ಕೋವಿ ಡೆಪಾಸಿಟ್ ಆದೇಶದಿಂದ ವಿನಾಯಿತಿ ನೀಡಿ

0


ರೈತರಿಂದ ಸಹಾಯಕ ಚುನಾವಣಾಧಿಕಾರಿಗೆ ಮನವಿ


ಎ. 26 ರೊಗಳಗೆ ಸ್ಪಂದಿಸದಿದ್ದರೆ ತಾಲೂಕು ಕಚೇರಿ ಎದುರು ಹಕ್ಕೊತ್ತಾಯ


ಚುನಾವಣೆಯ ಸಂದರ್ಭದಲ್ಲಿ ಕೋವಿ ಡೆಪಾಸಿಟ್ ಮಾಡಬೇಕೆಂಬ ಆದೇಶದಿಂದ ಸುಳ್ಯ ತಾಲೂಕಿನ ರೈತರಿಗೆ ವಿನಾಯಿತಿ ನೀಡದಿದ್ದರೆ ಎ.26 ರಂದು ತಾಲೂಕು ಕಚೇರಿಯ ಎದುರು ಬೃಹತ್ ಹಕ್ಕೊತ್ತಾಯ ಸಭೆ ನಡೆಸುವುದಾಗಿ ರೈತರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.


ಕೋವಿ ಡೆಪಾಸಿಟ್ ಇರಿಸುವುದರಿಂದ ಎರಡು ತಿಂಗಳುಗಳ ಕಾಲ ಕೋವಿ ಇಲ್ಲದೆ ಕಾಡುಪ್ರಾಣಿಗಳಿಂದ ಬೆಳೆಗಳಿಗೆ ಆಗುವ ಹಾನಿಯ ಬಗ್ಗೆ ಶಿವಕೃಪಾ ಕಲಾಮಂದಿರದಲ್ಲಿ ಸೇರಿ ಸುದೀರ್ಘವಾಗಿ ಚರ್ಚಿಸಿದ ರೈತರು ಬಳಿಕ ಸಹಾಯಕ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಲು ತಾಲೂಕು ಕಚೇರಿಗೆ ಹೋದರು.
ಅಲ್ಲಿ ನ್ಯಾಯವಾದಿ ಎಂ. ವೆಂಕಪ್ಪ ಗೌಡರು, “ಕಾಡುಪ್ರಾಣಿಗಳಿಂದ ರೈತರ ಬೆಳೆಗಳಿಗೆ ಆಗುತ್ತಿರುವ ಸಮಸ್ಯೆ, ಚುನಾವಣೆಯ ಸಂದರ್ಭ ಕೋವಿ ಡೆಪಾಸಿಟ್ ಇರಿಸಿದರೆ ರೈತರಿಗೆ ಆಗುವ ನಷ್ಟದ ಬಗ್ಗೆ ವಿವರಿಸಿ, ಎ. ೨೬ ರ ಒಳಗೆ ನಮಗೆ ಪೂರಕವಾದ ನಿರ್ಧಾರ ತಿಳಿಸಬೇಕು” ಎಂದರು.


ಭರತ್ ಕಾಯರ ಐವರ್ನಾಡು, ಕೆ.ಪಿ. ಜಗದೀಶ್, ಉಮಾಶಂಕರ ಅಡ್ಯಡ್ಕ, ಮೊದಲಾದವರು ಪೂರಕವಾಗಿ ಮಾತನಾಡಿದರು.
“ನಿಮ್ಮ ಅಹವಾಲನ್ನು ಲಿಖಿತವಾಗಿ ನೀಡಿ. ಅದನ್ನು ನಾನು ಜಿಲ್ಲಾಧಿಕಾರಿಯವರಿಗೆ ಕಳುಹಿಸಿಕೊಡುತ್ತೇನೆ” ಎಂದು ಸಹಾಯಕ ಚುನಾವಣಾಧಿಕಾರಿ, ಜಿ.ಪಂ. ಉಪಕಾರ್ಯದರ್ಶಿ ಜಗದೀಶ್ ನಾಯ್ಕ್‌ರವರು ಹೇಳಿದಾಗ, “ಸರ್ ನೀವು ಮಾ. ೨೬ರ ಒಳಗೆ ರೈತರಿಗೆ ಪೂರಕವಾದ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ನಾವು ರೈತರು ಪಕ್ಷ ಬೇಧವಿಲ್ಲದೆ ಇದೇ ತಾಲೂಕು ಕಚೇರಿಯ ಮುಂಭಾಗದಲ್ಲಿ ಸೇರಿ ಹಕ್ಕೊತ್ತಾಯ ಮಾಡುತ್ತೇವೆ” ಎಂದು ವೆಂಕಪ್ಪ ಗೌಡರು ಹೇಳಿದರು. ಇದಕ್ಕೆ ಸಂಬಂಧಿಸಿ ಸಿದ್ಧಗೊಳಿಸಿದ ಮನವಿನ್ನು ಎ.ಸಿ.ಯವರಿಗೆ ನೀಡಿದರು.


ಬಳಿಕ ಹೊರಗಡೆ ಕೋವಿ ಪರವಾನಿಗೆದಾರರನ್ನುದ್ಧೇಶಿಸಿ ಮಾತನಾಡಿದ ಎಂ. ವೆಂಕಪ್ಪ ಗೌಡರು, “ಎ.೨೬ರಂದು ಬೆಳಿಗ್ಗೆ ೧೦ ಗಂಟೆಗೆ ನಾವೆಲ್ಲಾ ರೈತರು ಕೋವಿ ಲೈಸೆನ್ಸ್ ಇರುವ ಕನಿಷ್ಟ ೨ ಸಾವಿರ ರೈತರು ಇಲ್ಲಿ ತಾಲೂಕು ಕಚೇರಿಯ ಮುಂಭಾಗ ಸೇರಬೇಕು. ಕೋವಿ ತೆಗೆದುಕೊಂಡು ಬರುವುದು ಬೇಡ, ಕೋವಿ ಲೈಸೆನ್ಸ್ ತೆಗೆದುಕೊಂಡು ಬರಬೇಕು’ ಎಂದು ಕರೆ ನೀಡಿದರು. ಪಿ.ಎಸ್.ಗಂಗಾಧರ್ ವಂದಿಸಿದರು.