ಧರ್ಮ ಶಿಕ್ಷಣದ ಅಗತ್ಯ ಇಂದಿದೆ : ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ
ಮಕ್ಕಳಲ್ಲಿ ಭಗವಂತನ ಬಗ್ಗೆ ನಂಬಿಕೆ ಮೂಡಿಸಬೇಕು : ಪ್ರಕಾಶ್ ಮಲ್ಪೆ
ಬ್ರಹ್ಮರಥ ನಿರ್ಮಾಣದ ಯಶಸ್ಸು ಭಕ್ತರಿಗೆ ಅರ್ಪಣೆ : ಪದ್ಮನಾಭ ಶೆಟ್ಟಿ ಪೆರುವಾಜೆ
ಜಗತ್ತಿಗೆ ಧರ್ಮ ಮಾರ್ಗವನ್ನು ತೋರಿಸಿದ ಸನಾತನ ಸಂಸ್ಕೃತಿಯ ಹಿಂದೂ ಧರ್ಮ ನಮ್ಮದು. ಹಾಗಾಗಿ ಇಂದಿನ ಕಾಲಘಟ್ಟದಲ್ಲಿ ಧರ್ಮ ಶಿಕ್ಷಣದ ಅಗತ್ಯ ಇದೆ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಜ.16 ರಂದು ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆರ್ಶೀರ್ವಚನ ನೀಡಿದರು. ಶ್ರದ್ಧಾ ಕೇಂದ್ರಗಳಲ್ಲಿ ಭಜನೆ ಮಾಡಬೇಕು. ಭಜನೆಯ ಶಕ್ತಿ ಅಗಾಧವಾದದು ಎಂದ ಅವರು ದೇವಾಲಯಕ್ಕೆ ನಿತ್ಯವೂ ಬರುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದರು.
ನನ್ನಿಂದ ಆಗುತ್ತದೆ ಎನ್ನುವುದು ಭ್ರಮೆ.ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ನೂರು ವರ್ಷಗಳ ಬಳಿಕ ರಥ ನಿರ್ಮಾಣ ಆಗಿದೆ ಎಂದರೆ ಅದು ಜಲದುರ್ಗಾದೇವಿಯೇ ಮಾಡಿಸಿದ್ದು. ಆಕೆಯೇ ಇದರ ಸೂತ್ರಧಾರಿ ಎಂದ ಮಾಣಿಲ ಶ್ರೀಗಳು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ತಂಡಕ್ಕೆ ಸಿಕ್ಕ ಭಾಗ್ಯ ಇದಾಗಿತ್ತು. ಇದನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಿದ್ದಾರೆ ಎಂದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ನಾನು ಜಲದುರ್ಗಾದೇವಿಯ ಪರಮ ಭಕ್ತೆ. ನನ್ನ ಬೆಳವಣಿಗೆಗೆ ಶ್ರೀ ದೇವಿಯ ಆರ್ಶೀವಾದ ಇದೆ. ಬ್ರಹ್ಮರಥ ಸಮರ್ಪಣೆಯಂತಹ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಕ್ಕ ಅವಕಾಶ ಶ್ರೇಷ್ಠವಾದದು ಎಂದರು.
ಲೇಖಕ,ಸಾಂಸ್ಜೃತಿಕ ಚಿಂತಕ ಪ್ರಕಾಶ್ ಮಲ್ಪೆ ಧಾರ್ಮಿಕ ಉಪನ್ಯಾಸ ನೀಡಿ, ಮಕ್ಕಳಲ್ಲಿ ಭಗವಂತನ ಬಗ್ಗೆ ನಂಬಿಕೆ ಮೂಡಿಸಬೇಕು. ಆಗ ಮಕ್ಕಳ ಮನಸ್ಸಿನೊಳಗಿನ ಅಹಂಕಾರ ನಾಶವಾಗುತ್ತದೆ. ತನ್ಮೂಲಕ ಆತ್ಮವಿಶ್ವಾಸ ಹೆಚ್ಚಾಗುವುದು ಹಾಗೂ ಅಹಂಕಾರ ನಾಶವಾಗುವುದು ಇವೆರಡರಿಂದ ಉತ್ತಮ ವ್ಯಕ್ತಿತ್ವ ಸಾಧ್ಯವಿದೆ ಎಂದರು.
ದೇವರ ನೈವೇದ್ಯ ಸೇವಿಸಿ ಬೆಳೆದೆ
ದೇವಸ್ಥಾನದ ವ್ಯ.ಸ.ಅಧ್ಯಕ್ಷ ಪದ್ಮನಾಭ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಸಂಜೆ ವೇಳೆ ಜಲದುರ್ಗಾದೇವಿ ದೇವಾಲಯಕ್ಕೆ ಬಂದು ನನ್ನಿಂದಾದಷ್ಟು ಸೇವೆ ಮಾಡುತಿದ್ದೆ. ಅರ್ಚಕರು ದೇವರಿಗೆ ಅರ್ಪಿಸಿದ್ದ ನೈವೇದ್ಯವನ್ನು ಪ್ರಸಾದ ರೂಪದಲ್ಲಿ ನೀಡುತ್ತಿದ್ದರು. ಅದನ್ನೇ ನೈವೇದ್ಯ ಸೇವಿಸಿ ಬೆಳೆದೆ. ಈಗ ಅದೇ ದೇವಾಲಯದ ಅಧ್ಯಕ್ಷನಾಗಿ ದೇವರ ಸೇವೆ ಮಾಡುವ ಅವಕಾಶ ಬಂದೊದಗಿತು. ಕ್ಷೇತ್ರದ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಜೀರ್ಣೋದ್ಧಾರದ ಬಳಿಕ ಬ್ರಹ್ಮರಥ ಸಮರ್ಪಣೆ ಅವಕಾಶ ದೊರೆಯಿತು. ಬ್ರಹ್ಮರಥದ ಕಾರ್ಯವನ್ನು ದೇವಿಯೇ ನೆರವೇರಿಸಿದ್ದಾಳೆ. ಸಂಸದ ನಳಿನ್ ಕುಮಾರ್ ಕಟೀಲು ಅವರು ಆರ್ಥಿಕ ಕ್ರೋಢಿಕರಣಕ್ಕೆ ನೀಡಿರುವ ಸಹಕಾರ ಸ್ಮರಣೀಯ ಎಂದ ಅವರು,ರಥ ನಿರ್ಮಾಣದ ಎಲ್ಲ ಯಶಸ್ಸು ಭಕ್ತರಿಗೆ ಸಲ್ಲುತ್ತದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಕ್ಷೇತ್ರ ಪುರಾಣ ಸಹ್ತಾದ್ರಿ ಪುಸ್ತಕ ಬಿಡುಗಡೆ ಮಾಡಿದರು. ಕ್ಷೇತ್ರದ ಶಿಲ್ಪಿ ಮಹೇಶ್ ಮುನಿಯಂಗಳ ಅವರು ಶುಭ ಹಾರೈಸಿದರು. ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಪ್ರಥಮ ದರ್ಜೆ ಪರಿವೀಕ್ಷಕ ಶ್ರೀಧರ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ.ಮಾಜಿ ಸದಸ್ಯೆ ಶ್ರೀಮತಿ ರಾಜೀವಿ ಆರ್.ರೈ ಶುಭ ಹಾರೈಸಿದರು. ಸಹ್ಯಾದ್ರಿ ಕೃತಿ ಲೇಖಕ ಬಿ.ರುಕ್ಮಯ್ಯ ಸುರತ್ಕಲ್ ಅನಿಸಿಕೆ ವ್ಯಕ್ತಪಡಿಸಿದರು.
ಸಮ್ಮಾನ ಸಮಾರಂಭ
ಇದೇ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ರಥ ಶಿಲ್ಪಿ ಹರೀಶ್ ಆಚಾರ್ಯ ಬೋಳಿಯಾರು, ಸಂತೋಷ್ ಆಚಾರ್ಯ ಪೆರುವಾಜೆ, ಸುಶಾಂತ್ ಆಚಾರ್ಯ ಬೊಳ್ಳಾಯಿ, ಅಚ್ಚುತ ಆಚಾರ್ಯ, ಬಾಲಕೃಷ್ಣ ಆಚಾರ್ಯ ಪೆರುವಾಜೆ, ಮಂಜುನಾಥ ಆಚಾರ್ಯ ಹಾಗೂ ತಂಡವನ್ನು, ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಪಿ.ವೆಂಕಟಕೃಷ್ಣ ರಾವ್, ಉಪ ವಲಯ ಅರಣ್ಯಾಧಿಕಾರಿ ಪ್ರಸಾದ್ ಕೆ.ಜೆ, ಪೆರುವಾಜೆ ಜಲಧಿ ಇವೆಂಟ್ಸ್ ಮಾಲಕ ರಕ್ಷಿತ್ ಪೆರುವಾಜೆ ಮೊದಲಾದವರನ್ನು ಸಮ್ಮಾನಿಸಲಾಯಿತು.
ಕ್ಷೇತ್ರದ ಕುರಿತಂತೆ ಬಾಲಕೃಷ್ಣ ನೆಟ್ಟಾರು ಹಾಡಿರುವ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಾಯಿತು. ಶ್ರಾವ್ಯ ಜಿ.ಪಿ ಕೊಲ್ಯ ಪ್ರಾರ್ಥಿಸಿದರು. ಪೆರುವಾಜೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆಗುತ್ತು ಪ್ರಸ್ತಾವನೆಗೈದರು. ಪ್ರೀತಂ ರೈ ಪೆರುವಾಜೆ ಸ್ವಾಗತಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯ ನಾರಾಯಣ ಕೊಂಡೆಪ್ಪಾಡಿ ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ನಿರೂಪಿಸಿದರು.