ಅಗ್ನಿ ಹೋತ್ರ ಮಹತ್ವದ ಕುರಿತು ಉಪನ್ಯಾಸ
ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ 2024ರ ಎಪ್ರಿಲ್ 6 ರಂದು ಕನ್ನಡದ ಖ್ಯಾತ ಸಾಹಿತಿ ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಅವರ ಶತಮಾನೋತ್ಸವದ ಆಚರಣೆ ಹಾಗೂ ವಿದ್ಯಾನಿಧಿಯ ಸ್ಥಾಪನೆಯ ಕಾರ್ಯಕ್ರಮ ನಡೆಯಲಿರುವುದಾಗಿ ಸ್ನೇಹ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಹೇಳಿದ್ದಾರೆ.
ಮಾ.29ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು. “ದಿ. ಎಲ್.ಎಸ್. ಶೇಷಗಿರಿ ರಾವ್ ರವರು ಕನ್ನಡ ಸಾಹಿತ್ಯ ವಿಮರ್ಶೆಗೆ ಭದ್ರ ಬುನಾದಿ ಹಾಕಿದವರು. ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಪಡೆದ ಈ ಹಿರಿಯರ ಶತಮನೋತ್ಸವದ ಆಚರಣೆಯನ್ನು ನಡೆಸುವ ಅವಕಾಶ ಪಡೆದುದಕ್ಕಾಗಿ ನಮಗೆ ಹೆಮ್ಮೆ ಎನಿಸುತ್ತದೆ.
ಇದೇ ಸಂದರ್ಭದಲ್ಲಿ ಕನ್ನಡ ಮಾಧ್ಯಮದ ನಮ್ಮ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳ ಉಚಿತ ಶಿಕ್ಷಣಕ್ಕಾಗಿ ಎಲ್.ಎಸ್.ಎಸ್. ವಿದ್ಯಾನಿಧಿಯ ಸ್ಥಾಪನೆಯ ಕಾರ್ಯಕ್ರಮವೂ ಇದೆ. ಶ್ರೀಮತಿ ಭಾರತಿ ಶೇಷಗಿರಿ ರಾವ್ ರವರು ವಿದ್ಯಾನಿಧಿ ಸಮರ್ಪಣೆಯನ್ನು ಮಾಡಲಿದ್ದಾರೆ. ಶೇಷಗಿರಿ ರಾವ್ ರವರ ಸಾಂಸ್ಕೃತಿಕ ಕೊಡುಗೆಗಳನ್ನು ಕುರಿತು ಸಾಹಿತಿ ಹಾಗೂ ಶಿಕ್ಷಣ ತಜ್ಞ ಶಅರವಿಂದ ಚೊಕ್ಕಾಡಿಯವರು ಉಪನ್ಯಾಸ ನೀಡಲಿದ್ದಾರೆ. ಬೆಂಗಳೂರಿನ ಖ್ಯಾತ ಚಿಂತಕ ಹಾಗೂ ಕನ್ನಡಪರ ಹೋರಾಟಗಾರ ರಾ. ನಂ. ಚಂದ್ರಶೇಖರರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಇದೇ ಸಮಾರಂಭದಲ್ಲಿ ವಿಶೇಷ ಕಾರ್ಯಕ್ರಮವಾಗಿ ಜರ್ಮನಿಯ ಹೋಮ ಚಿಕಿತ್ಸಾ ತಜ್ಞ ಡಾ. ಉಬ್ರಿಕ್ ಬರ್ಕ್ ರವರು “ಅಗ್ನಿಹೋತ್ರದ ಮಹತ್ವ’ದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಅವರು 6ನೇ ತಾರೀಕಿನಂದು ಸೂರ್ಯೋದಯ ಹಾಗೂ ಸೂರ್ಯಾಸ್ತಕ್ಕೆ ಸರಿಯಾಗಿ ಸ್ನೇಹ ಶಾಲೆಯ ಸೂರ್ಯಾಲಯದಲ್ಲಿ ಅಗ್ನಿಹೋತ್ರ ನಡೆಸಲಿದ್ದಾರೆ. ಸಾರ್ವಜನಿಕರಿಗೆ ಇದನ್ನು ವೀಕ್ಷಿಸಲು ಅವಕಾಶವಿದೆ. ಡಾ. ಉಲ್ರಿಕ್ ಬರ್ಕ್‌ರವರು ಯುರೋಪು ಮತ್ತು ಏಶಿಯಾದ ವಿಶ್ವವಿದ್ಯಾಲಗಳಲ್ಲಿ ವೇದ ಜ್ಞಾನ ಪ್ರಸಾರ ಮಾಡುತ್ತಿದ್ದಾರೆ. ಅವರು ಅಂತಾರಾಷ್ಟ್ರೀಯ ಪರಿಸರ ತಜ್ಞ ದೆಹಲಿಯ ಅರುಣ್ ಕಶ್ಯಪ್ ರೊಂದಿಗೆ ಸ್ನೇಹ ಸಂಸ್ಥೆಗೆ ಬರಲಿದ್ದಾರೆ. ಅಗ್ನಿಹೋತ್ರವು ಪರಿಸರದ ಮೇಲೆ ಉಂಟುಮಾಡುವ ಪ್ರಭಾವದ ಬಗ್ಗೆ ಸುಳ್ಯದ ಸಾರ್ವಜನಿಕರಿಗೆ ತಿಳುವಳಿಕೆಗಾಗಿ ಉಬ್ರಿಕ್‌ರವರ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ಅವರ ಮಾತುಗಳ ಸಾರಾಂಶವನ್ನು ಕನ್ನಡದಲ್ಲಿ ಹೇಳಲಾಗುವುದು.
ಈ ಒಟ್ಟು ಕಾರ್ಯಕ್ರಮವು ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ರಂಗಮಂದಿರದಲ್ಲಿ ಎ.6ರಂದು ಬೆಳಗ್ಗೆ 10ರಿಂದ 12 ರ ನಡುವೆ ಜರಗಲಿದೆ ಎಲ್ಲರಿಗೂ ಭಾಗವಹಿಸಬಹುದು ಎಂದು ಹೇಳಿದರು. ಸ್ನೇಹ ಸಂಸ್ಥೆಯ ಕಾರ್ಯದರ್ಶಿ ಡಾ. ವಿದ್ಯಾಶಾಂಭವ ಪಾರೆ, ಮುಖ್ಯೋಪಾಧ್ಯಾಗಿನಿ ಜಯಲಕ್ಷ್ಮಿ ದಾಮ್ಲೆ ಇದ್ದರು.