ಫೋರ್ಡೇಸ್ ಸ್ಪಾಟ್ಸ್

0

ಫೋರ್ಡೇಸ್ ಸ್ಪಾಟ್ಸ್ ಎನ್ನುವುದು ಬಾಯಿಯ ಒಳಗೆ ಕೆನ್ನೆಯ ಒಳಭಾಗದಲ್ಲಿ, ತುಟಿಗಳ ಒಳಭಾಗದಲ್ಲಿ ಕಂಡು ಬರುವ ಬಿಳಿ ಮತ್ತು ಹಳದಿ ಮಿಶ್ರಿತ ಚಿಕ್ಕದಾದ ಉಬ್ಬುಗಳಾಗಿರುತ್ತದೆ. ನೋಡಲು ಒಂದು ರೀತಿಯಲ್ಲಿ ಅಸಹ್ಯವಾಗಿ ಕಾಣುವ ಈ ಸ್ಪಾಟ್‍ಗಳು, ರೋಗಿಗಳನ್ನು ಕೆಲವೊಮ್ಮೆ ದಿಗಿಲುಗೊಳಿಸಿ ಕ್ಯಾನ್ಸರ್ ಎಂದು ತಲೆÀಕೆಡಿಸಿಕೊಂಡು ದಂತ ವೈದ್ಯರನ್ನು ಸತಾಯಿಸುವುದು ಕಂಡುಬಂದಿದೆ.

ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಗಳ ಬಾಯಿಯೊಳಗಿನ ಕೆನ್ನೆಯ ಒಳಭಾಗ, ತುಟಿಗಳ ಒ¼ಭಾಗ ಮೆದುವಾಗಿ, ಮೃದುವಾಗಿ, ನುಣುಪಾಗಿ, ತೆಳುಗುಲಾಬಿ ಬಣ್ಣದಿಂದ ಹೊಳೆಯುತ್ತಿರುತ್ತದೆ. ಆದರೆ ಈ ಪೋರ್ಡೇಸ್ ಸ್ಪಾಟ್ಸ್ ಇರುವವರಲ್ಲಿ ಆ ಭಾಗ ದೊರಗಾಗಿ ಗಟ್ಟಿಯಾಗಿ ಮತ್ತು ಹಳದಿ ಮಿಶ್ರಿತ ಬಿಳಿ ಬಣ್ಣಗಳಿಂದ ಕೂಡಿರುತ್ತದೆ. ಯಾವ ನಿರ್ದಿಷ್ಟ ಕಾರಣದಿಂದ ಈ ಪರಿಸ್ಧಿತಿ ಬರುತ್ತದೆ ಎಂದು ನಿಖರವಾಗಿ ತಿಳಿದುಬಂದಿಲ್ಲ. ಆದರೂ ವಾತಾವರಣ ಮತ್ತು ಜೈವಿಕ ಕಾರಣಗಳು ಒಟ್ಟುಗೂಡಿ ಈ ರೀತಿ ಉಂಟಾಗುತ್ತದೆ ಎಂದು ಅಂದಾಜಿಸಲಾಗಿದೆ.ಯಾಕಾಗಿ ಬರುತ್ತದೆ?ಸಾಮಾನ್ಯವಾಗಿ ಚರ್ಮದ ಹೊಳಪನ್ನು ಕಾಪಾಡಲು ಚರ್ಮದೊಳಗೆ ಸೆಬೀಷಿಯಸ್ ಗ್ರಂಥಿಗಳು ದ್ರವ್ಯ ಸ್ರವಿಸಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಈ ಸೆಬೀಷಿಯಸ್ ಗ್ರಂಥಿüಗಳು ರಸದೂತಗಳ ವೈಪರೀತ್ಯ ಅಥವಾ ಭ್ರೂಣದ ಬೆಳವಣಿಗೆ ಹಂತದಲ್ಲಿ ಉಂಟಾದ ಕಾರಣಗಳಿಂದಾಗಿ ಬಾಯಿಯ ಒಳಪದರದೊಳಗೆ ಸೇರಿಕೊಂಡು ಈ ರೀತಿ ಪೋರ್ಡೇಸ್ ಸ್ಪಾಟ್ಸ್‍ನ್ನು ಉಂಟು ಮಾಡುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ ಈ ರೀತಿಯ ಪರಿಸ್ಧಿತಿಯಲ್ಲಿ ರೋಗಿಗೆ ಯಾವುದೇ ಉರಿ, ನೋವು ಅಥವಾ ಯಾತನೆ ಇರುವುದಿಲ್ಲವಾದರೂ ಮಾನಸಿಕವಾಗಿ ಒಂದಷ್ಟು ಗೊಂದಲ ಮತ್ತು ಸಂಶಯಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ರೋಗಿಗಳು ತಮಗೇನಾದರೂ ಕ್ಯಾನ್ಸರ್ ಬಂದಿರಬಹುದೇ ಎಂದು ಯೋಚಿಸಿ ತಲೆಬಿಸಿ ಮಾಡಿಕೊಂಡು ಚಿಂತಾಕ್ರಾಂತರಾಗುತ್ತಾರೆ. ಇದು ಯಾವುದೇ ಸಾಂಕ್ರಾಮಿಕವಾಗಿ ಹರಡುವ ರೋಗವಲ್ಲ , ಸೋಂಕು ಅಲ್ಲ ಮತ್ತು ಅಸಹಜ ಬೆಳವಣಿÉಗೆ ಲಕ್ಷಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇದು ಹುಟ್ಟಿನಿಂದಲೂ ಇರಬಹುದು ಅಥವಾ ಯೌವನಾವಸ್ಥೆಯ ಹೊತ್ತಿನಲ್ಲಿ ಹೆಚ್ಚು ಕಂಡು ಬರುತ್ತದೆ. ಒಮ್ಮೆ ಕಾಣಿಸಿಕೊಂಡರೆ ಜೀವನ ಪರ್ಯಂತ ಇರುತ್ತದೆ. ಕೆಲವೊಮ್ಮೆ ವಯಸ್ಸದಾಂತೆ ತನ್ನ ತೀವ್ರತೆ ಕಳೆದುಕೊಂಡು ಸಂಖ್ಯೆ ಕ್ಷೀಣವಾಗಬಹುದು. ಪುರುಷ ಮತ್ತು ಮಹಿಳೆಯರಲ್ಲಿ ಸಮಾನವಾಗಿ ಕಾಣಿಸಿಕೊಳ್ಳುತ್ತದೆ. ನೋಡಲು ವಿಚಿತ್ರವಾಗಿದ್ದರೂ ಯಾವುದೇ ರೋಗವಿಲ್ಲ ಎಂಬುದನ್ನು ಜನರು ತಿಳಿದುಕೊಳ್ಳಬೇಕು. ಯಾವುದೇ ಚಿಕಿತ್ಸೆ ಅಗತ್ಯವಿಲ್ಲದ ಈ ದೇಹÀಸ್ಧಿತಿಯನ್ನು ಪೋರ್ಡೇಸ್ ಗ್ರಾನ್ಯೂಲ್ಸ್ ಅಥವಾ ಸೆಬೇಷಿಯಸ್ ಪ್ರಾಮಿನೆನ್ಸ್ ಅಂತಲೂ ಕರೆಯಲಾಗುತ್ತದೆ. ರಸದೂತಗಳ ವೈಪರೀತ್ಯವಾದಲ್ಲಿ, ಗರ್ಭಿಣಿಯಾದಾಗ ಅಥವಾ ಯೌವನಾವಸ್ಥೆಯ ಸಂದರ್ಭದಲ್ಲಿ ರಸದೂತಗಳ ಸ್ರವಿಸುವಿಕೆ ಹೆಚ್ಚಾದಂತೆ ಈ ಗ್ರಾನ್ಯುಲ್‍ಗಳ ಸಂಖ್ಯೆ, ಗಾತ್ರ ಮತ್ತು ಬಣ್ಣ ಬದಲಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಾಯಿ ಮಾತ್ರವಲ್ಲದೆ ಪುರುಷರ ಜನಾಂಗದ ಒಳಭಾಗದಲ್ಲಿ ಕಂಡು ಬರುವ ಸಾಧ್ಯತೆ ಇರುತ್ತದೆ. ಒಂದು ಅಂಕಿ ಅಂಶಗಳ ಪ್ರಕಾರ ಶೇಕಡ 70 ರಿಂದ 80 ಮಂದಿಯಲ್ಲಿ ಪೋರ್ಡೇಸ್ ಗ್ರಾನ್ಯೂಲ್ಸ್ ಬಾಯಿಯಲ್ಲಿ ಕಂಡುಬರುತ್ತದೆ ಎಂದು ತಿಳಿದು ಬಂದಿದೆ. ಅತಿಯಾದ ವ್ಯಥೆಯಿಂದ ಈ ದೊರಗಾದ ಫೊರ್ಡೇಸ್ ಸ್ಪಾಟ್ಸ್‍ಗಳನ್ನು ಕೆರೆಯುವುದು ಮತ್ತು ಘಾಸಿಗೊಳಿಸುವುದು ಸಹ್ಯವಲ್ಲ, ಹಾಗೆ ಮಾಡುವುದರಿಂದ ಒಳಪದರದಲ್ಲಿ ಸೋಂಕು ಉಂಟಾಗಿ ನೋವು, ಕೀವು ಉಂಟಾಗುವ ಸಾಧ್ಯತೆ ಇರುತ್ತದೆ.ಚಿಕಿತ್ಸೆ ಹೇಗೆ?ಫೋರ್ಡೇಸ್ ಸ್ಪಾಟ್ಸ್‍ಗಳಿಗೆ ಯಾವುದೇ ಚಿಕಿತ್ಸೆ ಅಗತ್ಯವಿಲ್ಲ. ಅವುಗಳನ್ನು ನಿರ್ಲಕ್ಷಿಸಿ ತನ್ನಿಂತಾನೆ ಇರಲು ಬಿಡತಕ್ಕದು. ಕೆಲವೊಮ್ಮೆ ಅವುಗಳ ಗಾತ್ರ ಮತ್ತು ಬಣ್ಣ ಬದಲಾದರೆ ರೆಟಿನಾಲ್ ಎಂಬ ಮಿಟಮಿನ್ ಎ ಕ್ರೀಮ್‍ನಿಂದ ಆ ಭಾಗವನ್ನು ಮಸಾಜು ಮಾಡಬಹುದು. ಅದೇ ರೀತಿ ಶುದ್ದ ಆರ್ಗಾನಿಕ್ ತೆಂಗಿನೆಣ್ಣೆಯನ್ನು ಬಳಸಬಹುದು ಎಂದು ತಿಳಿದು ಬಂದಿದೆ. ಬೇರೆ ಯಾವುದೇ ಲೇಸರ್ ಚಿಕಿತ್ಸೆ ಸರ್ಜರಿ ಅಥವಾ ಔಷಧಿಗಳ ಅವಶ್ಯಕತೆ ಇರುವುದಿಲ್ಲ. ಅನಗತ್ಯವಾಗಿ ಕ್ಯಾನ್ಸರ್ ಬಾರದಿರಲಿ ಎಂದು ಸ್ಟೀರಾಯ್ಡು ಔಷಧಿ ಬಳಸುವುದನ್ನು ಖಂಡಿತವಾಗಿಯೂ ಮಾಡಬಾರದು. ಪೋರ್ಡೇಸ್ ಗ್ರಾನ್ಯೂಲ್ಸ್‍ಗಳನ್ನು ಲೇಸರ್ ಬಳಸಿ ನಿವಾರಿಸಬಹುದು. ಅದೇ ರೀತಿ ಅತಿಯಾದ ಶೀತಕಾರಕ ದ್ರವರೂಪದ ನೈಟ್ರೋಜನ್ ಅಥವಾ ಆರ್ಗನ್‍ಗ್ಯಾಸ್ ಬಳಸಿ ತೆಗೆಯಬಹುದಾಗಿದೆ. ಅದೇ ರೀತಿ ಖಿಅಂ ಟಾಪಿಕಲ್ ಟ್ರೆಕ್ಲೋರೋ ಅಸೆಟಿಕ್ ಆಸಿಡ್ ಬಳಸಿ ನಾಶಪಡಿಸಬಹುದಾಗಿದೆ. ಆದರೆ ಈ ಯಾವ ಚಿಕಿತ್ಸೆಯ ಅಗತ್ಯವಿಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಮಾನಸಿಕ ನೆಮ್ಮದಿಗಾಗಿ ಅತೀ ಅಗತ್ಯವಿದ್ದಲ್ಲಿ ಕೆಲವೊಮ್ಮೆ ಈ ಚಿಕಿತ್ಸೆಯನ್ನು ಮಾಡಬಹುದಾಗಿದೆ. ಲೇಸರ್ ಚಿಕಿತ್ಸೆಯನ್ನು ಮಾಡಬಹುದಾಗಿದೆ. ಲೇಸರ್ ಚಿಕಿತ್ಸೆಯಲ್ಲಿ ಕಾರ್ಬನ್ ಡೈಆಕ್ಸೈಡ್ ಸೂಪರ್ ಪಲ್ಸ್‍ಡ್ ಲೇಸರ್ ಅತೀ ಉತ್ತಮ ಎಂದು ತಿಳಿದು ಬಂದಿದೆ.

ಕೊನೆಮಾತು:
ಸಾಮಾನ್ಯವಾಗಿ ಸೆಬೀಷಿಯಸ್ ಗ್ರಂಥಿüಗಳು ಚರ್ಮದಲ್ಲಿ ಇರುತ್ತದೆ ಮತ್ತು ಹೆಚ್ಚಾಗಿ ಕೂದಲಿನ ಪಾಲಿಕ್‍ಲ್ ಜೊತೆಗೆ ಇರುತ್ತದೆ. ಕೂದಲಿನ ಫಾಲಿಕರ್ ಇಲ್ಲದ ಸೆಬೀಷಿಯಸ್ ಗ್ರಂಥಿüಯನ್ನು ಪೋರ್ಡೇಸ್ ಗ್ರಾನ್ಯೂಲ್ಸ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಏಕಾಂಗಿಯಾಗಿ ಅಥವಾ ಕೆಲವೊಮ್ಮೆ ಗುಂಪುಗುಂಪಾಗಿ ಕಂಡು ಬರುತ್ತದೆ. ಸಾಮಾನ್ಯವಾಗಿ 1 ರಿಂದ 3 ಮಿಲಿಮೀಟರ್ ಗಾತ್ರದ ಈ ಗ್ರಾನ್ಯೂಲ್‍ಗಳು ನಿರುಪದ್ರವಿಯಾಗಿರುತ್ತದೆ. ಹೆಚ್ಚಾಗಿ ದೇಹದ ಎರಡು ಬದಿಗಳಲ್ಲಿ ಒಂದೇ ರೀತಿಯ ಶೈಲಿಯಲ್ಲಿ ಕಂಡು ಬರುತ್ತದೆ. ದೇಹದ ಒಂದೇ ಬದಿಯಲ್ಲಿ ಕಂಡು ಬರುವ ಸಾಧ್ಯತೆ ಅತೀ ವಿರಳ. ಹೆಚ್ಚು ತೈಲಮಿಶ್ರಿತ ಚರ್ಮ ಇರುವವರಲ್ಲಿ ಈ ಫೋರ್ಡೇಸ್ ಗ್ರಾನ್ಯೂಲ್ಸ್ ಜಾಸ್ತಿ ಕಂಡು ಬರುತ್ತದೆ. ವಂಶವಾಹಿಯಾಗಿ ಗುದದ್ವಾರ ಮತ್ತು ದೊಡ್ಡ ಕರುಳಿನ ಕ್ಯಾನ್ಸರ್ ರೋಗ ಇರುವವರಲ್ಲಿ ಕೂಡಾ ಫೋರ್ಡೇಸ್ ಗ್ರಾನ್ಯೂಲ್ಸ್ ಜಾಸ್ತಿ ಕಂಡು ಬರುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಇನ್ನೊಂದು ದಂತ ವಿಜ್ಞಾನ ಅಧ್ಯಯನದ ಪ್ರಕಾರ, ದೇಹದಲ್ಲಿ ಜಾಸ್ತಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇರುವವರಲ್ಲಿ ಈ ಪೋರ್ಡೇಸ್ ಸ್ಪಾಟ್ಸ್ ಹೆಚ್ಚು ಕಂಡು ಬರುತ್ತದೆ ಮತ್ತು ಅವರಿಗೆ ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದು ತಿಳಿದುಬಂದಿದೆ. ಈ ಚಿಕಿತ್ಸೆ ಅಗತ್ಯವಿಲ್ಲದ ಈ ದೇಹಸ್ಥಿತಿಯನ್ನು ನುರಿತ ವೈದ್ಯರು ಬರೀ ಕಣ್ಣಿನಿಂದಲೇ ಗುರುತಿಸಬಲ್ಲದು ಮತ್ತು ಬಯಾಪ್ಸಿ ಪರೀಕ್ಷೆಯ ಅಗತ್ಯವೂ ಇರುವುದಿಲ್ಲ. ಒಟ್ಟಿನಲ್ಲಿ ನಿರಂತರವಾಗಿ ದಂತ ವೈದ್ಯರ ಸಲಹೆ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆ ಮಾಡಿಸಿಕೊಂಡಲ್ಲಿ ನೂರು ಕಾಲ ತೊಂದರೆ ಇಲ್ಲದೆ ಬದುಕಲು ಸಾಧ್ಯವಿದೆ.
ಡಾ|| ಮುರಲೀ ಮೋಹನ್‍ಚೂಂತಾರು