ಸುಳ್ಯದಲ್ಲಿ ‘ಶಿಶಿಲ ಚಿಂತನೆ’ ಕೃತಿ ಲೋಕಾರ್ಪಣೆ

0

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಅಮರ ಸುಳ್ಯ ಅಧ್ಯಯನ ಕೇಂದ್ರ ಸುಳ್ಯ ಇದರ ಸಹಯೋಗದೊಂದಿಗೆ ಖ್ಯಾತ ಸಾಹಿತಿ ಡಾ.ಶಂಕರ ಪಾಟಾಳಿ ಬದಿಯಡ್ಕ ವಿರಚಿತ, ಆಕೃತಿ ಆಶಯ ಮಂಗಳೂರು ಇದರ ಪ್ರಕಟಣೆಯಲ್ಲಿ ಮೂಡಿಬಂದ ‘ಶಿಶಿಲ ಚಿಂತನೆ’ ಕೃತಿ ಬಿಡುಗಡೆ ಕಾರ್ಯಕ್ರಮ ಮಾ.29ರಂದು ಸುಳ್ಯ ಕನ್ನಡ ಭವನದಲ್ಲಿ ನಡೆಯಿತು.

ಹಿರಿಯ ಯಕ್ಷಗಾನ ಅರ್ಥದಾರಿ ಜಬ್ಬಾರ್ ಸಮೋ ಸಂಪಾಜೆ ಕೃತಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ”ಓರ್ವ ತಾಯಿ ಶಿಶುವನ್ನು ತನ್ನ ಗರ್ಭದಲ್ಲಿ ಒಂಬತ್ತು ತಿಂಗಳು ಹೊತ್ತು ಬಳಿಕ ಅದನ್ನು ಭೂಮಿಗೆ ಬಿಡುಗಡೆಗೊಳಿಸುವ ರೀತಿಯಲ್ಲಿ ಒಬ್ಬ ಸಾಹಿತಿ ತನ್ನ ಕೃತಿಯನ್ನು ಬಹಳಷ್ಟು ದಿನಗಳಿಂದ ತನ್ನ ಮನಸ್ಸಿನಲ್ಲಿ ಬಂದಂತಹ ವಾಕ್ಯಗಳನ್ನು ಕೃತಿ, ಸಾಹಿತ್ಯ, ಕವನ ಮುಂತಾದವುಗಳ ಮೂಲಕ ಹೊರ ಚಿಮ್ಮಿ ಅದನ್ನು ಜಗತ್ತಿನ ಮುಂದೆ ಇಡುತ್ತಾನೆ. ಅದನ್ನು ಓದುಗರು ಯಾವ ರೀತಿ ಬೆಳೆಸುತ್ತಾರೆ ಎಂಬುದರ ಮೇಲೆ ಆ ಕೃತಿಯ ಮೌಲ್ಯವು ನಿಂತಿರುತ್ತದೆ ಎಂದು ಹೇಳಿದರು. ಡಾ. ಶಿಶಿಲರು ಎಲ್ಲಾ ವಿಭಾಗದಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡವರು. ಅರ್ಥಶಾಸ್ತ್ರಜ್ಞನಾಗಿದ್ದ ಅವರು ಸಾಹಿತಿಯಾಗಿ ಹೊರಬರಬೇಕಾದರೆ ಅವರ ಸಾಧನೆಗಳ ಮೆಟ್ಟಿಲು ನೂರಾರು ಇವೆ. ಅಂತಹ ಸಾಹಿತಿಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ. ಸದಾಶಿವ ಕೃತಿಯ ವಿಶ್ಲೇಷಣೆಯನ್ನು ಮಾಡಿದರು. ಕೃತಿಕಾರ ಡಾ.ಶಂಕರ್ ಪಾಟಾಳಿ ಬದಿಯಡ್ಕ ಮಾತನಾಡಿ ಶಿಶಿಲಾ ರವರೊಂದಿಗೆ ಬೆರೆತ ಒಡನಾಡಿ ಜೀವನದ ಬಗ್ಗೆ, ಕೃತಿ ರಚನೆಯ ಅವರ ಅನುಭವದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಶ್ರೀಮತಿ ಶೈಲಿ ಪ್ರಭಾಕರ್, ಕಸಾಪ ಜಿಲ್ಲಾ ಸಮಿತಿ ಸದಸ್ಯ ರಾಮಚಂದ್ರ ಪಲ್ಲತಡ್ಕ, ಸುಳ್ಯ ಹೋಬಳಿ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಸುಳ್ಯ ಘಟಕದ ಗೌರವ ಕಾರ್ಯದರ್ಶಿಗಳಾದ ಚಂದ್ರಮತಿ ಕೆ, ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾನಂದ ಆಳ್ವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಹಿತಿಗಳು, ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದ ಸದಸ್ಯರುಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ಕಲಾವಿದ ಗೋಪಾಲಕೃಷ್ಣ ಆಶಯಗೀತೆಯನ್ನು ಹಾಡುವ ಮೂಲಕ ಚಾಲನೆ ನೀಡಿದರು.
ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.