ಮೂರು ದಿನಗಳ ಕಾಲ ನಡೆದ ಕುಡೆಕಲ್ಲು ಕುಟುಂಬದ ದೈವಗಳ ಕಳಿಯಾಟ ಮಹೋತ್ಸವ ಸಂಪನ್ನ

0

ಆಲೆಟ್ಟಿ ಗ್ರಾಮದ ಪ್ರತಿಷ್ಠಿತ ಕುಡೆಕಲ್ಲು ಕುಟುಂಬದ ತರವಾಡು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.24 ರಿಂದ 26 ರ ತನಕ ವರ್ಪ್ರಂಪ್ರತಿ ಜರುಗುವ ಶ್ರೀ ವಿಷ್ಣುಮೂರ್ತಿ ಹಾಗೂ ಉಪದೈವಗಳ ಕಳಿಯಾಟ ಮಹೋತ್ಸವವು ಭಕ್ತಿ ಪ್ರಧಾನವಾಗಿ ಸಂಪ್ರದಾಯದಂತೆ ಜರುಗಿತು.

ಮಾ.24 ರಂದು ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ಉತ್ಸವವು ಆರಂಭಗೊಂಡಿತು. ಬಳಿಕ ನಾಗನ ಕಟ್ಟೆಯಲ್ಲಿ ನಾಗತಂಬಿಲ ಸೇವೆ ನಡೆದು ಕುಡೆಕಲ್ಲು ಐನ್ ಮನೆಯ ಮುಂಭಾಗದಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆಯು ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆಯಾಯಿತು.

ಅದೇ ದಿನ ರಾತ್ರಿ ಶ್ರೀ ದೈವದ ಕಳಿಯಾಟಕ್ಕೆ ಕೂಡಿ ಉಗ್ರಾಣ ತುಂಬುವುದರೊಂದಿಗೆ ಕುಡೆಕಲ್ಲು ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕೈವೀದ್ ನಡೆದು ವಿಷ್ಣುಮೂರ್ತಿ ಮತ್ತು ವಯನಾಟ್ ಕುಲವನ್ ದೈವದ ಪಾತ್ರಿಯವರ ನೇತೃತ್ವದಲ್ಲಿ ಕಲಶ ಆಗಮಿಸಿ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ನಡೆಯಿತು. ಈ ಸಂದರ್ಭದಲ್ಲಿ ಗುರು ಕಾರ್ನೋರು ದೈವದ ಸೇವೆಯು ನಡೆಯಿತು.

ಮಾ.25 ರಂದು ಪೂರ್ವಾಹ್ನ ಶ್ರೀ ಪೊಟ್ಟನ್ ದೈವದ ನರ್ತನ ಸೇವೆ ಹಾಗೂ ಅಪರಾಹ್ನ ಶ್ರೀ ರಕ್ತೇಶ್ವರಿ ದೈವದ ಸೇವೆ ನಡೆದು ರಾತ್ರಿ ಶ್ರೀ ವಿಷ್ಣುಮೂರ್ತಿ ದೈವ , ಶ್ರೀ ಧರ್ಮ ದೈವ ರುದ್ರ ಚಾಮುಂಡಿ ಹಾಗೂ ಶ್ರೀಪಾಷಾಣಮೂರ್ತಿ ದೈವಗಳ ನರ್ತನ ಸೇವೆಯಾಗಿ ಮೂರು ದೈವಗಳ ಮುಖಾ ಮುಖಿಯಾಗಿ ನುಡಿ ಕಟ್ಟಿನ ಸಂಭಾಷಣೆ ನಡೆಯಿತು. ದೈವದ ಪಾತ್ರಿಗಳ ಸಮ್ಮುಖದಲ್ಲಿ ವಯನಾಟ್ ಕುಲವನ್ ದೈವಸ್ಥಾನದಿಂದ ಕಲಶ ಆಗಮಿಸಿದ ಬಳಿಕ ಶ್ರೀ ದೈವದ ಕಲಶ ಹೊರುವ ಕಾರ್ಯಕ್ರಮ ತೀಯ ಸಮಾಜ ಬಾಂಧವರಿಂದ ನೆರವೇರುವುದು.ನಂತರ ಶ್ರೀ ವಿಷ್ಣುಮೂರ್ತಿ ದೈವವು ಹುಲಿಯ ವಾಹನದ ಮೇಲೆ ಕುಳಿತು ದೈವಸ್ಥಾನಕ್ಕೆ ಮೂರು ಸುತ್ತು ಹಾಕುವುದು ಕಳಿಯಾಟದ ಮಹೋತ್ಸವ ಸಂದರ್ಭದಲ್ಲಿ ವಿಶೇಷವಾಗಿರುವುದು. ಬಳಿಕ ಶ್ರೀ ದೈವಗಳು ಐನ್ ಮನೆಯ ಮುಂಭಾಗದಲ್ಲಿ ಭಕ್ತಾದಿಗಳಿಂದ ಹರಿಕೆ ಸಮರ್ಪಣೆ ಮತ್ತು ಪ್ರಸಾದ ವಿತರಣೆಯಾಯಿತು. ಈ ಸಂದರ್ಭದಲ್ಲಿ ವಿಶೇಷವಾಗಿ ತುಲಾಭಾರ ಸೇವೆಯು ಭಕ್ತರಿಂದ ಸಮರ್ಪಿಸಲಾಯಿತು.

ಮೂರನೇಯ ದಿನದಂದು ಪೂರ್ವಾಹ್ನ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟವಾಗಿ ಸಂಜೆ ಶ್ರೀ ಪಿಲಿಭೂತ ದೈವದ ನರ್ತನ ಸೇವೆಯಾದ ಬಳಿಕ ಶ್ರೀ ವಿಷ್ಣುಮೂರ್ತಿ ,ಶ್ರೀ ಧರ್ಮ ದೈವ ,ಶ್ರೀ ಪಾಷಾಣಮೂರ್ತಿ ದೈವಗಳ ನರ್ತನ ಸೇವೆಯಾಗಿ ಶ್ರೀ ದೈವದ ಕಲಶ ಹೊರುವುದು ನಂತರ ಹರಿಕೆಯ ಪ್ರಸಾದ ವಿತರಣೆಯಾಗಿ ತುಲಾಭಾರ ಸೇವೆಯು ಭಕ್ತರಿಂದ ಅರ್ಪಿಸಲಾಯಿತು.


ಮೂರು ದಿನಗಳ ಕಾಲವು ಕಳಿಯಾಟ ಮಹೋತ್ಸವ ವು ಹಿಂದಿನ ಕಾಲದಲ್ಲಿ ನಡೆದು ಬಂದಿರುವ ಸಂಪ್ರದಾಯ ಹಾಗೂ ಪರಂಪರೆಯಂತೆ ಆಚರಿಸಿಕೊಂಡು ಬರುವುದು ಸಾನಿಧ್ಯದಲ್ಲಿ ವಿಶೇಷವಾಗಿ ಕಂಡು ಬರುವುದು. ಕುಟುಂಬದ ಯಜಮಾನರು ಹಾಗೂ ಹಿರಿಯ, ಕಿರಿಯ ಸದಸ್ಯರು ಆಗಮಿಸಿದ ಎಲ್ಲಾ ಭಕ್ತಾದಿಗಳನ್ನು ಸ್ವಾಗತಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಊರಿನ ಪರ ಊರಿನ ಭಕ್ತರು ಆಗಮಿಸಿ ಶ್ರೀ ದೈವಗಳ ‌ಪ್ರಸಾದ ಸ್ವೀಕರಿಸಿದರು.

ಕಳಿಯಾಟ ಮಹೋತ್ಸವ ಸಂದರ್ಭದಲ್ಲಿ ಆಗಮಿಸಿದ ಭಕ್ತಾದಿಗಳಿಗೆ ಮೂರು ದಿನಗಳ ಕಾಲ ನಿರಂತರವಾಗಿ ಅನ್ನ ಪ್ರಸಾದ ವಿತರಣೆಯಾಯಿತು.