ಶ್ರೀಮತಿ ಅನುರಾಧ ಜನಾರ್ಧನ್ ನೆಟ್ಟಾರು
ಸೂರ್ಯ ರಶ್ಮಿಯ ಹೊನ್ನಕಿರಣಗಳು
ಪಥವ ಬದಲಿಸಿದೆ ಮದುವೆ ದಿಬ್ಬಣದಂತೆ
ಬಾಳಮೇಳದಲಿ ಹೆಜ್ಜೆ ಕುರುಹು ಮೂಡಿಸಿ
ನವ ಸಾಮಗಾನಕೆ ಮುನ್ನುಡಿಯಂತೆ
ಶಕುನದ ಹಕ್ಕಿಯು ಶುಭವ ನುಡಿಯುತಿದೆ
ಹೊಸ ಚೈತ್ರದಲ್ಲಿ ಮಾವು ಚಿಗುರಲೆಂದು
ಎಳ್ಳು ಬೆಲ್ಲವ ಸಮತೆಯಲ್ಲಿ ಹಂಚಿ
ಕಹಿಕರಗಿ ಪ್ರೀತಿ ಸವಿಯಲೆಂದು
ಮಾಸಿದ ಉಡುಗೆಯಲಿ ಹಿರಿ ಜೀವಗಳು
ಹರಸಿ ಬೆಳೆಸಿದೆ ಆಸೆ ಕಂಗಳಿಂದ
ಉಸಿರಾದ ಜೀವಕೆ ನೆರಳಾದ ಬದುಕಿಗೆ
ಉಣಬಡಿಸುವ ಪ್ರೀತಿಯ ಧಾರೆಯಿಂದ
ಅಹಂ ಅಂತಸ್ತು ಬರಿಯ ತೋರಣವಷ್ಟೇ
ಕಟ್ಟುವ ಸ್ನೇಹದ ಮಾಲೆಗಳನು
ಕಪಟದ್ರೋಹಗಳೆಲ್ಲ ಕಾರ್ಕೋಟಕ ವಿಷವಷ್ಟೇ
ಹಸಿವ ನೀಗಿಸಲಿ ಹೃದಯ ಶ್ರೀಮಂತಿಕೆಯು…