ಸಿ.ಟಿ.ರವಿಯವರ ಹೇಳಿಕೆ ಮಹಿಳಾ ಕಾಂಗ್ರೆಸ್ ಖಂಡಿಸುತ್ತದೆ : ಬಿಜೆಪಿ ಮಹಿಳಾ ಮೋರ್ಚಾ ಯಾಕೆ ಮೌನ ?
ಎಂ.ಎಲ್.ಸಿ. ಸಿ.ಟಿ. ರವಿಯವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಿಗೆ ಮಾಡಿರುವ ಪದ ಬಳಕೆಯನ್ನು ಸುಳ್ಯ ಕಾಂಗ್ರೆಸ್ ಖಂಡಿಸುತ್ತದೆ. ಮತ್ತು ರವಿ ಅವರನ್ನು ಬೆಂಬಲಿಸುವವರು ಕೂಡಾ ಮಹಿಳೆಯರಿಗೆ ಗೌರವ ಕೊಡುವುದಿಲ್ಲವೆಂದೇ ಅರ್ಥ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಡಿ.21ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮಹಿಳೆಯರಿಗೆ ಮಾತೆ ಎಂದು ಗೌರವ ಕೊಡುವವರು. ಅಂತಹ ಪಕ್ಷದ ನಾಯಕರಾಗಿರುವ ಸಿ.ಟಿ. ರವಿಯವರ ಬಾಯಿಂದ ಬಂದಿರುವ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಅವರು ಇದೇ ಮೊದಲು ಈ ರೀತಿ ಮಾತನಾಡುತ್ತಿರುವುದಲ್ಲ. ಈ ಹಿಂದೆಯೂ ಅವಾಚ್ಯ ಪದಗಳು ಇವರಿಂದ ಬಂದಿದೆ. ಬಿಜೆಪಿಯವರು ಪೆದುಂಬು ಮಾತನಾಡಲೆಂದೇ ಸಿ.ಟಿ. ರವಿಯವರನ್ನು ಇಟ್ಟುಕೊಂಡಂತೆ ಭಾಸವಾಗುತ್ತಿದೆ.ಅವರಿಗೆ ಇನ್ನಾದರೂ ದೇವರ ಒಳ್ಳೆ ಬುದ್ದಿ ಕೊಡಲಿ ಎಂದು ಹೇಳಿದರು.
ಬಿಜೆಪಿ ಕೇಂದ್ರದ ನಾಯಕರಾಗಿರುವ ಅಮಿತ್ ಶಾ ರವರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕುರಿತಾಗಿ ಆಡಿದ ಮಾತನ್ನು ಕಾಂಗ್ರೆಸ್ ಖಂಡಿಸುತ್ತದೆ. ಅಂಬೇಡ್ಕರ್ ರವರು ಸಂವಿಧಾನ ರಚಿಸದೇ ಇರುತ್ತಿದ್ದರೆ ಇಲ್ಲಿಯ ಶಾಸಕರಾಗಿದ್ದ ಅಂಗಾರರು, ಈಗಿನ ಎಂ.ಎಲ್.ಎ.ಭಾಗೀರಥಿ ಈ ಸ್ಥಾನಕ್ಕೆ ಹೋಗಲು ಸಾಧ್ಯವಿತ್ತಾ? ಎಂದು ಅವರು ಪ್ರಶ್ನಿಸಿದರು. ಬಿಜೆಪಿಗರಿಗೆ ಈ ದೇಶದ ಬಗ್ಗೆ, ರಾಷ್ಟ್ರ ನಾಯಕರ ಬಗ್ಗೆ ಗೌರವ ಇಲ್ಲ. ಬಿಜೆಪಿಯವರು ದುರಹಂಕಾರದ ಮಾತು ಆಡುತ್ತಾರೆ. ಏನೇ ಮಾಡಿದರೂ ಜನರು ಓಟು ಕೊಡುತ್ತಾರೆಂಬ ಭಾವನೆ ಇರುವುದರಿಂದಲೇ ಅವರು ಈ ರೀತಿ ಆಡುತ್ತಿದ್ದಾರೆಂದು ನಮಗನಿಸುತ್ತಿದೆ ಎಂದ ವೆಂಕಪ್ಪ ಗೌಡರು, ರಾಜ್ಯದಲ್ಲಿ ಹಾಗೂ ದೆಹಲಿಯಲ್ಲಿ ನಡೆದ ಎರಡೂ ಘಟನೆಗಳಿಗೂ ಬಿಜೆಪಿಯ ಇಬ್ಬರು ನಾಯಕರು ಕಾರಣ. ಇದೆಲ್ಲವನ್ನು ನೋಡಿ ಸಾಕಾಗಿರುವ ಆರ್.ಎಸ್.ಎಸ್. ನ ಹಿರಿಯ ನಾಯಕ ಭಾಗವತ್ ಬಿಜೆಪಿಗರಿಗೆ ಬುದ್ದಿ ಹೇಳಿದ್ದಾರೆ ಎಂದು ವೆಂಕಪ್ಪ ಗೌಡರು ಹೇಳಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ಮಾತನಾಡಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತಾಗಿ ಸಿ.ಟಿ. ರವಿಯವರು ಆಡಿದ ಮಾತನ್ನು ನಾವು ಖಂಡಿಸುತ್ತೇವೆ. ಮಹಿಳೆಯರಿಗೆ ಅನ್ಯಾಯವಾದರೆ ನಾವಿದ್ದೇವೆ ಎಂದು ಹೇಳುವ ಬಿಜೆಪಿ ಮಹಿಳಾ ಘಟಕದವರು ಯಾಕೆ ಮೌನವಾಗಿದ್ದಾರೆ ಎಂದು ಅವರು ಪ್ರಶ್ನಿಸಿದರು.
ನ.ಪಂ. ಸದಸ್ಯ ಕೆ.ಎಸ್. ಉಮ್ಮರ್ ಮಾತನಾಡಿ, ಸಂವಿಧಾನ ವಿರೋಧ ಹೇಳಿಕೆಯನ್ನು ನಾವು ಖಂಡಿಸುವುದಾಗಿ ಹೇಳಿದರು.
ನ.ಪಂ. ಸದಸ್ಯರುಗಳಾದ ಶರೀಫ್ ಕಂಠಿ, ಡೇವಿಡ್ ಧೀರಾ ಕ್ರಾಸ್ತ, ಭಾಸ್ಕರ ಪೂಜಾರಿ, ಭವಾನಿಶಂಕರ್ ಕಲ್ಮಡ್ಕ ಇದ್ದರು.