ರಸ್ತೆ ಇಲ್ಲದೆ ಸಮಸ್ಯೆ ಎದುರಿಸುತ್ತಿರುವ ಬೆಟ್ಟಂಪಾಡಿ ಆಶ್ರಯ ಕಾಲೋನಿಯ ಬಡ ಕುಟುಂಬಗಳು

0

ರಾತ್ರಿ ಜೀವ ಭಯದಲ್ಲಿ ನಡೆದಾಡುವ ಪರಿಸ್ಥಿತಿ

ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ನ. ಪಂ ಮಾಜಿ ಸದಸ್ಯರಿಂದ ಮುಖ್ಯ ಅಧಿಕಾರಿಗಳಿಗೆ ಮನವಿ

ಸುಳ್ಯದ ಶಾಂತಿನಗರ ಬೆಟ್ಟಂಪಾಡಿಯ ಆಶ್ರಯ ಕಾಲೋನಿಯಲ್ಲಿ ಸುಮಾರು ಐದಕ್ಕೂ ಹೆಚ್ಚು ಬಡ ಕುಟುಂಬಗಳು ವಾಸಿಸುವ ಸ್ಥಳಕ್ಕೆ ನಡೆದಾಡಲು ಕೂಡ ಸರಿಯಾದ ರಸ್ತೆ ಸಂಪರ್ಕವಿಲ್ಲದೆ ಸಂಕಷ್ಟ ಎದುರಿಸುವ ಪರಿಸ್ಥಿತಿ ಎದುರಾಗಿದೆ.


ಬೆಟ್ಟಂಪ್ಪಾಡಿ ಭಜನಾ ಮಂದಿರದ ಹಿಂಭಾಗದಲ್ಲಿರುವ ಕಾಂಕ್ರೀಟ್ ರಸ್ತೆಯ ಕೊನೆಯಲ್ಲಿ ಈ ಸಮಸ್ಯೆ ಇದ್ದು ಈ ಭಾಗದಲ್ಲಿ ಬೃಹತಾಕಾರದ ಹೊಂಡ ನಿರ್ಮಾಣವಾಗಿ ಅಲ್ಲಿಂದ ಕೆಳಭಾಗಕ್ಕೆ ಸುಮಾರು ೫ ಮನೆಗಳ ನಿವಾಸಿಗಳಿಗೆ ಸರಿಯಾಗಿ ನಡೆದಾಡಲು ರಸ್ತೆ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಸಮಯದಲ್ಲಂತೂ ನಡೆದಾಡುವ ಸಂದರ್ಭ ಸ್ವಲ್ಪ ಎಚ್ಚರ ತಪ್ಪಿದ್ದಲ್ಲಿ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ. ಅಲ್ಲದೆ ಈ ಭಾಗದಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳು ಕೂಡ ಇಲ್ಲದೆ ಮಳೆಗಾಲದಲ್ಲಿ ಮೇಲ್ಭಾಗದಿಂದ ಹರಿದು ಬರುವ ನೀರು ಸಂಪೂರ್ಣವಾಗಿ ಮನೆಯ ಅಂಗಳ ಮತ್ತು ಮನೆಗಳಿಗೆ ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೂ ಮುನ್ನ ಹಲವಾರು ಬಾರಿ ಸ್ಥಳೀಯ ನಿವಾಸಿಗಳು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.


ಇದೀಗ ಸ್ಥಳೀಯ ನಿವಾಸಿ ನಗರ ಪಂಚಾಯತ್ ಮಾಜಿ ಸದಸ್ಯ ನಜೀರ್ ಶಾಂತಿನಗರ ನಗರ ಪಂಚಾಯತ್ ಮುಖ್ಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಭಾಗದ ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿಯನ್ನು ನೀಡಿದ್ದಾರೆ.