ನಗದು ಕಳೆದುಕೊಂಡ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಿ, ಮರುದಿನ ಹಣ ಕಳೆದುಕೊಂಡ ವ್ಯಕ್ತಿಗೆ ನಗದು ಹಸ್ತಾಂತರ ಮಾಡಿ ಪ್ರಾಮಾಣಿಕತೆ ಮೆರೆದ ಘಟನೆ ಅರಂತೋಡು ಪೇಟೆಯಲ್ಲಿ ಎ.28ರಂದು ರಾತ್ರಿ ಸಂಭವಿಸಿದೆ.
ಅರಂತೋಡು ಪೇಟೆಯಲ್ಲಿ ಕಳೆದ ಹಲವು ವರ್ಷಗಳಿಂದ ಅಯ್ಯಂಗಾರ್ ಬೇಕರಿ ಉದ್ಯಮ ನಡೆಸುತ್ತಿರುವ ಮಂಜುನಾಥ ಅವರು ಎ.28ರಂದು ರಾತ್ರಿ 8 ಸಾವಿರ ರೂಪಾಯಿ ನಗದನ್ನು ಅರಂತೋಡು ಪೇಟೆಯಲ್ಲಿ ಕಳೆದು ಕೊಂಡಿದ್ದರೆನ್ನಲಾಗಿದೆ.
ಈ ನಗದು ಹಣ ಅರಂತೋಡಿನ ಹನೀಫ್ ಎಂಬವರಿಗೆ ಬಿದ್ದು ಸಿಕ್ಕಿದ್ದು, ಅವರು ಅರಂತೋಡಿನ ಅಶ್ರಫ್ ಗುಂಡಿ ಹಾಗೂ ತಾಜುದ್ಧೀನ್ ಅರಂತೋಡು ಅವರಲ್ಲಿ ಹಣ ಬಿದ್ದು ಸಿಕ್ಕಿರುವ ವಿಷಯ ತಿಳಿಸಿದ್ದರು.
ತಕ್ಷಣ ತಾಜುದ್ದೀನ್ ಅವರು ಸಾಮಾಜಿಕ ಜಾಲತಾಣಗಳಿಗೆ ನಗದು ಹಣ ಬಿದ್ದು ಸಿಕ್ಕಿರುವ ಮಾಹಿತಿ ವಿನಿಮಯ ಮಾಡಿಕೊಂಡಿದ್ದರು. ಮರುದಿನ ಎ.29ರಂದು ಬೆಳಿಗ್ಗೆ ಹಣದ ವಾರಿಸುದಾರರಾದ ಮಂಜುನಾಥ್ ಅವರು ಹನೀಫ್ ಅವರನ್ನು ಭೇಟಿ ಮಾಡಿ ಮರಳಿ ಹಣ ಪಡೆದು ಕೊಂಡರು.
ಈ ಸಂದರ್ಭದಲ್ಲಿ ಹಣ ಕಳೆದು ಕೊಂಡ ಮಂಜುನಾಥ ರವರು ಹನೀಫ್ ರವರಿಗೆ ಹಾಗೂ ಅಶ್ರಫ್ ಗುಂಡಿ ಮತ್ತು ತಾಜುದ್ಧೀನ್ ಅರಂತೋಡು ಅವರಿಗೆ ಕೃತಜ್ಞತೆ ಸಲ್ಲಿಸಿದರು.