ಸಮಾಜ ಸೇವಕ ನವೀನ್ ಸಾರಕರೆ ಅವರಿಗೆ ಸಮಾಜ ಸೇವಾರತ್ನ ಪ್ರಶಸ್ತಿ

0

ಐವರ್ನಾಡು ಗ್ರಾಮದ ಸಾರಕರೆಯ ನವೀನ್ ಕುಮಾರ್ ಅವರಿಗೆ ಆರ್ ಪಿ ಕಲಾ ವೇದಿಕೆಯು ಸಮಾಜ ಸೇವಾರತ್ನ ಪ್ರಶಸ್ತಿ ಯನ್ನು ನೀಡಿ ಗೌರವಿಸಿತು.ಡಿ. 10 ರಂದು ಪೆರ್ಲಂಪಾಡಿಯಲ್ಲಿ ನಡೆದ
ಗಾನ ಶಾರದೆ ಸ್ಪರ್ಧೆಯ ಅಂತಿಮ ಸುತ್ತಿನ ವೇದಿಕೆಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುಳ್ಯದ ಮಾಜಿ ಸಚಿವರಾದ ಎಸ್. ಅಂಗಾರ, ಆರ್ ಪಿ ಕಲಾ ವೇದಿಕೆಯ ಅಧ್ಯಕ್ಷರಾಗಿರುವ ರವಿ ಪಾಂಬಾರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


ಶ್ರೀಮತಿ ಸುಶೀಲಾ ಮತ್ತು ಶೇಷಪ್ಪ ಪೂಜಾರಿ ಇವರ ಪುತ್ರರಾದ ನವೀನ್ ಕುಮಾರ್ ಸಾರ ಕರೆಯವರು ಐವರ್ನಾಡು ಗ್ರಾಮದ ಸಾರಕರೆ ಕುಟುಂಬದವರು.ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಕಾನದ ಎಸ್ ಡಿ ಎಂ ಸಿ ಸಮಿತಿಯಲ್ಲಿ 5 ವರುಷಗಳ ಕಾಲ ಅಧ್ಯಕ್ಷರಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು.

ಶಾಲೆಗೆ ಆಟದ ಮೈದಾನ, ಸ್ಮಾರ್ಟ್ ಕ್ಲಾಸ್, ಸುಂದರ ಉದ್ಯಾನವನ, ಆಕರ್ಷಣೀಯ ನಲಿಕಲಿ ಕೊಠಡಿ,ಶಾಲೆಗೆ ಮೇಲ್ಛಾವಣಿ,ಎನ್ ಎಸ್ ಎಸ್ ಶಿಬಿರದ ಆಯೋಜನೆ, ಕ್ರೀಡೋತ್ಸವ, ಪ್ರತಿಭಾ ದಿನಾಚರಣೆ, ದಾನಿಗಳಿಂದ ಶಾಲಾ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ, ಇವೆಲ್ಲವೂ ಶಾಲೆಗೆ ನೀಡಿದ ಅಮೂಲ್ಯ ಕೊಡುಗೆಗಳು. ಮೂರು ಬಾರಿ ಐವರ್ನಾಡು ಗ್ರಾಮ ಪಂಚಾಯತ್ ಸದಸ್ಯರಾಗಿ, ಮತ್ತು ಅಧ್ಯಕ್ಷರಾಗಿ ಆಯ್ಕೆಯಾಗಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.ಅಲ್ಲದೇ ಎ ಪಿ ಎಂ ಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಒಕ್ಕೂಟ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಳ್ಳಾರೆ ಜನಜಾಗೃತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇವರ ಅಧಿಕಾರ ಅವಧಿಯಲ್ಲಿ ಊರಿನ ಸರಕಾರಿ ಶಾಲೆ ಹಾಗೂ ಅಭಿವೃದ್ಧಿ ಕಾರ್ಯಗಳು ಇವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಗ್ರಾಮ ಪಂಚಾಯತಿನಿಂದ ಗ್ರಾಮದ ಸರ್ವತೋಮುಖ ಅಭಿವೃದ್ಧಿಯನ್ನು ಮಾಡಿರುತ್ತಾರೆ, ವಾರ್ಡಿನ ಮೂಲಭೂತ ಸೌಕರ್ಯವನ್ನು ಒದಗಿಸಿಕೊಟ್ಟಿರುತ್ತಾರೆ. ತನ್ನ ಎಳೆಯ ವಯಸಿನಲ್ಲೇ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಅನೇಕ ಬಡವರ ಪಾಲಿಗೆ ಅಭಿವೃದ್ಧಿಯ ಹರಿಕಾರರಾಗಿದ್ದಾರೆ..ಇವರು ಐವರ್ನಾಡು ಸಾರಕರೆಯಲ್ಲಿ ಪತ್ನಿ ಶ್ರೀಮತಿ ಕಿಶೋರಿ ಮಕ್ಕಳಾದ ಕುಮಾರಿ ಪೂರ್ವಿಕ ಮತ್ತು ಬೇಬಿ ಧನ್ವಿ ಇವರೊಂದಿಗೆ ವಾಸವಾಗಿದ್ದಾರೆ.