ಗ್ರಾಮ ಗ್ರಾಮಗಳಲ್ಲಿ ಚುನಾವಣಾ ಬಹಿಷ್ಕಾರ ಬ್ಯಾನರ್‌ಗಳನ್ನು ಅಳವಡಿಸುವುದಾಗಿ ಎಚ್ಚರಿಕೆ
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಗಳ ಆಗ್ರಹ
ಲೋಕಸಭೆ ಚುನಾವಣೆಯ ಪ್ರಯುಕ್ತ ರೈತರು ತಮ್ಮ ಕೋವಿಯನ್ನು ಠೇವಣಿ ಇಡಬೇಕೆಂದು ಸರಕಾರ ಆದೇಶ ಹೊರಡಿಸಿದ್ದು,
ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ,ಸುಳ್ಯ ತಾಲೂಕಿನ ಕೆಲವಡೆ ನಕ್ಸಲರು ಬಂದಿರುವ ಸುದ್ದಿ ಹೆಚ್ಚುತ್ತಿದ್ದು ರೈತರು ತಮ್ಮ ಬೆಳೆ ಮತ್ತು ಜೀವ ರಕ್ಷಿಸುವುದೇ ಸವಾಲಾಗಿದೆ. ಹಾಗಾಗಿ ನಮ್ಮಲ್ಲಿರುವ ರಕ್ಷಣಾ ಸಾಮಗ್ರಿಯಾದ ಕೋವಿಯನ್ನು ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡಬೇಕೆಂದು ಚುನಾವಣಾ ಅಧಿಕಾರಿಗಳು ಹೇಳುತ್ತಿರುವುದು ಸರಿಯಲ್ಲ ಎಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಂದೂಕು ಪರವಾನಿಗೆ ಹೊಂದಿರುವ ರೈತ ಮುಖಂಡರು ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಬೇಡಿಕೆಯನ್ನು ಮಂಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ವಕೀಲರು ಮತ್ತು ಕೃಷಿಕರಾದ ಎಂ ವೆಂಕಪ್ಪ ಗೌಡರು, ಬಂದೂಕು ಠೇವಣಿ ಇಡುವ ಆದೇಶವನ್ನು ಮಾಡಿದ್ದಾರೋ ಅವರು ಶೀಘ್ರವೇ ಆದೇಶವನ್ನು ಹಿಂಪಡೆಯಬೇಕು ಇಲ್ಲದಿದ್ದಲ್ಲಿ ಮಾರ್ಚ್ ೨೬ರಂದು ಬೆಳಿಗ್ಗೆ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟ ಬಂದೂಕು ಪರವಾನಿಗೆ ಹೊಂದಿರುವ ಕೃಷಿಕರನ್ನು ಸುಳ್ಯ ತಾಲೂಕು ಕಚೇರಿ ಮುಂಭಾಗಕ್ಕೆ ಬರಮಾಡಿ ನಮ್ಮ ಹಕ್ಕೊತ್ತಾಯ ಪ್ರತಿಭಟನೆಯನ್ನು ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು.
ಈ ಪ್ರತಿಭಟನೆಯನ್ನು ಮಾಡಿದ ಬಳಿಕವೂ ನಮಗೆ ಸ್ಪಂದನೆ ಸಿಗದೇ ಹೋದಲ್ಲಿ ಗ್ರಾಮ ಗ್ರಾಮಗಳಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಗಳನ್ನು ಅಳವಡಿಸುವ ಮೂಲಕ ನಮ್ಮ ಬೇಡಿಕೆಯನ್ನು ಈಡೇರಿಸಲು ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಮಾರ್ಚ್ ೨೬ರಂದು ತಾಲೂಕು ಕಚೇರಿಯಲ್ಲಿ ನಡೆಸುವ ಹಕ್ಕೊತ್ತಾಯ ಪ್ರತಿಭಟನೆಯಲ್ಲಿ ಎಲ್ಲಾ ರಾಜಕೀಯ ಪಕ್ಷದ ಅಧ್ಯಕ್ಷರನ್ನು ಅಥವಾ ಮುಖ್ಯಸ್ಥರನ್ನು ಆಹ್ವಾನಿಸಿ ರೈತರ ಪರವಾಗಿ ನಿಲ್ಲುವಂತೆ ಮನವಿ ಮಾಡಲಾಗುವುದು.ಅಲ್ಲದೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಘೋಷಿತ ಎರಡು ಪಕ್ಷದ ಅಭ್ಯರ್ಥಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡು ನಮ್ಮ ಬೇಡಿಕೆಗೆ ಸ್ಪಂದಿಸುವಂತೆ ಆಗ್ರಹ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.
ಈ ಮೊದಲು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂದೂಕು ಠೇವಣಿ ಇಡುವ ವಿಷಯದ ಕುರಿತು ರಿಯಾಯಿತಿ ಕೋರಿ ೫೦೦ಕ್ಕೂ ಹೆಚ್ಚು ಕೃಷಿಕರು ಮನವಿ ಸಲ್ಲಿಸಿದ್ದು ಅವರಲ್ಲಿ ೨೭೭ ಕ್ಕೂ ಹೆಚ್ಚು ರೈತರಿಗೆ ವಿನಾಯಿತಿಯನ್ನು ನೀಡಲಾಗಿತ್ತು. ಆ ಸಮಯದಲ್ಲಿ ವಿನಾಯಿತಿ ನೀಡಿದ್ದ ಯಾವೊಬ್ಬ ಕೃಷಿಕರೂ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು. ಯಾರೂ ಕೂಡ ಅದರ ದುರುಪಯೋಗ ಪಡಿಸಿಕೊಂಡಿಲ್ಲ.
ಗ್ರಾಮ ಪಂಚಾಯತಿ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಯವರಿಗೆ ನಮ್ಮಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ನಿಷ್ಠೆಯಿಂದ ಇರುವ ರೈತರಿಗೆ ಅನಾವಶ್ಯಕವಾದ ತೊಂದರೆಯನ್ನು ನೀಡುವುದು ಸರಿಯಲ್ಲ, ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗಳನ್ನು ಬೇಕಾದರೆ ಈ ಎಲ್ಲಾ ನಿಯಮಗಳಿಗೆ ಒಳಪಡಿಸಲಿ. ಅದು ಬಿಟ್ಟು ಕೃಷಿಯನ್ನೇ ನಂಬಿಕೊಂಡು ಬದುಕುವ ರೈತರಿಗೆ ಅನಾವಶ್ಯಕವಾದ ಕಿರಿಕಿರಿ ಉಂಟು ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಎಲ್ಲಾ ಮುಖಂಡರು ಬಂದೂಕು ಠೇವಣಿ ಇಡುವ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿ ನಮ್ಮ ಹಕ್ಕಿಗಾಗಿ ಮತದಾನ ಬಹಿಷ್ಕಾರಕ್ಕೂ ನಾವು ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪಿ ಎಸ್ ಗಂಗಾಧರ, ಕೆ ಪಿ ಜಗದೀಶ್, ಎನ್ ಎಸ್ ದಾಮೋದರ ನಾರ್ಕೋಡು, ಲೋಲಜಾಕ್ಷ ಭೂತ ಕಲ್ಲು, ಭರತ್ ಕುಮಾರ್, ಹರೀಶ್ ಮೂರ್ಜೆ ಉಪಸ್ಥಿತರಿದ್ದರು.