ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತೆರೆದುಕೊಳ್ಳಲು ಡಾ. ಉಜ್ವಲ್ ಕರೆ
ಇತ್ತೀಚೆಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಂತಹ ಹೊಸ ಹೊಸ ತಂತ್ರಜ್ಞಾನಗಳು ಬರುತ್ತಿದ್ದು , ನಾವು ಅವುಗಳಿಗೆ ಅಪ್ಡೇಟ್ ಆಗಬೇಕಾಗಿದೆ ಎಂದು ಕೆವಿಜಿ ಪಾಲಿಟೆಕ್ನಿಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಹೇಳಿದರು. ಅವರು ಕೆವಿಜಿ ಪಾಲಿಟೆಕ್ನಿಕ್ ನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತಯಾರಿ ಹಾಗೂ ಸಂದರ್ಶನ ಕೌಶಲ್ಯ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಂ.ಕೆ ವಹಿಸಿದ್ದರು.
ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ಸಮಾರಂಭದಲ್ಲಿ ವಿದ್ಯಾಮಾತಾ ಅಕಾಡೆಮಿ ಸುಳ್ಯ ಶಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಚಂದ್ರಾವತಿ ಬಂಡಡ್ಕ, ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕ ವಿವೇಕ್ ಪಿ, ವಿದ್ಯಾರ್ಥಿ ಸಮಾಲೋಚಕ ರಂಗಸ್ವಾಮಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ರವಿಶಂಕರ್ ಹೊಳ್ಳ, ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಬಿಂದು ಕೆ.ವಿ. ಉಪಸ್ಥಿತರಿದ್ದರು.
ತೇಜಸ್ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕು.ದಿಲಾನ್ ಸ್ವಾಗತಿಸಿ, ಕು.ನಿಶ್ಚಿತಾ ವಂದಿಸಿದರು. ಧನುಷ್ ಕಾರ್ಯಕ್ರಮ ನಿರೂಪಿಸಿದರು.