗುತ್ತವೆ. ಇಂತಹ ಸ್ಪರ್ಧೆಗಳ ಮೂಲಕ ಕನ್ನಡ ಉಳಿಸುವ ಕಾರ್ಯ ಶ್ಲಾಘನೀಯ. ವಸುಂಧರೆಯ ಮಡಿಲಿನಲ್ಲಿನ ಸ್ವರ್ಣ ಜಗತ್ತಿಗೆ ಕಾಣಲು ಅದನ್ನು ತಿದ್ದಿಡಬೇಕು, ಹೀಗೆ ನಿಮ್ಮನ್ನು ತಿದ್ದಲು ಶಿಕ್ಷಕರಿದ್ದಾರೆ, ಆ ಮೂಲಕ ನಿಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು” ಎಂದು ಅವರು ಹೇಳಿದರು. ತೀರ್ಪುಗಾರರಾಗಿ ಭಾಗವಹಿಸಿದ್ದ ಯೋಗೀಶ್ ಹೊಸೊಳಿಕೆ ಇವರು ಕಥಾ ರಚನೆ ಮತ್ತು ವಾಚನ ಸ್ಪರ್ಧೆಯ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಸ್ಪರ್ಧೆಯಲ್ಲಿ ಶಿಷ್ಮಾ ಡಿ .ಎಲ್ ( 09ನೇ ತರಗತಿ ) ಸ. ಪ್ರೌ. ಶಾಲೆ ಮರ್ಕಂಜ ಪ್ರಥಮ, ಇಂಚರ ಎಂ ( 09ನೇ ತರಗತಿ ) ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕ ದ್ವಿತೀಯ, ತೃಷಾ ಎನ್. ಡಿ ( 10ನೇ ತರಗತಿ ) ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ತೃತೀಯ ಬಹುಮಾನಗಳನ್ನು ಪಡೆದುಕೊಂಡರೆ, ಅನನ್ಯ ಸಿ ಎನ್ ( 09ನೇ ತರಗತಿ ) ಪಯಸ್ವಿನಿ ಪ್ರೌಢ ಶಾಲೆ ಹಾಗೂ ಯೋಗಿತಾ ಎಸ್ ( 10ನೇ ತರಗತಿ )ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕ ಇವರು ಪ್ರೋತ್ಸಾಹಕ ಬಹುಮಾನವನ್ನು ಪಡಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ “ಬರಹ ಎಂದರೆ ಪ್ರಬಂಧ. ಸಾಹಿತ್ಯದಲ್ಲಿ ಹಲವು ವಿಧಗಳಿವೆ. ಅದರಲ್ಲಿ ಕಥಾ ರಚನೆಯೂ ಒಂದು. ಯಾವುದನ್ನು ಹೇಗೆ ಬರೆಯಬೇಕು, ಯಾವುದು ಯಾವ ಪ್ರಕಾರಕ್ಕೆ ಸೇರಿದೆ ಎಂದು ಅರ್ಥೈಸಿಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಾಗ ಸಾಹಿತ್ಯ ಬೆಳೆಯುತ್ತದೆ” ಎಂದರು. ಕನ್ನಡ ಬಳಗ ಬೆಂಗಳೂರು ಇದರ ಅಧ್ಯಕ್ಷರಾಗಿರುವ ರಾನಂ ಚಂದ್ರಶೇಖರ ರವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಇವರು ಸ್ವಾಗತಿಸಿದರು. ಶಾಲಾ ಸಹ ಶಿಕ್ಷಕಿ ಶ್ರೀಮತಿ ಜಯಂತಿ ಕೆ ವಂದಿಸಿದರು. ಶಿಕ್ಷಕ ದೇವಿಪ್ರಸಾದ ಜಿ ಸಿ ಕಾಯರ್ತೋಡಿ ಇವರು ನಿರೂಪಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.