ಮಹಾತ್ಮಾ ಗಾಂಧಿ ಸುಳ್ಯಕ್ಕೆ ಆಗಮಿಸಿದ 90 ನೇ ವರ್ಷದ ಅಂಗವಾಗಿ ಫೆ.24ರಂದು ಸುಳ್ಯದಲ್ಲಿ ಗಾಂಧಿನಡಿಗೆ

0

ಸುಳ್ಯ ಗಾಂಧಿ ಚಿಂತನ ವೇದಿಕೆಯ ಸಂಚಾಲಕರಿಂದ ಪತ್ರಿಕಾಗೋಷ್ಠಿ

” ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸುಳ್ಯಕ್ಕೆ ಆಗಮಿಸಿ ಫೆಬ್ರವರಿ 24, 2024 ಕ್ಕೆ 90 ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ
ಆ ದಿನದ ನೆನಪಿಗಾಗಿ ಸುಳ್ಯದಲ್ಲಿ ಗಾಂಧಿ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ” ಎಂದು ಗಾಂಧಿ ಚಿಂತನ ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ

” ಮಹಾತ್ಮ ಗಾಂಧೀಜಿಯವರು 1934 ಫೆ.24 ರಂದು ಸುಳ್ಯಕ್ಕೆ ಭೇಟಿ ನೀಡಿದ್ದರು. ಅಂದು ಸುಳ್ಯದ ಮೊಗರ್ಪಣೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದ್ದರು. ಈ ಹಿನ್ನಲೆಯಲ್ಲಿ ಸುಳ್ಯ ಗಾಂಧಿ ಚಿಂತನಾ ವೇದಿಕೆಯು ಎಲ್ಲಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಫೆ.24 ರಂದು ಬೆಳಗ್ಗೆ 9 ಗಂಟೆಗೆ ಸುಳ್ಯದ ಜ್ಯೋತಿ ವೃತ್ತದಿಂದ ಗಾಂಧಿನಗರದ ವರೆಗೆ ಗಾಂಧಿ ನಡಿಗೆ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ” ಎಂದು ಹೇಳಿದರು.

ಗಾಂಧಿನಗರದಲ್ಲಿ ನ.ಪಂ.ಸದಸ್ಯ ಶರೀಫ್ ಕಂಠಿ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಗಾಂಧಿ ಸ್ತಂಭವನ್ನು ಅದೇ ದಿನದಂದು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದು, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ ಬಿ.ಈ. ಗಾಂಧೀಜಿಯವರ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಅಲ್ಲದೆ ಹಲವಾರು ಮಂದಿ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾಗಬೇಕೆಂದು ಪತ್ರಿಕಾಗೋಷ್ಠಿ ಮೂಲಕ ಮನವಿ ಮಾಡಿಕೊಂಡರು.


ಈವರೆಗೆ ಸುಳ್ಯ ಗಾಂಧಿ ಚಿಂತನಾ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದ ಅವರು ” 2014ರಲ್ಲಿ ಗಾಂಧೀಜಿ ಅವರು ಸುಳ್ಯಕ್ಕೆ ಭೇಟಿ ನೀಡಿ 80 ವರ್ಷ ಆದ ಸಂದರ್ಭದಲ್ಲಿ ಗಾಂಧಿ ಚಿಂತನ ವೇದಿಕೆಯ ನೇತೃತ್ವದಲ್ಲಿ ಗಾಂಧಿನಗರದಿಂದ ಮೊಗರ್ಪಣೆ ವರೆಗೆ ಗಾಂಧಿ ನಡಿಗೆ ಏರ್ಪಡಿಸಲಾಗಿತ್ತು. ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಬೆಳ್ಳಾರೆಯಿಂದ ಸುಳ್ಯದ ವರೆಗೆ ಹಮ್ಮಿಕೊಂಡಿದ್ದ ಗಾಂಧಿ ನಡಿಗೆಯಲ್ಲಿ ಸುಳ್ಯದ ಹಲವಾರು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸೇರಿ ನೂರಾರು ಮಂದಿ ಭಾಗವಹಿಸಿ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಿದ್ದರು. ಕಳೆದ ವರ್ಷ ಅಕ್ಟೋಬರ್ ಎರಡರಂದು ಸುಳ್ಯ ನಗರದಿಂದ ಕೊಡಿಯಾಲಬೈಲಿನಲ್ಲಿರುವ ಗಾಂಧಿವನದ ವರೆಗೆ ಗಾಂಧಿ ನಡಿಗೆ ಏರ್ಪಡಿಸಲಾಗಿತ್ತು” ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿಯವರು ಮಾತನಾಡಿ ” ಗಾಂಧಿನಗರದಲ್ಲಿ ಮಹಾತ್ಮ ಗಾಂಧೀಜಿಯವರನ್ನು ನೆನಪಿಸಿಕೊಳ್ಳುವ ರೀತಿಯಲ್ಲಿ ಏನಾದರೂ ಇರಬೇಕು. ಅದಕ್ಕಾಗಿ ಏನಾದರೂ ಮಾಡಬೇಕೆಂಬ ಮನಸ್ಸು ಹಲವಾರು ವರ್ಷಗಳಿಂದ ಇತ್ತು. ಈ ಹಿನ್ನೆಲೆಯಲ್ಲಿ ಗಾಂಧಿನಗರ ಪೇಟೆಯಿಂದ ಪ್ರೌಢಶಾಲೆಗೆ ತಿರುಗುವಲ್ಲಿ ರಸ್ತೆ ಅಗಲಗೊಳಿಸಿ, ಆಟೋ ನಿಲ್ದಾಣದ ಬಳಿ ಅದಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇವೆ. ಬಳಿಕ ಇದನ್ನು ಗಾಂಧಿ ಚಿಂತನ ವೇದಿಕೆಯ ಗಮನಕ್ಕೆ ನೀಡಿ ಗಾಂಧಿ ಸ್ಮಾರಕ ನಿರ್ಮಿಸುವ ಕುರಿತು ಚರ್ಚೆ ನಡೆಸಿದಾಗ ಹರೀಶ್ ಬಂಟ್ವಾಳರು ಸ್ಪಂದಿಸಿ ಮಾರ್ಗದರ್ಶನ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಗಾಂಧಿ ಸ್ಮಾರಕ ನಿರ್ಮಿಸುವ ಬಗ್ಗೆ ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ. ಆ ಕನಸು ಆದಷ್ಟು ಶೀಘ್ರದಲ್ಲಿ ಪೂರ್ತಿ ಆಗಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗಾಂಧಿ ಚಿಂತನ ವೇದಿಕೆಯ ಸಹ ಸಂಚಾಲಕರುಗಳಾದ ಚಂದ್ರಶೇಖರ ಪೇರಾಲು ಹಾಗೂ ಶಂಕರ ಪೆರಾಜೆ ಉಪಸ್ಥಿತರಿದ್ದರು.