ಸಂಪಾಜೆ ಪೋಲೀಸ್ ಠಾಣೆಗೆ ಹೋಗಿ ಇಬ್ಬರಿಂದಲೂ ಆರೋಪ ನಿರಾಕರಿಸಿ ಸ್ವಯಂ ಹೇಳಿಕೆ
” ನಾನು ಮನೆಕಟ್ಟಲು ಶುರು ಮಾಡಿದ್ದು ಅರಣ್ಯ ಅಧಿಕಾರಿಗಳು ಹಾಗೂ ಸೂರಜ್ ಹೊಸೂರು ಅಡೆತಡೆ ಮಾಡುತ್ತಿರುವುದರಿಂದ ನನ್ನ ಕುಟುಂಬ ಆತ್ಮಹತ್ಯೆ ಮಾಡಕೊಳ್ಳಲು ನಿರ್ಧರಿಸಿದ್ದೇವೆ” ಎಂದು ಚೆಂಬು ಗ್ರಾಮದ ಹೊಸೂರಿನ ಹೇಮಾಧರ ಎಂಬವರು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದು, ಆ ಬರಹ ವೈರಲ್ ಆಗಿದೆ. ಈ ಬೆನ್ನಲ್ಲೆ ಸೂರಜ್ ಹೊಸೂರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಸಂಪಾಜೆ ಹೊರ ಠಾಣೆಗೆ ಹೋಗಿ ತಮ್ಮ ಮೇಲಿನ ಆರೋಪ ನಿರಾಕರಿಸಿ ಸ್ವಯಂಹೇಳಿಕೆ ನೀಡಿರುವ ಘಟನೆ ವರದಿಯಾಗಿದೆ.
ಚೆಂಬು ಗ್ರಾಮದ ಹೊಸೂರು ಹೇಮಾಧರ ಎಂಬವರು ಮನೆ ಕಟ್ಟಲು ನೆಲ ಸಮತಟ್ಟುಗೊಳಿಸಿ, ಕಲ್ಲು ತರಿಸಿ ಕೆಲಸ ಆರಂಭಿಸಿದ್ದರೆನ್ನಲಾಗಿದೆ. ಇದನ್ನು ತಿಳಿದ ಅರಣ್ಯ ಇಲಾಖಾ ಸಿಬ್ಬಂದಿ ತಿಲಕ ಎಂಬವರು ಸ್ಥಳಕ್ಕೆ ಹೋಗಿ ಅರಣ್ಯ ಇಲಾಖೆಯ ಜಾಗವಾದುದರಿಂದ ಇಲ್ಲಿ ಮನೆ ಕಟ್ಟುವಂತಿಲ್ಲ ಎಂದು ಹೇಳಿ, ಕೆಲಸ ನಿಲ್ಲಿಸಿದ್ದರೆನ್ನಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಒಪ್ಪಿಗೆಯ ಬಳಿಕವೇ ಕಟ್ಟಲು ಹೇಳಿದ್ದೆವಲ್ಲಾ – ಈಗಲೇ ಕಟ್ಟಿದ್ದೇಕೆ ಎಂದು ಸಾಮಾಜಿಕ ಮುಂದಾಳು ಸೂರಜ್ ಹೊಸೂರು ಕೂಡ ಹೇಳಿದರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಹೇಮಾಧರ್ ರವರು, ಸೂರಜ್ ಹೊಸೂರು ಮತ್ತು ಅರಣ್ಯ ಇಲಾಖಾ ಅಧಿಕಾರಿಗಳ ಹೆಸರು ಉಲ್ಲೇಖಿಸಿ, ಮನೆಕಟ್ಟಲು ಅವರಿಬ್ಬರು ಅಡ್ಡಿಪಡಿಸುತ್ತಿರುವುದರಿಂದ ತಾನು ಮತ್ತು ತನ್ನ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬರೆದು ತನ್ನ ಸ್ಟೇಟಸ್ ಹಾಕಿಕೊಂಡಿದ್ದರು.
ಈ ಬರಹ ವೈರಲ್ ಆದುದರಿಂದ ಸೂರಜ್ ಹೊಸೂರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ತಿಲಕ ಎಂಬವರು ಸಂಪಾಜೆ ಹೊರ ಠಾಣೆಗೆ ಬಂದು ” ನಾವು ಯಾರಿಗೂ ತೊಂದರೆ ನೀಡಿಲ್ಲ. ನಮ್ಮ ಮೇಲಿನ ಆರೋಪ ನಿರಾಧಾರವಾಗಿದ್ದು, ಈ ಬಗ್ಗೆ ಹೇಮಾಧರ್ ರವರನ್ನು ಕರೆಸಿ ವಿಚಾರಣೆ ನಡೆಸಿ ನ್ಯಾಯ ಒದಗಿಸಬೇಕೆಂದು ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.
ಸ್ಟೇಟಸ್ ಹಾಕಿದ ಹೇಮಾಧರರನ್ನು ಪೋಲೀಸರು ಠಾಣೆಗೆ ಬರಲು ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಸೂರಜ್ ಹೊಸೂರುರವರನ್ನು ಸುದ್ದಿ ವತಿಯಿಂದ ಸಂಪರ್ಕಿಸಿ ವಿಚಾರಿಸಿದಾಗ ” ಹೇಮಾಧರ್ ರವರು ಹಲವಾರು ವರ್ಷಗಳಿಂದ ಆ ಸ್ಥಳದಲ್ಲಿರುವುದರಿಂದ ಅವರು ಮನೆ ದುರಸ್ಥಿಪಡಿಸಲು ಅಡ್ಡಿ ಮಾಡಬಾರದೆಂದು ನಾನು ಕೂಡ ಅರಣ್ಯ ಇಲಾಖೆಗೆ ಮನವಿ ಮಾಡಿದ್ದೆ. ಮೇಲಧಿಕಾರಿಗಳ ಒಪ್ಪಿಗೆ ಇದ್ದರೆ ಮಾತ್ರ ಅವಕಾಶ ನೀಡಬಹುದಲ್ಲದೆ ಇಲ್ಲದಿದ್ದರೆ ಸಾಧ್ಯವೇ ಇಲ್ಲ ಎಂದು ಸಂಪಾಜೆಯ ಅರಣ್ಯ ಇಲಾಖೆಯವರು ಹೇಳಿದ್ದರು. ಆದ್ದರಿಂದ ನಾನು ಮೇಲಧಿಕಾರಿಗಳನ್ನು ಸಂಪರ್ಕಿಸಿ ವಿನಂತಿಸಿದ್ದೆ. ಅವರು ಒಪ್ಪಿಗೆ ನೀಡುವ ಮೊದಲೇ ಹೇಮಾಧರ್ ಕಲ್ಲು ತರಿಸಿ ಮನೆ ಕಟ್ಟಲು ಹೊರಟಿದ್ದರಿಂದ ಅರಣ್ಯ ಇಲಾಖಾ ಸಿಬ್ಬಂದಿ ತಡೆದಿದ್ದಾರೆ. ನಾನು ಹೇಮಾಧರ್ ಗೆ ಉಪಕಾರ ಮಾಡಲು ಹೋಗಿ ಈಗ ಅಪವಾದಕ್ಕೆ ಒಳಗಾಗಿದ್ದೇನೆ. ನಾಳೆ ಅವನು ಏನಾದರೂ ತೊಂದರೆ ಮಾಡಿಕೊಳ್ಳದಂತೆ ನೋಡಿಕೊಳ್ಳುವುದಕ್ಕಾಗಿ ನಾನು ಪೋಲೀಸ್ ಠಾಣೆಗೆ ಹೋಗಿ ಸ್ವಯಂಹೇಳಿಕೆ ನೀಡಿದ್ದು, ಅವನನ್ನು ಕರೆದು ವಿಚಾರಿಸಲು ವಿನಂತಿಸಿದ್ದೇನೆ ” ಎಂದು ಹೇಳಿದರು.