ಕೊಡಗು ಸಂಪಾಜೆಯ ಚೆಡಾವಿನ ನಿವಾಸಿ ಯುವಕನೊಬ್ಬ ಮಾದಕ ಮಾದಕ ವ್ಯಸನದಿಂದ ತನ್ನ ಹೆತ್ತ ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಕೊಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು ಸಮುದಾಯ ಸೇವೆಯ ಶಿಕ್ಷೆಯನ್ನು ಪ್ರಕಟಿಸಿದೆ.
ಈ ಯುವಕ ತನ್ನ ತಾಯಿಯನ್ನು 2015ರಲ್ಲಿ ತನ್ನ ಮನೆಯಲ್ಲಿಯೇ ದೊಣ್ಣೆಯಿಂದ ಬಡಿದು ಕೊಂದಿದ್ದ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆತ ಎರಡು ವರ್ಷ ಜೈಲು ಶಿಕ್ಷೆ ಕೂಡ ಅನುಭವಿಸಿದ್ದ. ಬಳಿಕ ಅಧೀನ ನ್ಯಾಯಾಲಯ ಅತನನ್ನು ಖುಲಾಸೆಗೊಳಿಸಿತ್ತು.
ಅಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಡಿಕೇರಿ ಪೊಲೀಸರು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಸ್ ಮುದ್ಗಲ್ ಮತ್ತು ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಅಧೀನ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ. ಮಾತ್ರವಲ್ಲ ಆತನಿಗೆ ಸಮುದಾಯ ಸೇವೆಯ ಶಿಕ್ಷೆ ಪ್ರಕಟಿಸಿದೆ.
ವಾದ -ಪ್ರತಿವಾದ ಆಲಿಸಿದ ಬಳಿಕ ವಿಭಾಗೀಯ ಪೀಠ , ಮೃತ ಗಂಗಮ್ಮ ಆಲ್ಕೋಹಾಲಿಕ್ ಅಲ್ಸರ್ ನಿಂದ ಬಳಲುತ್ತಿದ್ದರು ಅನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಮೃತರು ಸಾಯುವುದಕ್ಕೆ ಮೊದಲು ನೀಡಿರುವ ಹೇಳಿಕೆ (ಡೈಯಿಂಗ್ ಡಿಕ್ಲರೇಷನ್) ನಂಬಿದೆಯೇ ಹೊರತು ಅವರು ಹೇಳಿಕೆ ನೀಡುವಷ್ಟು ಫಿಟ್ ಆಗಿದ್ದರು ಎಂಬುದನ್ನು ಪರಿಗಣಿಸಿಲ್ಲ. ಜೊತೆಗೆ ಪ್ರಾಸಿಕ್ಯೂಷನ್ ಹೇಳಿಕೆಯನ್ನು ಪ್ರತ್ಯಕ್ಷದರ್ಶಿಗಳು ಮತ್ತು ಸಂತ್ರಸ್ತೆಯ ಕುಟುಂಬದವರು ಬೆಂಗಲಿಸಿಲ್ಲ. ಹಾಗಾಗಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಲಾಗಿದೆ ಎಂದು ಪೀಠ ತಿಳಿಸಿದೆ.
ಆರೋಪಿತ ವ್ಯಕ್ತಿಗೆ ಸಂಪಾಜೆಯ ಸರಕಾರಿ ಶಾಲೆ ಆವರಣ ಸ್ವಚ್ಛಗೊಳಿಸುವುದು, ಅದರ ನಿರ್ವಹಣೆ ಮಾಡುವುದು, ತೋಟ ನೋಡಿಕೊಳ್ಳುವುದು ಮತ್ತಿತರ ಸಮುದಾಯ ಸೇವೆ ಸಲ್ಲಿಸುವ ಶಿಕ್ಷೆಗೆ ಒಳಗಾಗುವಂತೆ ಆದೇಶ ನೀಡಿದೆ. ಒಂದು ವೇಳೆ ಆತ ಸಮುದಾಯ ಸೇವೆ ಮಾಡದಿದ್ದರೆ ಹೆಚ್ಚುವರಿಯಾಗಿ 25 ಸಾವಿರ ರೂ. ದಂಡ ಮತ್ತು ಮೂರು ತಿಂಗಳು ಸೆರೆವಾಸ ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಇದಕ್ಕೂ ಮೊದಲು ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದ ವಕೀಲರು, ಡೈಯಿಂಗ್ ಡಿಕ್ಲರೇಷನ್ ಅನ್ನು ವೈದ್ಯರು ಪ್ರಮಾಣೀಕರಿಸಿಲ್ಲ ಎಂದಾಕ್ಷಣ ಎಲ್ಲವೂ ಸುಳ್ಳು ಎಂದು ಹೇಳಬೇಕಾಗಿಲ್ಲ. ಸಾಕ್ಷಿಯ ದಾಖಲೆಗಳು ಸಂತ್ರಸ್ತೆ ಹೇಳಿಕೆ ನೀಡುವಷ್ಟು ದೈಹಿಕವಾಗಿ ಸದೃಢರಾಗಿದ್ದರು. ಸಾಕ್ಷಿಗಳು ಮತ್ತು ಸಂತ್ರಸ್ತೆಯ ಕುಟುಂಬದವರೆಲ್ಲ ಅವರ ಸಂಬಂಧಿಗಳೇ ಆಗಿರುವುದರಿಂದ ಅವರೆಲ್ಲ ಪ್ರತಿಕೂಲ ಸಾಕ್ಷಿಗಳಾಗಿದ್ದಾರೆ. ಅದೇ ಕಾರಣಕ್ಕೆ ಖುಲಾಸೆ ಮಾಡಿರುವುದು ಸರಿಯಲ್ಲ ಎಂದು ವಾದಿಸಿದ್ದರು. ಆರೋಪಿ ಪರ ವಕೀಲರು, ಮೃತ ತಾಯಿಗೆ ಅಲ್ಕೋಹಾಲಿಕ್ ಅಲ್ಸರ್ ಇತ್ತು. ಅದೇ ಕಾರಣಕ್ಕೆ ಸಾವನ್ನಪ್ಪಿದ್ದಾರೆಯೇ ಹೊರತು ಆರೋಪಿ ಹೊಡೆದಿದ್ದಕ್ಕೆ ಅಲ್ಲ. ವಿಚಾರಣಾ ನ್ಯಾಯಾಲಯ ಎಲ್ಲಾ ಅಂಶಗಳನ್ನು ಪರಿಗಣಿಸಿಯೇ ತೀರ್ಪು ನೀಡಿದೆ. ಮತ್ತೆ ಆ ತೀರ್ಪಿನ ಮರುಪರಿಶೀಲನೆ ಅನಗತ್ಯ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಏನಿದು ಪ್ರಕರಣ ?
ದುಶ್ಚಟಗಳಿಂದ ದಾರಿ ತಪ್ಪಿದ್ದ ಮಗ ಅನಿಲ್ ಎಂಬಾತನನ್ನು ಅವರ ತಾಯಿ ಗಂಗಮ್ಮ 2015ರ ಏ. 4ರಂದು ಬೈಯ್ದಿದ್ದರು. ಸರಿ ದಾರಿಗೆ ಬಾ ಎಂದು ಆತನಿಗೆ ಕಟು ಪದಗಳಿಂದ ಹೇಳಿದ್ದರು. ಇಷ್ಟಕ್ಕೆ ಸಿಟ್ಟಾದ ಮಗ ಆಕೆಯನ್ನು ದೊಣ್ಣೆಯಿಂದ ಹೊಡೆದು ಥಳಿಸಿದ್ದ. ತಾಯಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸುಳ್ಯದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಏ. 5ರಂದು ಸಾವನ್ನಪ್ಪಿದ್ದರು. ಆಗ ಪುತ್ರನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ವಿಚಾರಣಾ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 2017ರಲ್ಲಿ ಪ್ರಾಸಿಕ್ಯೂಷನ್ ಗಂಗಮ್ಮ ಹೇಳಿಕೆ ಕೊಡುವಷ್ಟು ಫಿಟ್ ಆಗಿದ್ದರು ಎಂಬುದನ್ನು ಮತ್ತು ಆರೋಪವನ್ನು ಅನುಮಾನಕ್ಕೆ ಆಸ್ಪದವಿಲ್ಲದಂತೆ ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಯನ್ನು ಖುಲಾಸೆಗೊಳಿಸಿತ್ತು.
ನೋಡಿಕೊಳ್ಳುವುದು ಯಾರು..?
ಸದ್ಯ ನ್ಯಾಯಾಲಯ ಆತನಿಗೆ ಸಂಪಾಜೆಯ ಶಾಲೆಯನ್ನು ಸ್ವಚ್ಛಗೊಳಿಸುವುದು, ನಿರ್ವಹಣೆ ನಡೆಸುವುದು, ತೋಟ ನೋಡಿಕೊಳ್ಳುವ ಶಿಕ್ಷೆಯನ್ನು ನೀಡಿದೆ. ಆದರೆ ಆತನನ್ನು ಯಾರು ನೋಡಿಕೊಳ್ಳಬೇಕು. ಆತನ ಮೇಲ್ವಿಚಾರಣೆ ಹೇಗೆ ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ.