ಕಸ್ತೂರಿ ರಂಗನ್ ವರದಿ ವಿರೋಧಿಸಿ ಜ.18 ರಂದು ಸುಳ್ಯದಲ್ಲಿ ಬೃಹತ್ ಪ್ರತಿಭಟನಾ ಸಭೆ

0

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ವತಿಯಿಂದ ಜಾತ್ಯತೀತ, ಪಕ್ಷಾತೀತ, ಕಾನೂನಾತ್ಮಕ ಮತ್ತು ವಿಷಯಾಧಾರಿತ ಬೃಹತ್ ಪ್ರತಿಭಟನಾ ಸಭೆಯನ್ನು ಜ.18 ರಂದು ಸುಳ್ಯ ವಲಯ ಅರಣ್ಯ ಇಲಾಖೆ ಕಛೇರಿ ಬಳಿ ನಡೆಸಲಾಗುವುದು ಎಂದು ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸುಳ್ಯ ತಾಲೂಕು ಸಂಚಾಲಕ ಚಂದ್ರಶೇಖರ ಬಾಳುಗೋಡು ಹೇಳಿದ್ದಾರೆ.
ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪರಿಸರ ಸಂರಕ್ಷಣೆಯ ನೆಪದಲ್ಲಿ ರೈತರಿಗೆ ಸಮಸ್ಯೆ ಆಗುವ ಯೋಜನೆಗಳ ವಿರುದ್ಧ 2011 ರಿಂದ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಕ್ಕೂ, ಜನವಸತಿ ಪ್ರದೇಶಕ್ಕೂ, ಕೃಷಿ ಭೂಮಿಗೂ ಗಡಿ ಗುರುತು ಮಾಡಲು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುತ್ತದೆ. ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಪೂರ್ಣ ಕೈಬಿಡಬೇಕು. ಕಾಡುಪ್ರಾಣಿಗಳಿಂದ ಕೃಷಿ ನಾಶ ಆಗದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಪ್ಲಾಟಿಂಗ್ ಆಗದ ಹಕ್ಕುಪತ್ರಗಳಿಗೆ ಅಥವಾ ಸರ್ವೆ ನಂಬ್ರಗಳಿಗೆ ತಕ್ಷಣ ಪ್ಲಾಟಿಂಗ್ ಆಗುವ ರೀತಿಯಲ್ಲಿ ಅನುಮತಿ ನೀಡಬೇಕು. ರೈತರ ಸ್ವಾಧೀನ ಇರುವ ಕೃಷಿ ಭೂಮಿಗೆ ಹಕ್ಕುಪತ್ರ ನೀಡಲು ಅನುಮತಿ ನೀಡಬೇಕು. ಪರಿಭಾವಿತ ಅರಣ್ಯದಡಿಯಲ್ಲಿ ಸೇರಿಸಿರುವ ಕಂದಾಯ ಸರ್ವೆ ನಂಬ್ರಗಳನ್ನು ಪುನರ್ ಪರಿಶೀಲನೆ ಮಾಡಿ ಅದನ್ನು ಕಂದಾಯ ಭೂಮಿ ಎಂದು ಪರಿಗಣಿಸಬೇಕು. ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿಗುರುತು ಆಗಬೇಕು. ರೈತರಿಗೆ ಕೋವಿ ಪರವಾನಿಗೆ ನೀಡಬೇಕು. ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ಪರಿಸರ ಸಂರಕ್ಷಣೆಯ ತಜ್ಞರ ವರದಿ ತಯಾರಿಸುವಾಗ ಪಶ್ಚಿಮ ಘಟ್ಟ ಪ್ರದೇಶದ ಗ್ರಾ.ಪಂ.ಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ ವಿಶೇಷ ಗ್ರಾಮ ಸಭೆ ಕರೆದು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಬೇಕು ಎಂಬಿತ್ಯಾದಿ ಬೇಡಿಕೆಗಳಿಗೆ ಸರಕಾರ ಸ್ಪಂದನೆ ನೀಡಬೇಕು ಎಂದು ಅವರು ಹೇಳಿದರು.
ಜ.15 ರಂದು ಬೆಳಿಗ್ಗೆ 10.30 ರಿಂದ ಪಂಜ ವಲಯ ಅರಣ್ಯ ಇಲಾಖೆ ಕಛೇರಿ ಬಳಿಯಲ್ಲೂ ಕಸ್ತೂರಿ ರಂಗನ್ ವರದಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದವರು ಹೇಳಿದರು.
ಹರಿಪ್ರಸಾದ್ ಪಾನತ್ತಿಲ, ರಾಜೇಶ್ ಭಟ್ ನೆಕ್ಕಿಲ, ತೀರ್ಥರಾಮ ನೆಡ್ಚಿಲ್, ಎ.ಜಿ.ಕರುಣಾಕರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.