ಏರ್ ಪೋರ್ಟ್ ನಲ್ಲಿ ಪ್ರಧಾನಿ ಸ್ವಾಗತಿಸುವ ತಂಡದಲ್ಲಿ ರತ್ನಾವತಿ ಶೇಖರ ಪೂಜಾರಿ
ಮೊನ್ನೆಯಷ್ಟೇ ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರುವ ತಂಡದಲ್ಲಿ ದಿ. ಪ್ರವೀಣ್ ನೆಟ್ಟಾರ್ ಅವರ ತಾಯಿ ರತ್ನಾವತಿ ಶೇಖರ ಪೂಜಾರಿಯವರಿಗೆ ಅವಕಾಶ ದೊರೆತಿದ್ದು, ಪ್ರವೀಣ್ ನಿಂದಾಗಿ ಈ ಅವಕಾಶ ತನಗೆ ದೊರೆಯಿತು ಎಂದು ರತ್ನಾವತಿ ಹೇಳಿಕೊಂಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳಾದ ಕ್ಯಾಪ್ಟನ್ ಬೃಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರ ಪರವಾಗಿ ರೋಡ್ ಶೋ ಕಡಲ ನಗರಿ ಮಂಗಳೂರಿಗೆ ಆಗಮಿಸಿದ್ದ ಮೋದಿಯವರಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರುವ ತಂಡದಲ್ಲಿ ರತ್ನಾವತಿಯವರಿಗೂ ಅವಕಾಶ ನೀಡಲಾಗುವ ಕುರಿತು ಬಿಜೆಪಿ ಕಚೇರಿಯಿಂದ ತಿಳಿಸಲಾಗಿತ್ತು.
ಅದರಂತೆ ಪ್ರವೀಣ್ ನೆಟ್ಟಾರ್ ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ ಹಾಗೂ ಸಹೋದರಿ ನಳಿನಿ ಮಂಗಳೂರಿಗೆ ತೆರಳಿದ್ದರು. ಭದ್ರತೆಯ ದೃಷ್ಟಿಯಿಂದ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಯನ್ನೂ ನಡೆಸಲಾಗಿತ್ತು.
ಏರ್ ಪೋರ್ಟ್ ನಲ್ಲಿ ಪ್ರಧಾನಿ ಸ್ವಾಗತಿಸುವ ವೇಳೆ ರತ್ನಾವತಿಯವರಿಗೆ ಒಳಗೆ ಹೋಗಲು ಅವಕಾಶ ನೀಡಲಾಗಿದ್ದರೆ, ಉಳಿದವರು ಹೊರಗಿದ್ದರು.
” ವಿಮಾನದಿಂದ ಇಳಿದು ಮೋದೀಜಿ ಎಲ್ಲರಿಗೆ ನಮಸ್ಕರಿಸುತ್ತಾ ಬಂದರು. ನಾನು ಪ್ರವೀಣ್ ನೆಟ್ಟಾರ್ ಅಮ್ಮ ಎಂದು ಪರಿಚಯಿಸಿಕೊಂಡೆ. ಅವರು ಹಿಂದಿಯಲ್ಲಿ ಏನೋ ಹೇಳಿದರು. ನಮಗೆ ಅರ್ಥವಾಗಲಿಲ್ಲ ಎಂದು ರತ್ನಾವತಿ ಸುದ್ದಿಯೊಂದಿಗೆ ಹೇಳಿಕೊಂಡರು.
ಫೊಟೋದಲ್ಲಿ, ಟಿ.ವಿ.ಯಲ್ಲಿ ಮಾತ್ರ ನೋಡುತ್ತಿದ್ದ ಮೋದಿಯವರನ್ನು ಕಣ್ಣೆದುರೇ ನೋಡುತ್ತೇನೆ ಎಂದು ಕನಸು ಮನಸಿನಲ್ಲೂ ಭಾವಿಸಿರಲಿಲ್ಲ. ಆದರೆ ಅಂಥ ಸೌಭಾಗ್ಯ ಪ್ರವೀಣನಿಂದ ದೊರೆಯಿತು. ಎಂದು ರತ್ನಾವತಿ ಕಣ್ಣೀರು ತುಂಬಿದ ಕಣ್ಣುಗಳಿಂದ ಹೇಳಿದರು.