ನಮ್ಮೂರ ಕ್ರಿಕೆಟ್ ಹಬ್ಬದ ಚಾಂಪಿಯನ್ – ಟೀಂ ಕುಡೆಂಬಿ ಬುಲ್ಡೋಜರ್ಸ್ , ರನ್ನರ್ ಅಪ್ – ಏಣಾವರ ಟೈಟಾನ್ಸ್
ಆಲೆಟ್ಟಿ ಕ್ರಿಕೆಟ್ ಬೋರ್ಡ್ ಮತ್ತು ಹಳೆ ವಿದ್ಯಾರ್ಥಿಗಳ ಸಂಘ ಕೋಲ್ಚಾರು ಇದರ ಸಹಯೋಗದಲ್ಲಿ ಆಲೆಟ್ಟಿ ಗ್ರಾಮದ 8 ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ( ನಮ್ಮೂರ ಕ್ರಿಕೆಟ್ ಹಬ್ಬ) ಇದರ ಸಮಾರೋಪ ಸಮಾರಂಭವು ಕೋಲ್ಚಾರು ಶಾಲಾ ಮೈದಾನದಲ್ಲಿ ಎ.ಪಿ.ಎಲ್ ಸಮಿತಿ ಅಧ್ಯಕ್ಷ ಹರೀಶ್ ಕೊಯಿಂಗಾಜೆ ಯವರ ಅಧ್ಯಕ್ಷತೆಯಲ್ಲಿ ಡಿ.10 ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ ಆಲೆಟ್ಟಿ, ಶಾಲಾ ಎಸ್ .ಡಿ .ಎಂ. ಸಿ ಅಧ್ಯಕ್ಷ ಸುದರ್ಶನ ಪಾತಿಕಲ್ಲು, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಶ್ರೀಪತಿ ಭಟ್ ಮಜಿಗುಂಡಿ, ಪಂಚಾಯತ್ ಸದಸ್ಯೆ ಶಂಕರಿ ಕೊಲ್ಲರಮೂಲೆ, ಮೊಗ್ರೋಡಿ ಕನ್ಸ್ಟ್ರಕ್ಷನ್ ಇಂಜಿನಿಯರ್ ದಾಮೋದರ್ ಎಂ .ಕೆ, ಪಂಚಾಯತ್ ಮಾಜಿ ಸದಸ್ಯ ಸೀತಾರಾಮ ಕೊಲ್ಲರಮೂಲೆ, ಯುವ ನ್ಯಾಯವಾದಿ ಸತೀಶ್ ಕುಂಭಕೋಡು, ಯುವಜನ ಸಂಯುಕ್ತ ಮಂಡಳಿ ಕೋಶಾಧಿಕಾರಿ ದಯಾನಂದ ಪಾತಿಕಲ್ಲು, ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಶಸ್ ಕೊಯಿಂಗಾಜೆ ಸ್ವಾಗತಿಸಿದರು. ಪ್ರದೀಪ್ ಕೊಲ್ಲರಮೂಲೆ ವಂದಿಸಿದರು. ನಿರಂತ್ ದೇವಸ್ಯ ಕಾರ್ಯಕ್ರಮ ನಿರೂಪಿಸಿದರು.
ಡಿ.9 ರಂದು ಪಂದ್ಯಾಟವು ಬೆಳಗ್ಗೆ ಪ್ರಾರಂಭಗೊಂಡು ರಾತ್ರಿ ತನಕ ನಡೆಯಿತು. ರಾತ್ರಿ ವೇಳೆಯಲ್ಲಿ ವಿಪರೀತ ಮಳೆಯ ಕಾರಣದಿಂದಾಗಿ ಪಂದ್ಯಾಟವು ಸ್ಥಗಿತಗೊಂಡಿತು.
ಮೈದಾನದಲ್ಲಿ ನೀರು ತುಂಬಿದ್ದು ಅದನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಸ್ಥಳೀಯ ಯುವಕರು ನಿರತರಾದರು. ಮರುದಿನ ಮಧ್ಯಾಹ್ನದ ವೇಳೆಗೆ ಮೈದಾನವು ಸಿದ್ಧ ಗೊಂಡ ನಂತರ ಪಂದ್ಯಾಟವನ್ನು ಮುಂದುವರಿಸಲಾಯಿತು.
ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟವು ಡಿ.11 ರಂದು ಮುಂಜಾನೆ ಮುಕ್ತಾಯಗೊಂಡಿತು.
ಎರಡು ದಿನಗಳ ಕಾಲ ಗ್ರಾಮದ 8 ತಂಡಗಳ ಮಧ್ಯೆ ನಡೆದ ಲೀಗ್ ಮಾದರಿಯ ಪಂದ್ಯಾಟದ ಫೈನಲ್ ಪ್ರವೇಶಿಸಿದ ಟೀಮ್ ಕುಡೆಂಬಿ ಬುಲ್ಡೋಜರ್ಸ್ ಮತ್ತು ಏಣಾವರ ಟೈಟಾನ್ಸ್ ಮಧ್ಯೆ ಜಿದ್ದಾ ಜಿದ್ದಿನ ಪೈಪೋಟಿಯೊಂದಿಗೆ ಸಮಬಲದ ಹೋರಾಟದ 33 ಅಂಕಗಳನ್ನು ಗಳಿಸಿಕೊಂಡಿತು. ನಿರ್ಣಾಯಕರ ತೀರ್ಮಾನದಂತೆ ಸೂಪರ್ 1 ಓವರ್ ಪಂದ್ಯವನ್ನು ನಡೆಸಲಾಯಿತು.
ಈ ಪಂದ್ಯದಲ್ಲಿ ಟೀಂ ಕುಡೆಂಬಿ ತಂಡವು14 ಸ್ಕೋರ್ ಗಳಿಸಿಕೊಂಡು ಚಾಂಪಿಯನ್ ಪಟ್ಟಕ್ಕೇರಿತು. ಬೆಳ್ಳಂಬೆಳಗ್ಗೆ ನಡೆದ ಸಮಾರಂಭದಲ್ಲಿ ವಿಜೇತರಾದ ತಂಡಗಳಿಗೆ ಪ್ರಶಸ್ತಿ ನಗದು ಹಾಗೂ ಟ್ರೋಫಿ ನೀಡಲಾಯಿತು.