ಕೊಡಗು ಮತ್ತು ದ.ಕ.ಗೌಡ ಸಮಾಜ ಬೆಂಗಳೂರು ಇದರ ವತಿಯಿಂದ ಅರೆಭಾಷೆ ದಿನಾಚರಣೆ ಆಚರಣೆ

0

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇದರ ವತಿಯಿಂದ ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರ, ಲಗ್ಗೆರೆ, ಬೆಂಗಳೂರು ಇಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಜನಾಂಗದ ಬಾಂಧವರೆಲ್ಲರು ಸೇರಿ ಡಿ.15 ರಂದು ಅರೆಭಾಷೆ ದಿನಾಚರಣೆಯನ್ನು ಆಚರಿಸಿದರು.

ಸಮಾಜದ ಅಧ್ಯಕ್ಷರಾದ ಪಾಣತ್ತಲೆ ಪಳಂಗಪ್ಪ ರವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜ ಬಾಂಧವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ವಿಶ್ವನಾಥ ಎಡಿಕೇರಿ ಅವರು ಮಾತನಾಡಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ದಶಂಬರ 15, 2011 ಪ್ರಾರಂಭವಾದ ದಿನವನ್ನು ಅರೆಭಾಷೆ ದಿನವಾಗಿ ಆಚರಿಸುವುದು ನಮ್ಮ ಭಾಷೆ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಯಲ್ಲಿ ಸಹಕಾರಿಯಾಗುವುದು.

ನಮ್ಮ ಮಕ್ಕಳ ಜೊತೆ ಅರೆಭಾಷೆಯಲ್ಲಿ ಮಾತನಾಡಿ ಸಂಸ್ಕೃತಿ ಬೆಳೆಸುವಲ್ಲಿ ನಮ್ಮ ಜವಾಬ್ದಾರಿ ಇದೆ ಎಂದು ಹೇಳಿದರು. ಅತಿಥಿಗಳಾದ ಅಡ್ಕಾರು ಹೂವಪ್ಪ ಗೌಡರು ಮಾತನಾಡಿ ಅರೆಭಾಷೆಯು ಅಳಿವಿಂಚಿನಲ್ಲಿದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ಇದರೊಂದಿಗೆ ಹಲವು ಅರೆಭಾಷೆ ಗಾದೆಗಳನ್ನು ಮೆಲುಕು ಹಾಕಿದರು. ಇನ್ನೊಬ್ಬ ಅತಿಥಿ ತೆಕ್ಕಡೆ ಕಾವೇರಪ್ಪನವರು ಅರೆಭಾಷೆ ದಿನಾಚರಣೆಯ ಶುಭಾಶಯ ಗಳನ್ನು ತಿಳಿಸಿ ಹಲವು ಅರೆಭಾಷೆ ಗಾದೆ ಮಾತುಗಳಿಂದ ಸಭಿಕರನ್ನು ರಂಜಿಸಿದರು.


ಕು. ಭೂಮಿಕಾ ಉಳುವಾರ್ ಬಂಟೊಡಿ ಕಾರ್ಯಕ್ರಮ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ನಾಗೇಶ್ ಉಳುವಾರ್ ಬಂಟೋಡಿ ವಂದನಾರ್ಪಣೆಗೈದರು.