ಸರಕಾರಿ ನೌಕರರು ಫಲಾಪೇಕ್ಷೆ ಇಲ್ಲದೆ ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿದರೆ ಒತ್ತಡ ಆಗುವುದಿಲ್ಲ : ಸರಕಾರಿ ನೌಕರರ ಸಂಘದ ಮಹಾಸಭೆಯಲ್ಲಿ ಡಾ| ನಿತಿನ್ ಪ್ರಭು

0

”ಸರಕಾರಿ ನೌಕರರು ಫಲಾಪೇಕ್ಷೆ ಇಲ್ಲದೆ, ತಮಗೆ ಇರುವ ಕೆಲಸವನ್ನು ಸಮರ್ಪಕವಾಗಿ ಕೆಲಸ ನಿರ್ವಹಿಸಿದರೆ ಒತ್ತಡ ಎಂದಿಗೂ ಆಗುವುದಿಲ್ಲ. ಸರಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಸಿಗುವುದು ಸರಕಾರಿ ನೌಕರರಿಗೆ ಮಾತ್ರ ಇದು ನಮ್ಮ ಯೋಗ” ಎಂದು ಸುಳ್ಯ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ| ನಿತಿನ್ ಪ್ರಭು ಹೇಳಿದರು.

ಡಿ.೯ರಂದು ಸುಳ್ಯ ತಾಲೂಕು ಪಂಚಾಯತ್ ನಲ್ಲಿ ನಡೆದ ತಾಲೂಕು ಸರಕಾರಿ ನೌಕರರ ಸಂಘದ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

“ಕೆಲವು ಸಲ ಕಚೇರಿಗಳಲ್ಲಿ ಅಟೆಂಡರ್‌ನಿಂದ ಹಿಡಿದು ಕಚೇರಿಯ ಎಲ್ಲ ಕೆಲಸವನ್ನು ಒಬ್ಬನೇ ಮಾಡುವ ಸಂದರ್ಭ ಬರುತ್ತದೆ. ಆಗ ಆತ ಒತ್ತಡಕ್ಕೆ ಒಳಗಾಗಬಹುದು. ಆಗಲೂ ಕೂಡಾ ದೃತಿಗೆಡದೆ ಈ ಉದ್ಯೋಗ ನಮ್ಮ ಯೋಗ ಎಂದು ಭಾವಿಸೋಣ. ಜನರಿಗೆ ನಗುಮೊಗದ ಸೇವೆ ನೀಡೋಣ. ಒಬ್ಬ ಫಲಾನುಭವಿ ತನ್ನ ಕೆಲಸಕ್ಕೆ ಅರ್ಜಿ ನೀಡಲು ಮತ್ತು ಕೆಲಸ ಆದಾಗ ಅದನ್ನು ಪಡೆಯಲು ಹೀಗೆ ಎರಡೇ ಸಲ ಬರುವಂತೆ ನಾವು ಮಾಡಬೇಕು. ಆಗ ಅಧಿಕಾರಿಗಳು ಕೂಡಾ ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲು ಸಾಧ್ಯ” ಎಂದವರು ಹೇಳಿದರು.

ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಮಂಜಿನಾಥ್, ರಾಜ್ಯ ಪರಿಷತ್ ಸದಸ್ಯ ಪೃಥ್ವಿ ಕುಮಾರ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸೂಫಿ ಪೆರಾಜೆ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್ ಯು.ಕೆ. ವೇದಿಕೆಯಲ್ಲಿದ್ದರು.

ಬೆಳಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಕೆಲಸದ ಒತ್ತಡದ ನಡುವೆ ನೌಕರರ ಆರೋಗ್ಯ ಕಾಳಜಿ ಕುರಿತು ನಿವೃತ್ತ ಆರೋಗ್ಯ ಮೇಲ್ವಿಚಾರಕ ಜಯರಾಮ ಪೂಜಾರಿ ಮಾಹಿತಿ ನನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ. ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ| ನಂದಕುಮಾರ್ ಇದ್ದರು.

ಕಾರ್ಯದರ್ಶಿ ಧನಲಕ್ಷ್ಮೀ ಕುದ್ಪಾಜೆ ವರದಿ ಮಂಡಿಸಿದರು. ಕೋಶಾಧಿಕಾರಿ ಮಹದೇವಸ್ವಾಮಿ ಎಮ್ ಲೆಕ್ಕಪತ್ರ ಮಂಡಿಸಿದರು. ಆರೋಗ್ಯ ಇಲಾಖೆಯ ಶ್ರೀಮತಿ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಭವಾನಿ ವಂದಿಸಿದರು.