ಗುತ್ತಿಗಾರು ಗ್ರಾಮದ ಮೊಗ್ರ ಇತಿಹಾಸ ಪ್ರಸಿದ್ಧ ಶ್ರೀ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಜ.19 ರಿಂದ ಆರಂಭಗೊಂಡಿದ್ದು, ಜ.21 ರಂದು ಬೆಳಿಗ್ಗೆ ಇತಿಹಾಸ ಪ್ರಸಿದ್ಧ ಬೈರಜ್ಜಿ ನೇಮ ನಡೆಯಿತು.
ಊರ ಪರವೂರ ಭಕ್ತಾದಿಗಳು ಆಗಮಿಸಿ ದೈವದ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇ ಸರ ಎಂ.ಎನ್. ವೆಂಕಟ್ರಮಣ ಮೊಗ್ರ, ಮೊಕ್ತೇಸರ ಕಾರ್ಯಪ್ಪ ಗೌಡ ಚಿಕ್ಮುಳಿ, ಕಾರ್ಯನಿರ್ವಹಣಾ ಮೊಕ್ತೇಸರರಾದ ಚೆನ್ನಕೇಶವ ಗೌಡ ಕಮಿಲ, ಉಮೇಶ್ ಗೌಡ ಮಕ್ಕಿ, ಹೆಬ್ಬಾರರಾದ ಕೇಶವ ಗೌಡ ಬಳ್ಳಕ್ಕ, ಪೂಜಾರಿವರ್ಗ, ಆಡಳಿತ ಮಂಡಳಿ ಸದಸ್ಯರು ಹಾಗೂ ಮೊಗ್ರ 24 ವಕ್ಕಲಿಗೆ ಒಳಪಟ್ಟ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಕನ್ನಡದಲ್ಲೆ ಅಭಯ ನೀಡುವ ಬೈರಜ್ಜಿ ದೈವ
ಸಾಮಾನ್ಯವಾಗಿ ದೈವಗಳು ತುಳು ಭಾಷೆಯಲ್ಲಿ ಭಕ್ತರಿಗೆ ಅಭಯ ನೀಡುತ್ತದೆ. ಬಹುತೇಕ ದೈವಗಳು ತುಳುವಿನಲ್ಲೆ ನುಡಿಗಟ್ಟನ್ನು ತಿಳಿಸುತ್ತದೆ. ಆದರೆ ಗುತ್ತಿಗಾರು ಗ್ರಾಮದ ಮೊಗ್ರ ಕನ್ನಡ ದೇವತೆ ಯಾನೆ, ಪುರುಷ ದೈವಸ್ಥಾನದ ಕಾಲಾವಧಿ ಜಾತ್ರೆಯ ಸಮಯದಲ್ಲಿ ನಡೆಯುವ ಬೈರಜ್ಜಿ ಅಚ್ಚ ಕನ್ನಡದಲ್ಲಿಯೇ ನುಡಿಗಟ್ಟನ್ನು ಹೇಳಿ ಭಕ್ತರಿಗೆ ಅಭಯ ನೀಡುತ್ತಾಳೆ. ವಸ್ತುಗಳನ್ನು ಕಳೆದುಕೊಂಡಿದ್ದರೆ, ಸಂತಾನ ಪ್ರಾಪ್ತಿಗಾಗಿ ಹಾಗೂ ಜೀವನದಲ್ಲಿ ಕಷ್ಟಗಳು ಬಂದಿದ್ದರೆ ಅಜ್ಜಿ ದೈವಕ್ಕೆ ಸಣ್ಣ ಕತ್ತಿ, ಸೀರೆ ಇತ್ಯಾದಿ ಒಪ್ಪಿಸುತ್ತೇವೆಂದು ಹರಿಕೆ ಹೇಳಿಕೊಳ್ಳುತ್ತಾರೆ. ಕಷ್ಟ ಪರಿಹಾರವಾದ ಬಳಿಕ ಕಾಲಾವಧಿ ನೇಮದಲ್ಲಿ ಬೈರಜ್ಜಿಗೆ ಹರಕೆ ಒಪ್ಪಿಸಿ ಭಕ್ತರು ಅಭಯ ಪಡೆದುಕೊಳ್ಳುತ್ತಾರೆ.
ಶಾಸಕಿ ಭಾಗೀರಥಿ ಮುರುಳ್ಯ ಭೇಟಿ
ಶ್ರೀ ಭೈರಜ್ಜಿ ನೇಮದ ದಿನವಾದ ಜ. 21 ರಂದು ಬೆಳಿಗ್ಗೆ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಭೇಟಿ ನೀಡಿ ಭೈರಜ್ಜಿ ದೈವದ ಪ್ರಸಾದ ಸ್ವೀಕರಿಸಿದರು.