ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ರೈತರಿಗೆ ಅಡಿಕೆ ಕೀಟ ರೋಗ ನಿರ್ವಹಣೆ ಮತ್ತು ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಗಾರ

0

ಕರ್ನಾಟಕ ಸರ್ಕಾರ ತೋಟಗಾರಿಕಾ ಇಲಾಖೆ ಸುಳ್ಯ ಇದರ ವತಿಯಿಂದ ಲ್ಯಾಂಪ್ ಸೊಸೈಟಿ ಸುಳ್ಯ ಇದರ ಸಹಯೋಗದೊಂದಿಗೆ ಅಡಿಕೆಯಲ್ಲಿ ಕೀಟ ರೋಗ ನಿರ್ವಹಣೆ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಗಾರ ಜ.18ರಂದು ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ದೀಪ ಬೆಳೆಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ಕೃಷಿ ಇಲಾಖೆಗಳು ರೈತರ ಮತ್ತು ಫಲಾನುಭವಿಗಳ ಶ್ರೇಯಾಭಿವೃದ್ಧಿಗಾಗಿ ಮಾಡುವಂತಹ ಈ ರೀತಿಯ ಕಾರ್ಯಗಾರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು ಭಾಗವಹಿಸಬೇಕಾಗಿದೆ. ನಮ್ಮ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಅಡಿಕೆ ಕೃಷಿಯನ್ನು ನಂಬಿ ಬದುಕುತ್ತಿದ್ದು ಇದೀಗ ಕೃಷಿಗೆ ರೋಗಗಳು ಭಾದಿಸುತ್ತಿರುವ ಕಾರಣ ಈ ರೀತಿಯ ರೋಗ ನಿರ್ವಹಣಾ ಬಗ್ಗೆ ಮಾಹಿತಿ ಕಾರ್ಯಗಾರಗಳಿಗೆ ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡಲ್ಲಿ ಸಮಸ್ಯೆಗಳಿಂದ ರಕ್ಷಣೆ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಲ್ಯಾಂಪ್ ಸೊಸೈಟಿ ಅಧ್ಯಕ್ಷ ಎಸ್.ಸೀತಾನಂದ ಬೇಪಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದೇವಪ್ಪ ನಾಯ್ಕ, ಸುಳ್ಯ ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಲ್ಲತ್ತಡ್ಕ, ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀಮತಿ ಸುಹಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ.ವಿನಾಯಕ ಹೆಗ್ಡೆ ವಿಜ್ಞಾನಿಗಳು ಸಿಪಿಸಿಆರ್‌ಐ ಕಾಸರಗೋಡು ಇವರು ಅಡಿಕೆಯ ಕೀಟ ರೋಗ ನಿರ್ವಹಣೆ ಮತ್ತು ಲಕ್ಷಣ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಮಾಹಿತಿಯನ್ನು ನೀಡಿದರು. ಸುಳ್ಯ ಲ್ಯಾಂಪ್ ಸೊಸೈಟಿ ನಿರ್ದೇಶಕಿ ರೇವತಿ ದೊಡ್ಡೇರಿ ಪ್ರಾರ್ಥನೆ ನೆರವೇರಿಸಿದರು. ರಘುನಾಥ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಹಾಯಕ ತೋಟಗಾರಿಕೆ ನಿರ್ದೇಶಕಿ ಶ್ರೀಮತಿ ಸುಹಾನ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರುಗಳಾದ ಶಿಲ್ಪಾ ಸುದೇವ್, ಬುದ್ಧ ನಾಕ್, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಲ್ಯಾಂಪ್ ಸೊಸೈಟಿ ನಿರ್ದೇಶಕರು, ಕೃಷಿಕರು ಉಪಸ್ಥಿತರಿದ್ದರು.