ದ ಕ ಜಿಲ್ಲಾ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ. ಜಗದೀಶ್ ಕೆ. ನಾಯರ್‌ರಿಂದ ಮಾಹಿತಿ
ಮುಂಬರುವ ಲೋಕಸಭಾ ಚುನಾವಣೆಯ ಅಂಗವಾಗಿ ಮಾರ್ಚ್ ೧೩ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಚುನಾವಣಾ ಕರ್ತವ್ಯ ನಿರತ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಭೆ ನಡೆಯಿತು.
ಈ ಸಭೆಯಲ್ಲಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರ ಸಹಾಯಕ ಚುನಾವಣಾ ಅಧಿಕಾರಿ ಡಾ.ಜಗದೀಶ್ ಕೆ ನಾಯರ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮುಂಬರುವ ಲೋಕಸಭಾ ಚುನಾವಣೆ ೨೦೨೪ ರ ಚುನಾವಣೆಗೆ ಯಾವ ರೀತಿ ಸನ್ನದ್ಧರಾಗ ಬೇಕೆಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು. ಮತ್ತು ಈಗಾಗಲೇ ಯಾವ ರೀತಿಯಲ್ಲಿ ತಯಾರಾಗಿದ್ದೀರಿ ಎಂಬ ಮಾಹಿತಿಯನ್ನು ಕೂಡ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಲ್ಲಿ ಸೇರಿರುವ ಎಲ್ಲಾ ಅಧಿಕಾರಿಗಳು ಚುನಾವಣೆಗಳಲ್ಲಿ ಕೆಲಸವನ್ನು ಮಾಡಿರುತ್ತೀರಿ. ಆದರೆ ಪ್ರತಿಯೊಂದು ಚುನಾವಣೆಯನ್ನು ಹೊಸ ಚುನಾವಣೆ ಎಂದು ತೆಗೆದುಕೊಂಡು ನಮಗೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ನಿಭಾಯಿಸಬೇಕೆಂದು ಹೇಳಿದರು.
ಈಗಾಗಲೇ ಹಿರಿಯ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ನೇಮಿಸಿರುವ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಮಾಹಿತಿಯನ್ನು ಪಡೆದುಕೊಂಡ ಅವರು ಪ್ರತಿಯೊಬ್ಬರೂ ಅವರವರ ಪೋಲಿಂಗ್ ಕೇಂದ್ರಗಳಿಗೆ ಭೇಟಿ ನೀಡಬೇಕು. ಅಲ್ಲಿರುವ ಎಲ್ಲಾ ಮೂಲಭೂತ ವ್ಯವಸ್ಥೆಗಳ ಬಗ್ಗೆ ನೀರು, ವಿದ್ಯುತ್, ಸ್ಥಳೀಯ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಇವೆಲ್ಲದರ ಬಗ್ಗೆ ತಿಳಿದುಕೊಂಡು ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಕೊರತೆಗಳು ಕಂಡು ಬಂದಲ್ಲಿ ಸರಿಪಡಿಸಿಕೊಳ್ಳುವ ಜವಾಬ್ದಾರಿಯನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು. ಅಲ್ಲದೆ ವಯೋವೃದ್ಧ ಮತದಾರರಿಗೆ ಅವರವರ ಮನೆಗಳಲ್ಲಿ ಮತದಾನ ಮಾಡಲು ಅವಕಾಶವಿದ್ದು ಅದರ ಬಗ್ಗೆ ಪೂರ್ಣ ಮಾಹಿತಿ ಸಂಗ್ರಹಿಸಬೇಕೆಂದು ಹೇಳಿದರು.
ಅಲ್ಲದೆ ಯಾವುದಾದರೂ ಮತಗಟ್ಟೆಗಳಲ್ಲಿ ರಾಜಕೀಯ ಘರ್ಷಣೆಗಳು, ಗುಂಪು ಘರ್ಷಣೆಗಳು, ಏನಾದರೂ ಇದಕ್ಕೂ ಮೊದಲ ಚುನಾವಣೆಗಳಲ್ಲಿ ನಡೆದಿದ್ದಲ್ಲಿ ಪೊಲೀಸ್ ಇಲಾಖೆಗೆ ಇದರ ಸಂಪೂರ್ಣ ಮಾಹಿತಿಗಳನ್ನು ನೀಡಬೇಕೆಂದು ಹೇಳಿದರು.
ಕರ್ತವ್ಯದಲ್ಲಿರುವ ಎಲ್ಲಾ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿ ಇದ್ದುಕೊಂಡು ನಮ್ಮ ನಮ್ಮ ಕರ್ತವ್ಯದಲ್ಲಿ ಯಾವುದೇ ಲೋಪದೋಷಗಳು ಬಾರದಂತೆ ಜಾಗೃತಿ ವಹಿಸಿಕೊಳ್ಳಬೇಕೆಂದು ಹೇಳಿದರು.
ನೀತಿ ಸಹಿತೆ ಜಾರಿಯಾದ ದಿನದಿಂದ ಹಿಡಿದು ಚುನಾವಣೆ ಮುಗಿಯುವ ತನಕ ಅವರವರಿಗೆ ನೀಡಿರುವ ಕರ್ತವ್ಯದಲ್ಲಿ ಸಮಯ ಪಾಲನೆಯನ್ನು ಅನುಸರಿಸಬೇಕೆಂದು ಹೇಳಿದರು. ವೋಟಿಂಗ್ ಮಿಷನ್ ಗಳು ಏನಾದರೂ ಸಮಸ್ಯೆ ಬಂದು ನಿಂತು ಹೋದರೆ ಕೂಡಲೇ ಅದಕ್ಕೆ ಬದಲಿ ವ್ಯವಸ್ಥೆಯನ್ನು ಮಾಡುವಲ್ಲಿ ಸನ್ನದ್ಧರಾಗಿ ಇರಬೇಕೆಂದು ಹೇಳಿದರು.
ಅಲ್ಲದೆ ಚಕ್ ಪೋಸ್ಟ್ ಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಸಿಸಿಟಿವಿ ವ್ಯವಸ್ಥೆ, ಪೊಲೀಸ್ ಇಲಾಖೆ ರಕ್ಷಣೆ, ಅಬಕಾರಿ ಇಲಾಖೆಯವರು ಮತ್ತು ಅಲ್ಲಿ ಇರಬೇಕಾದ ಮೂಲಭೂತ ವ್ಯವಸ್ಥೆಗಳ ಬಗ್ಗೆ ತಯಾರಿರಬೇಕೆಂದು ಹೇಳಿದರು.
ಸಭೆ ಸಮಾರಂಭಗಳಲ್ಲಿ ವಿಡಿಯೋ ಚಿತ್ರೀಕರಿಸುವ ಮತ್ತು ಅದರ ಮಾಹಿತಿಯನ್ನು ನೀಡುವ ವಿಭಾಗದವರು ಹೆಚ್ಚಿನ ಜಾಗರೂಕತರಾಗಿ ಕೆಲಸ ನಿರ್ವಹಿಸಬೇಕೆಂದು ಹೇಳಿದರು.
ಸುಮಾರು ಮೂರು ಗಂಟೆಗಳ ಕಾಲ ಸುಧೀರ್ಘವಾಗಿ ನಡೆದ ಈ ಸಭೆಯಲ್ಲಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.
ವೇದಿಕೆಯಲ್ಲಿ ಸುಳ್ಯ ತಹಶೀಲ್ದಾರ್ ಮಂಜುನಾಥ್,ಕಡಬ ತಹಶೀಲ್ದಾರ್ ಪ್ರಭಾಕರ್, ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ್ ಉಪಸ್ಥಿತರಿದ್ದರು.
ಸುಳ್ಯ ತಾಲೂಕು ಕಚೇರಿ ಚುನಾವಣಾಧಿಕಾರಿ ಚಂದ್ರಕಾಂತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.