ಪ್ರತೀ ಮತಗಟ್ಟೆಯಲ್ಲಿ ಲೀಡ್ ತರುವುದಕ್ಕೆ ಕಾರ್ಯಕರ್ತರು ಸಂಕಲ್ಪ ಮಾಡಿ : ಸಂಸದ ನಳಿನ್ ಕಟೀಲ್
ದೇಶದ ಮುಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಎನ್ನುವುದು ಈಗಾಗಲೇ ನಿಶ್ಚಿತ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಅಭ್ಯರ್ಥಿ ಸಂಸದರಾಗೋದು ನಿಶ್ಚಿತವಾಗಿದ್ದು, ಈ ಗೆಲುವಿಗಾಗಿ ನಾವೆಲ್ಲರೂ ನಮ್ಮ ನಮ್ಮ ಮತಗಟ್ಟೆಯನ್ನು ಗೆಲ್ಲಬೇಕಾಗಿದೆ. ಅದಕ್ಕಾಗಿ ನಾವೆಲ್ಲರೂ ಸಂಕಲ್ಪ ಮಾಡಬೇಕು” ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸುಳ್ಯ ಬಿಜೆಪಿ ಮಂಡಲ ಸಮಿತಿಯ ವತಿಯಿಂದ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಳೆದ 15 ವರ್ಷಗಳಲ್ಲಿ ನಾನು ಸಂಸದನಾಗಿ ಕೆಲಸ ಮಾಡಿದ್ದೇನೆ. ಅದಕ್ಕೆ ಕಾರಣರಾದವರು ನೀವು. ಸುಳ್ಯ ಮೂರು ಅವಧಿಯಲ್ಲಿಯೂ ಅತ್ಯಂತ ಹೆಚ್ಚು ಲೀಡ್ ನೀಡಿದೆ. ಈ ಬಾರಿಯೂ 60 ಸಾವಿರಕ್ಕಿಂತ ಅಧಿಕ ಲೀಡ್ ಸುಳ್ಯದಿಂದ ಕೊಟ್ಟು ಜಿಲ್ಲೆಯಲ್ಲಿ 3 ಲಕ್ಷಕ್ಕೂ ಮತಗಳಿಂದ ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಕಟೀಲ್ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿದರು. ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟ ವೇದಿಕೆಯಲ್ಲಿ ದ್ದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಸಂಘಟನೆಯ ಮೂಲಕ ಬೆಳೆದುಬಂದ ಪಕ್ಷ ಜಿಲ್ಲೆಗೆ ಮಾದರಿಯಾಗಿದೆ. ದೇಶ ಸೇವೆಯಲ್ಲಿದ್ದ ನಮ್ಮ ಅಭ್ಯರ್ಥಿ ಬ್ರಿಜೇಶ್ ಚೌಟರು ಜನ ಸೇವೆಗೆ ತೊಡಗಿಸಿಕೊಂಡಿದ್ದಾರೆ. ನಾವೆಲ್ಲರೂ ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಇವರನ್ನು 60 ಸಾವಿರ ಮತಗಳ ಅಂತರದಿಂದ ಗೆಲ್ಲಿಸೋಣ. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ಎಲ್ಲರೂ ಶ್ರಮ ಪಡಬೇಕು” ಎಂದು ಹೇಳಿದರು.
ಮಾಜಿ ಸಚಿವ ಎಸ್.ಅಂಗಾರ ಮಾತನಾಡಿ ನರೇಂದ್ರ ಮೋದಿ ಸರಕಾರದ ಮೇಲೆ ಜನರಿಗೆ ವಿಶ್ವಾಸ ಬಂದಿದೆ. ಆದ್ದರಿಂದ ಮತ್ತೊಮ್ಮೆ ಪ್ರಧಾನಿ ಆಗ್ತಾರೆ. ದ.ಕ. ಕ್ಷೇತ್ರದ ನಮ್ಮ ಅಭ್ಯರ್ಥಿಗೆ ಸುಳ್ಯ ಕ್ಷೇತ್ರದಿಂದ 70 ಸಾವಿರ ಮತಗಳ ಲೀಡ್ ಕೊಡಲು ಎಲ್ಲರೂ ಆತ್ಮವಿಶ್ವಾಸದೊಂದಿಗೆ ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಯತೀಶ್ ಆರ್ವಾರ, ಕಿಶೋರ್ ಕುಮಾರ್ ಬೊಟ್ಯಾಡಿ, ಸುಳ್ಯ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಅಪ್ಪಯ್ಯ ಮಣಿಯಾಣಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಕೇಶ್ ರೈ ಕೆಡೆಂಜಿ, ಜಿಲ್ಲಾ ಕಾರ್ಯದರ್ಶಿ ವಿನಯ ಮುಳುಗಾಡು, ಸೀತಾರಾಮ ಬಳಾಲ್, ಜಿಲ್ಲಾ ಬಿಜೆಪಿ ಪ್ರವಾಸ ಪ್ರಭಾರಿ ದೇವದಾಸ್ ಶೆಟ್ಟಿ, ಸುಳ್ಯ ವಿಧಾನ ಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಹರೀಶ್ ಕಂಜಿಪಿಲಿ ವೇದಿಕೆಯಲ್ಲಿ ಇದ್ದರು.
ಅಶ್ವಿತ್ ಅತ್ರೆಯ ವಂದೆ ಮಾತರಾಂ ಹಾಡಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರಾಸ್ತಾವಿಕ ಮಾತನಾಡಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಸ್ವಾಗತಿಸಿದರು. ನಗರ ಬಿಜೆಪಿ ಅಧ್ಯಕ್ಷ ಎ.ಟಿ.ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು.