ನಾಗಪಟ್ಟಣ ಸೇತುವೆಯ ಬಳಿ ಹಾಕಿದ ತ್ಯಾಜ್ಯವನ್ನು ಹಾಕಿದವರಿಂದಲೇ ತೆರವುಗೊಳಿಸಿದ ಆಲೆಟ್ಟಿ ಪಂಚಾಯತ್ –

0

ತ್ಯಾಜ್ಯ ಹಾಕಿದವರಿಗೆ ರೂ.10 ಸಾವಿರ ದಂಡ

ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗಪಟ್ಟಣ ಪಯಸ್ವಿನಿ ನದಿಯ ಬದಿಯಲ್ಲಿ ನಗರದ ಗುರುಂಪು ಎಂಬಲ್ಲಿ ಚರಂಡಿಯಿಂದ ಹೂಳೆತ್ತಿದ ಕೊಳಚೆಯ ತ್ಯಾಜ್ಯವನ್ನು ಟ್ರಾಕ್ಟರ್ ನಲ್ಲಿ ತುಂಬಿಸಿ ತಂದು ಹಾಕಿರುವ ಘಟನೆ ಡಿ.19 ರಂದು ವರದಿಯಾಗಿತ್ತು.

ಈ ಕುರಿತು ಸುದ್ದಿ ವ್ಯಾಪಕವಾಗಿ ಹರಡಿದ್ದು ಆಲೆಟ್ಟಿ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರುಆಕ್ಷೇಪಿಸಿರುವುದಲ್ಲದೆ ತ್ಯಾಜ್ಯ ಹಾಕಿದವರಿಗೆ
ರೂ.10 ಸಾವಿರ ದಂಡ ವಿಧಿಸುವ ನಿರ್ಧಾರವನ್ನು ಕೈಗೊಂಡಿದ್ದರು. ಪಂಚಾಯತ್ ಅಧಿಕಾರಿ ಅಲ್ಲಿಂದ ತ್ಯಾಜ್ಯವನ್ನು ತೆಗೆಯುವಂತೆ ತ್ಯಾಜ್ಯ ಹಾಕಿದವರಿಗೆ ಸೂಚನೆ ನೀಡಿದ್ದರು.


ಅದರಂತೆ ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕ್ಕಾರ್ ಮತ್ತು ಗುತ್ತಿಗೆದಾರ ಕುಮಾರ್ ಎಂಬವರು ಆಲೆಟ್ಟಿ ಪಂಚಾಯತಿಗೆ ಬಂದು ಮಾತುಕತೆ ನಡೆಸಿದರು. ಪಂಚಾಯತ್ ನವರು ರೂ.10 ಸಾವಿರ ದಂಡ ಪಾವತಿಸಬೇಕು ಅಲ್ಲದೆ ಇಂದು ಸಂಜೆಯ ಒಳಗೆ ಅಲ್ಲಿಂದ ತ್ಯಾಜ್ಯವನ್ನು ತೆಗೆಯುವಂತೆ ಸೂಚಿಸಿದ್ದರು. ಅದಕ್ಕೊಪ್ಪಿಗೆ ನೀಡಿ ದಂಡ ಪಾವತಿಸಿರುವುದಲ್ಲದೆ ಇಂದು ರಾತ್ರಿ ಕೂಲಿ ಆಳುಗಳನ್ನು ಕರೆ ತಂದು ನದಿಯ ಬದಿಯಲ್ಲಿ ಸುರಿದಿರುವ ತ್ಯಾಜ್ಯವನ್ನು ಬಟ್ಟಿಯಲ್ಲಿ ತುಂಬಿಸಿ ಪಿಕ್ ಅಪ್ ನಲ್ಲಿ ಲೋಡ್ ಮಾಡಿ ಬೇರೆ ಕಡೆಗೆ ಸಾಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.


ಈ ಸಂದರ್ಭದಲ್ಲಿ ಸ್ಥಳದಲ್ಲಿ ಪಂಚಾಯತ್ ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರಿದ್ದರು.