`ಎತ್ತಿಗೆ ಜ್ವರ ಬಂದಾಗ ಎಮ್ಮೆಗೆ ಬರೆ’ ಎಂಬಂತಾಗಿದೆ…

0

ಕೋವಿ ಡೆಪಾಸಿಟ್‌ವಿಚಾರ – ದ.ಕ. ಜಿಲ್ಲಾಧಿಕಾರಿಗಳ ಆದೇಶಕ್ಕೊಂದು ಬಹಿರಂಗ ಪತ್ರ-ಪಿ.ಎಸ್.ಗಂಗಾಧರ್

ದ.ಕ. ಜಿಲ್ಲೆಯ ಜಿಲ್ಲಾಧಿಕಾರಿಯವರು ಕೋವಿ ಡೆಪಾಸಿಟ್ ವಿನಾಯಿತಿಯ ವಿಚಾರದಲ್ಲಿ ಮಾರ್ಚ್ ೨೬ರಂದು ಹೊರಡಿಸಿರುವ ಆದೇಶವನ್ನು ಗಮನಿಸಿದಾಗ ಮೇಲಿನ ಗಾದೆ ಮಾತು ನೆನಪಿಗೆ ಬರುತ್ತದೆ.
ಸಾರ್ವತ್ರಿಕ ಚುನಾವಣೆಗಳು ಪ್ರತಿ ವರ್ಷ ಬರುತ್ತಲೇ ಇರುತ್ತದೆ. ಲೋಕಸಭೆ, ವಿಧಾನಸಭೆ, ಜಿ.ಪಂ., ತಾ.ಪಂ., ಗ್ರಾ.ಪಂ. ಬೇರೆ ಬೇರೆ ಸಂದರ್ಭದಲ್ಲಿ ನಡೆದರೂ ಅದು ಚುನಾವಣಾ ಆಯೋಗ ನಡೆಸುವ ಚುನಾವಣೆಯಲ್ಲಿ ಆಗಿದೆ. ಆದರೆ ಕೃಷಿ ರಕ್ಷಣೆಗಾಗಿ, ಬೆಳೆ ರಕ್ಷಣೆಗಾಗಿ ನೀಡಿದ ಕೋವಿಗಳ ಮೇಲೆ ಈ ಅಧಿಕಾರಿಗಳಿಗೆ ಯಾಕೆ ಇಷ್ಟು ರೋಷ ಎಂಬುದು ರೈತರಿಗಿರುವ ಯಕ್ಷ ಪ್ರಶ್ನೆಯಾಗಿದೆ. ಅವರ ಆದೇಶದಲ್ಲಿ ನಮೂದಿಸಿದಂತೆ ಚುನಾವಣಾ ಸಂದರ್ಭದಲ್ಲಿ ಪೋಲೀಸ್ ಪೇದೆಗಳು, ಪ್ಯಾರಾ ಮಿಲಿಟರಿ ಪಡೆಗಳು ಭದ್ರತೆಯ ವಿಷಯದಲ್ಲಿ ಪೋಲೀಸ್ ಸಿಬ್ಬಂದಿಗಳು ಚುನಾವಣಾ ನಿಮಿತ್ತ ಜಿಲ್ಲೆಯಾದ್ಯಂತ ಚುರುಕಾಗಿ ಓಡಾಟ ನಡೆಸುತ್ತಿರುವುದರಿಂದ ಇಡೀ ಜಿಲ್ಲೆಯಾದ್ಯಂತ ಭದ್ರತಾ ಭಾವನೆ ಇರುವುದರಿಂದ ಆತ್ಮ / ಕೃಷಿ ರಕ್ಷಣೆಗಾಗಿ ನೀಡಿರುವ ಆಯುಧ ಪರವಾನಿಗೆ ಪಡೆದವರಿಗೆ ಭದ್ರತೆಯ ಕೊರತೆ ಕಡಿಮೆ ಎಂಬುದಾಗಿ ಉಲ್ಲೇಖ ಮಾಡಿರುತ್ತಾರೆ. ಇಂತಹ ಹಾಸ್ಯಾಸ್ಪದವಾದ ಕಾರಣವನ್ನು ನೋಡಿದಾಗ ಕಾಡುಪ್ರಾಣಿಗಳು ಬರುವ ತೋಟಗಳಲ್ಲಿ ಚುನಾವಣಾ ಭದ್ರತೆಯ ಸಿಬ್ಬಂದಿಗಳು ಇರುತ್ತಾರೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಮತ್ತು ಇಂತಹ ಬಾಲಿಶಃ ಆದೇಶ ಮಾಡುವವರ ಮೇಲೆ ಕರುಣೆಯು ಬರುತ್ತದೆ.
೨೦೦೦ ದಿಂದ ೨೦೨೪ ರ ತನಕ ೨೪ ವರ್ಷದಲ್ಲಿ ಬೆಳೆ ರಕ್ಷಣೆಗಾಗಿ ನೀಡಿದ ಕೋವಿಯನ್ನು ಯಾವುದೇ ಸಂದರ್ಭದಲ್ಲಿಯೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದ ನಿದರ್ಶನ ಇಲ್ಲ ಎಂದು ಮಾಹಿತಿ ಹಕ್ಕಿನಡಿಗೆ ಅರ್ಜಿ ನೀಡಿದಾಗ ಹಿಂಬರಹ ಬಂದಿದೆ. ಯಾವುದೇ ಬೇರೆ ಜಿಲ್ಲೆಗಳಲ್ಲಿ ಇಲ್ಲದ, ಕಾನೂನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾಕೆ? ಪಕ್ಕದ ಕೊಡಗಿನಲ್ಲಿ ವಿನಾಯಿತಿ ಇದೆ. ಮಂಗಳೂರಿನ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿನಾಯಿತಿ ಇದೆ. ಕಾಡು ಬದಿಯಲ್ಲಿ ಒಂಟಿ ಮನೆಗಳಲ್ಲಿ ವಾಸಿಸುವ ರೈತರಿಗೆ ವಿನಾಯಿತಿ ಯಾಕಿಲ್ಲ.? ಚುನಾವಣಾ ಹೆಸರಿನಲ್ಲಿ ರಾಜಾರೋಷವಾಗಿ ತಿರುಗುವ ಮೇಲಾಧಿಕಾರಿಗಳಿಗೆ ರಕ್ಷಣೆ ಬೇಕು. ಬೆಳೆ ರಕ್ಷಣೆಗಾಗಿ ಇರುವ ರೈತನಿಗೆ ವಿನಾಯಿತಿ ಯಾಕಿಲ್ಲ?. ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರೈತನಿಗೆ ನಿವೃತ್ತಿ ಇಲ್ಲ. ಯಾವುದೇ ಸಂಬಳ ಇಲ್ಲ. ಸಮಯದ ಮಿತಿ ಇಲ್ಲ, ಪಿಂಚಣಿ ಇಲ್ಲ. ಓಡಾಡಲು ಐಶಾರಾಮಿ ಕಾರುಗಳು ಇಲ್ಲ. ನಡು ರಾತ್ರಿಗಳಲ್ಲಿಯೇ ವಿದ್ಯುತ್ ಬಂದಾಗ ಪಂಪು ಶೆಡ್ ಗಳಿಗೆ ಅಲೆಯುವಾಗ ಚುನಾವಣೆಗಾಗಿ ನಿಯೋಜನೆಗೊಂಡಿರುವ ಇಲಾಖಾ ಅಧಿಕಾರಿಗಳು ತೋಟ ಕಾಯುವರೇ?. ಭೂಮಿ ರೈತನಲ್ಲಿದ್ದರೂ ಅದಕ್ಕೆ ಸಂಬಂಧ ಪಟ್ಟ ಕಾಗದ ಪತ್ರಗಳು ಅಧಿಕಾರಿಗಳ ಕೈಯಲ್ಲಿ. ಅದಕ್ಕಾಗಿ ವರ್ಷಾನುಗಟ್ಟಲೇ ಅಲೆಯುವ ರೈತನಿಗೆ ಭಗವಂತನೊಬ್ಬನೇ ರಕ್ಷಣೆ ನೀಡಬೇಕೆಂದು ಪ್ರಾರ್ಥಿಸುತ್ತೇವೆ.
ಕೋವಿ ಅಮಾನತಿನಲ್ಲಿರಿಸಿದ ಸಂದರ್ಭದಲ್ಲಿ ರೈತರಿಗೆ ಆದ ನಷ್ಟವನ್ನು ಪರಿಹಾರದ ರೂಪದಲ್ಲಿ ಇದಕ್ಕೆ ಕಾರಣವಾದ ಅಧಿಕಾರಶಾಹಿ ವರ್ಗವೇ ಭರಿಸಬೇಕೆಂದು ಆಗ್ರಹ ಪಡಿಸುತ್ತೇವೆ.
೨೦೨೪ ಜನವರಿ ತಿಂಗಳ ೨೩ರಂದು ನಡೆದ ಜನ ಸಂಪರ್ಕ ಸಭೆಯಲ್ಲಿ ನೀಡಿದ ಮನವಿಗೂ, ಮಾರ್ಚ್ ೨೧ರಂದು ನೀಡಿದ ಮನವಿಗೂ ಮಾರ್ಚ್ ೨೬ರಂದು ನೀಡಿದ ಹಕ್ಕೊತ್ತಾಯ ಸಭೆಯ ಮನವಿಗೂ ದಿವ್ಯ ನಿರ್ಲಕ್ಷ್ಯ ತೋರಿದ ಜಿಲ್ಲಾಡಳಿತದ ಕ್ರಮವನ್ನು ಖಂಡಿಸುತ್ತಾ ಮಂಗಳೂರಿಗೆ ಸ್ವತಃ ಅರ್ಜಿ ಸಲ್ಲಿಸಲು ಹೋಗಿ ಅರ್ಜಿ ಸಲ್ಲಿಸಿದ್ದರೂ ಪುರಸ್ಕರಿಸದ ಆಡಳಿತ ವ್ಯವಸ್ಥೆಯನ್ನು ಮತ್ತೊಮ್ಮೆ ಉಗ್ರವಾಗಿ ಖಂಡಿಸುತ್ತಾ, ಸುಳ್ಯ ತಾಲೂಕಿನಲ್ಲಿ ವಿನಾಯಿತಿ ಪಡೆದವರು ಯಾವ ಮಾನದಂಡದಿಂದ ಪಡೆದಿರುತ್ತಾರೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಅದನ್ನು ಇನ್ನಾದರೂ ಬಹಿರಂಗ ಪಡಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂದಾಧರ್ ಪತ್ರದ ಮೂಲಕ ಆಗ್ರಹಿಸಿದ್ದಾರೆ.