ಹಳೆಗೇಟು: 24ನೇ ವರ್ಷದ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರ ಉದ್ಘಾಟನೆ

0

ನಮ್ಮ ಜೀವನದುದ್ದಕ್ಕೂ ಶಾಶ್ವತವಾಗಿ ಉಳಿಯುವುದು ನಾವು ಕಲಿತ ವಿದ್ಯೆ, ಸಂಸ್ಕಾರ ಮಾತ್ರ : ವಿದ್ವಾನ್ ರೂಪೇಶ್ ಆಚಾರ್ಯ

ಸುಳ್ಯ ಹಳೆಗೇಟಿನ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪತಿಷ್ಠಾನದ ವತಿಯಿಂದ ನಡೆಯುತ್ತಿರುವ 24 ನೇ ವರ್ಷದ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರ ಇಂದು ಉದ್ಘಾಟನೆಗೊಂಡಿತು.

ಒಂದು ತಿಂಗಳ ಕಾಲ ನಡೆಯುವ ಶಿಬಿರವನ್ನು ಪ್ರಸ್ತುತ ಯುಎಸ್‌ಎ ಯಲ್ಲಿ ನೆಲೆಸಿರುವ ವಿದ್ವಾನ್ ರೂಪೇಶ್ ಆಚಾರ್ಯ ಮತ್ತು ಶ್ರುತಿರೂಪೇಶ್ ಆಚಾರ್ಯ ಉದ್ಘಾಟಿಸಿದರು.

ಬಳಿಕ ವಿದ್ವಾನ್ ರೂಪೇಶ್ ಆಚಾರ್ಯ ಮಾತನಾಡಿ ಮಕ್ಕಳೆ ನೆನಪಿಡಿ ‘ನಮ್ಮ ಜೀವನದುದ್ದಕ್ಕೂ ಶಾಶ್ವತವಾಗಿ ಉಳಿಯುವುದು ನಾವು ಕಲಿತ ವಿದ್ಯೆ, ಸಂಸ್ಕಾರ ಮಾತ್ರ’.

ಹಾಗಾಗಿ ಶಾಲೆಯಲ್ಲಿ ಕೊಟ್ಟ ರಜೆಯನ್ನು ವ್ಯರ್ಥ ಮಾಡದೇ ಇಲ್ಲಿ ಸೇರಿ ಮಂತ್ರ, ಯೋಗ ಕಲಿಯಲು ಮನಸ್ಸು ಮಾಡಿರುವುದು ಶ್ಲಾಘನೀಯ. ಕನ್ನಡ ಹಾಗೂ ಶಾಸ್ತ್ರ ಭಾಷೆಯನ್ನು ಕಲಿತವ ಜೀವನದಲ್ಲಿ ಯಾವತ್ತು ಸೋಲುವುದಿಲ್ಲ ಎಂದರು.

ಇದರೊಂದಿಗೆ ತನ್ನ ಮನೆಯನ್ನೇ ಮಠವನ್ನಾಗಿಸಿ ಜಗತ್ತಿಗೆ ಬೆಳಕು ನೀಡುವ ನಾಗರಾಜರ ಭಟ್ಟರ ಪಯತ್ನ ಮಹತ್ತರವಾದುದು. ಪ್ರೀತಿ, ಮಮತೆಯನ್ನು ಬೆರೆಸಿ ಯುವ ತಲೆಮಾರಿಗೆ ಸಂಸ್ಕಾರವನ್ನು ನೀಡುವ ಇವರ ಪ್ರಯತ್ನ ಮೆಚ್ಚುವಂತಹದ್ದು. ಕೇಶವ ಕೃಪಾ ವಿದ್ಯಾ ಕೇಂದ್ರ ವಿಶ್ವ ವಿದ್ಯಾಪೀಠವಾಗಿ ಬೆಳೆಯಲಿ ಎಂದು ಹಾರೈಸಿದರು.

ದಿಕ್ಸೂಚಿ ಭಾಷಣ ಮಾಡಿದ ಮಂಕುತಿಮ್ಮನ ಕಗ್ಗದ ಪ್ರವಚನಕಾರರಾದ ವಿದ್ವಾನ್ ಜಿ.ಎಸ್.ನಟೇಶ್ ಶಿವಮೊಗ್ಗ ಮಾತನಾಡಿ ಸಮಾಜದೊಂದಿಗೆ ಬೆರೆತು, ಬೇರೆಯವರ ಕಷ್ಟ ಸುಖಗಳಲ್ಲಿ ಭಾಗಿಯಾದಾಗ ಸಿಗುವ ಆನಂದ, ಆತ್ಮತೃಪ್ತಿ ಇನ್ನೊಂದಿಲ್ಲ.

ಇಂತಹ ಸಂಸ್ಕಾರವನ್ನು ಚಿಕ್ಕ ವಯಸ್ಸಿನಿಂದಲೇ ರೂಪಿಸಿಕೊಂಡಾಗ ಸಮೃದ್ಧಿ ಬದುಕು ಕಾಣಲು ಸಾಧ್ಯ .
ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಗುರು ಹಿರಿಯರ ಸೇವೆ, ದೇವರಲ್ಲಿ ಅಚಲ ನಂಬಿಕೆ, ಅತಿಥಿಗಳಿಗೆ ಆದರ ಆತಿಥ್ಯ, ಪ್ರತಿಯೊಂದು ಜೀವಿಯೂ ತನ್ನ ತರಹ ಬದುಕಬೇಕೆಂಬ ಸಂಕಲ್ಪ ,ಹಸಿದವರಿಗೆ ಕೈಲಾದ ಸಹಾಯ, ಕೆಲಸದಲ್ಲಿ ನಿಷ್ಠೆ ,ಪರೋಪಕಾರದಂತಹ ಸದ್ಗುಣಗಳನ್ನು ಬೆಳೆಸಬೇಕು. ಮಾತೆಯಿಂದ ಒಂದು ಕುಟುಂಬದ ಪರಿಪೂರ್ಣತೆ ಕಾಣಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೇಶವ ಕೃಪಾ ವೇದ ಯೋಗ ಕಲಾ ಶಿಬಿರದ ಸಂಚಾಲಕ ವೇ.ಮೂ.ಅಭಿರಾಮ ಶರ್ಮ , ಪ್ರಗತಿಪರ ಕೃಷಿಕ, ಹಿರಿಯ ವಿದ್ಯಾರ್ಥಿ ಸುಬ್ರಹ್ಮಣ್ಯ ಭಟ್ ತೊಂಡಮೂಲೆ ಮಾತನಾಡಿ ಶಿಬಿರಕ್ಕೆ ಶುಭ ಹಾರೈಸಿದರು.

ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ (ರಿ) ಇದರ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ವಗೆನಾಡು ವೇದಿಕೆಯಲ್ಲಿದ್ದರು.

ಬಳಿಕ ಶಿಬಿರದ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಉಚಿತವಾಗಿ ನೀಡುವ ಪುಸ್ತಕ, ವಸ್ತ್ರ , ವ್ಯಾಸಪೀಠ ವಿತರಣೆ ಕಾರ್ಯಕ್ರಮ ಹಾಗೂ
ವಿದ್ವಾನ್ ರೂಪೇಶ್ ಆಚಾರ್ಯ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಸ್ವಾಗತಿಸಿ, ಶ್ರೀದೇವಿ ನಾಗರಾಜ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

ಇಲ್ಲಿ ಒಂದು ತಿಂಗಳ ಕಾಲ ಗುರುಕುಲ ಮಾದರಿಯಲ್ಲಿ ನಡೆಯುವ ವೇದಾಧ್ಯಯನ-ಯೋಗಾಭ್ಯಾಸದೊಂದಿಗೆ ರಂಗಪಾಠ, ರಂಗಾಭಿನಯ, ಮುಖವಾಡ, ಭಜನೆ, ಈಜು ತರಬೇತಿ, ಮೂಕಾಭಿನಯ, ಗೊಂಬೆ ತಯಾರಿ , ಜಾನಪದ ನೃತ್ಯ, ಬಣ್ಣದ ಹೂಗಳು, ಜಾದೂ, ಪೋಲೀಸ್ ಮಾಹಿತಿ , ನಾಟಕ, ಮಿಮಿಕ್ರಿ, ಚಿತ್ರಕಲೆ, ಅಗ್ನಿಶಾಮಕ ಪ್ರಾತ್ಯಕ್ಷಿಕೆ, ಕಸದಿಂದ ರಸ, ವ್ಯಂಗ್ಯ ಚಿತ್ರ, ಹಾಡು-ಕುಣಿತ, ಆರೋಗ್ಯ ಮಾಹಿತಿ, ಹಾವು ನಾವು ಪರಿಸರ ಪ್ರಾತ್ಯಕ್ಷಿಕೆ, ಯಕ್ಷಗಾನ, ರಂಗ ಗೀತೆಗಳು, ಗೀತ-ಗಾನ-ಸಾಹಿತ್ಯ, ಶ್ರೀ ಪೂಜಾ ಪ್ರಯೋಗ ಪಾಠ ಪ್ರಾತ್ಯಕ್ಷಿಕೆ ನೀಡಲಾಗುವುದು.

ಕೇರಳ , ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ 250 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.