ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮವು ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ಇಂದು ನಡೆಯಿತು. ಮರ್ಕಂಜ ಗ್ರಾಮದ 4 ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮದ 2 ಉಪವಸತಿಯ ಸ್ವಯಂ ಸೇವಕರು ಭಾಗವಹಿಸಿದ್ದರು.
1992 ನೇ ಇಸವಿಯಲ್ಲಿ ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ್ದ ಮರ್ಕಂಜ ಗ್ರಾಮದ ಚಂದ್ರಶೇಖರ ರಾವ್ ಅಕಿರೆಕಾಡು , ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಹ ಸಂಚಾಲಕರಾದ ಹರಿಪ್ರಸಾದ್ ಎಲಿಮಲೆ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಭಜನಾ ಮಂಡಳಿಯ ಸದಸ್ಯರು ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮಾತೆಯರು ಭಾಗವಹಿಸಿದ್ದರು. ಇಂದಿನಿಂದ ಗ್ರಾಮದ ಪ್ರತಿ ಮನೆ ಮನೆಗೂ ಅಯೋಧ್ಯೆಯ ಮಂತ್ರಾಕ್ಷತೆ ಮತ್ತು ಆಮಂತ್ರಣ ಪತ್ರಿಕೆ ವಿತರಣೆ ಮಾಡಲಾಗುವುದು.
ಪೂಜಾ ಕಾರ್ಯ ನೆರವೇರಿಸಿದ ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನದ ಅರ್ಚಕರು ಶ್ರೀ ರಾಮನ ಮಂತ್ರೋದ್ಘೋಷದಿಂದ ಸೇರಿದ ಭಕ್ತರೆಲ್ಲರಿಗೂ ಮಂತ್ರಾಕ್ಷತೆಯ ಪಾವಿತ್ರ್ಯತೆ ಬಗ್ಗೆ ಮಾತನಾಡಿದರು. ಹರಿಪ್ರಸಾದ್ ಎಲಿಮಲೆ ಮಂತ್ರಾಕ್ಷತೆ ವಿತರಣೆ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರೂ, ಮರ್ಕಂಜ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ್ ಭಟ್ ದೇಲಂಪಾಡಿಯವರು ಅಯೋಧ್ಯೆಯ 1989 ರ ನಂತರದ ಬೆಳವಣಿಗೆಗಳ ವಿಚಾರಧಾರೆಗಳ ಸಂಕ್ಷಿಪ್ತ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗೋವಿಂದ ಅಳವುಪಾರೆ, ಬೋಜಪ್ಪ ಹರ್ಲಡ್ಕ ಮತ್ತಿತರರಿದ್ದರು.