ಸುಳ್ಯದಲ್ಲಿ “ಸತ್ಯವೇ ಆರಿಸಿಕೊಂಡ ಸತ್ಯ ದರ್ಶನ” ಕೃತಿ ಲೋಕಾರ್ಪಣೆ

0

ಐವರ್ನಾಡಿನ ನಿಡುಬೆ ಬರಮೇಲು ತರವಾಡು ಮನೆಯಲ್ಲಿ “ಸತ್ಯವೇ ಆರಿಸಿಕೊಂಡ ಸತ್ಯ ದರ್ಶನ” ಕೃತಿ ಲೋಕಾರ್ಪಣೆ ಸಮಾರಂಭ ಮಾ.24 ರಂದು ನಡೆಯಿತು. ಯುವ ಲೇಖಕ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ರಚಿಸಿದ ಈ ಕೃತಿ, ತುಳುನಾಡಿನ ವಿಶಿಷ್ಟವಾದ ದಲಿಯ ಆರಾಧನಾ ಪದ್ಧತಿ ಮತ್ತು ಕುಮಾರ ಸಂಕಪ್ಪಣ್ಣ ನಡೆಸಿಕೊಂಡಿದ್ದ ಈ ಆರಾಧನೆಯ ಒಳನೋಟವನ್ನು ಒದಗಿಸುತ್ತದೆ.

ಜಯರಾಜ್ ಗೌಡ ನಿಡುಬೆ ಅವರು ದಲಿಯದ ದಾಖಲೀಕರಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಕುಮಾರ ಸಂಕಪ್ಪಣ್ಣ ಅವರ ಪುತ್ರ ಕೃಷ್ಣಪ್ಪ ಗೌಡ ನಿಡುಬೆ ಬರಮೇಲು ಅವರಿಂದ ಮಾಹಿತಿ ಸಂಗ್ರಹಿಸುವಲ್ಲಿ ಸಹಕಾರ ನೀಡಿದ್ದನ್ನು ಸ್ಮರಿಸಲಾಯಿತು.

ವೇದಿಕೆಯಲ್ಲಿ ಕೃಷ್ಣಪ್ಪ ಗೌಡ ನಿಡುಬೆ ಬರಮೇಲು, ಚೆನ್ನಪ್ಪ ಗೌಡ, ವಕೀಲ ಕಿಶನ್ ಜಬಳೆ, ಜಯರಾಜ್ ಗೌಡ ನೀಡುಬೆ ಮತ್ತು ಲೇಖಕ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಉಪಸ್ಥಿತರಿದ್ದರು. ಪ್ರಸಾದ್ ಕಾಟೂರು ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು.

ಜಯರಾಜ್ ಗೌಡ ನಿಡುಬೆ ಅವರು ದಲಿಯದ ಬಗ್ಗೆ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡು ಈ ಪದ್ಧತಿಯನ್ನು ದಾಖಲಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಲೇಖಕ ಅನಿಂದಿತ್ ಗೌಡ ಅವರು ತಮ್ಮ ಊರಿನ ಐತಿಹ್ಯಗಳನ್ನು ಉಳಿಸುವ ಉದ್ದೇಶದಿಂದ ಈ ಪುಸ್ತಕವನ್ನು ಬರೆದಿದ್ದಾಗಿ ತಿಳಿಸಿದರು.

ಕಿಶನ್ ಜಬಳೆ ಅವರು ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳನ್ನು ಗೌರವಿಸುವ ಮತ್ತು ದಾಖಲಿಸುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.ಸಮಾರಂಭದ ಕೊನೆಯಲ್ಲಿ ಲೇಖಕರನ್ನು ಸನ್ಮಾನಿಸಲಾಯಿತು.

“ಸತ್ಯವೇ ಆರಿಸಿಕೊಂಡ ಸತ್ಯ ದರ್ಶನ” ಕೃತಿ ಬಿಡುಗಡೆಯು ಒಂದು ಅನನ್ಯ ಆರಾಧನಾ ಪದ್ಧತಿಯನ್ನು ಉಳಿಸುವ ಮತ್ತು ದಾಖಲಿಸುವ ಪ್ರಯತ್ನಕ್ಕೆ ಒಂದು ಮಹತ್ವದ ಕೊಡುಗೆಯಾಗಿದೆ.”