ಉಪೇಂದ್ರ ಕಾಮತ್ ಅವರದ್ದು ದೇವರಂತ ಬದುಕು: ಸೀತಾರಾಮ ಕೆದ್ಲಾಯ
ನನ್ನ ಬೆಳವಣಿಗೆಯಲ್ಲಿ ಉಪೇಂದ್ರ ಕಾಮತ್ ಅವರ ಪಾಲು ಇದೆ: ಮಾಜಿ ಸಚಿವ ಎಸ್. ಅಂಗಾರ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ, ಹಿರಿಯ ಬಿಜೆಪಿ ಮುಖಂಡ ಹಾಗೂ ಹಿರಿಯ ಉದ್ಯಮಿ ಜಾಲ್ಸೂರು ಗ್ರಾಮದ ವಿನೋಬನಗರದ ಶ್ರೀ ಸುಬ್ರಾಯ ಅನಂತ ಕಾಮತ್ & ಸನ್ಸ್ ಗೇರುಬೀಜ ಸಂಸ್ಥೆಯ ಸ್ಥಾಪಕರಾದ ದಿ. ಉಪೇಂದ್ರ ಕಾಮತ್ ಅವರಿಗೆ ನುಡಿನಮನ ಹಾಗೂ ಮಿತ್ರಭೋಜನ ಕಾರ್ಯಕ್ರಮವು ವಿನೋಬನಗರದಲ್ಲಿ ಮೇ.18ರಂದು ಜರುಗಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡರಾದ ಸೀತಾರಾಮ ಕೆದ್ಲಾಯ ಅವರು ಮಾತನಾಡಿ ಭಾರತ ವಿಶ್ವದಲ್ಲೇ ವಿಶೇಷವಾದ ದೇಶ. ಇಂತಹ ವಿಶೇಷ ದೇಶವನ್ನು ನಮ್ಮ ಹಿರಿಯರು ದೇವಭೂಮಿ ಎಂದು ಕರೆದಿದ್ದರು. ಈ ದೇವಭೂಮಿ ಭಾರತದಲ್ಲಿ ದೇವರ ಕೆಲಸವನ್ನು ಮಾಡುತ್ತಾ ಕೇವಲ ತನಗಾಗಿ ಬದುಕದೇ, ಇನ್ನೊಬ್ಬರ ಹಸಿವು – ಬಾಯಾರಿಕೆ ನೀಗಿಸುವ ಬದುಕನ್ನು ಬದುಕಿದ ಉಪೇಂದ್ರ ಕಾಮತ್ ಅವರದ್ದು, ದೇವರಂತ ಬದುಕಾಗಿದೆ ಎಂದು ಹೇಳಿದರು.
ಕಾಸರಗೋಡಿನ ಪಟ್ಟಣವನ್ನು ಬಿಟ್ಟು ಹಳ್ಳಿಪ್ರದೇಶದಲ್ಲಿ ಗೇರುಬೀಜ ಉದ್ಯಮ ಸ್ಥಾಪಿಸುವ ಮೂಲಕ ದಿ. ಉಪೇಂದ್ರ ಕಾಮತರು ಹಲವಾರು ಜನರಿಗೆ ಬದುಕು ನೀಡಿದವರು. ಅವರದ್ದು ಮಾತು ಕಡಿಮೆ. ಹೆಚ್ಚು ದುಡಿಮೆಯ ಬದುಕಾಗಿತ್ತು. ಇದು ಉಪೇಂದ್ರ ಕಾಮತರ ಜೀವನದ ಸಂದೇಶವಾಗಿತ್ತು ಎಂದು ಸೀತಾರಾಮ ಕೆದ್ಲಾಯರು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಎಸ್. ಅಂಗಾರ ಅವರು ಮಾತನಾಡಿ ಉಪೇಂದ್ರ ಕಾಮತ್ ಅವರು ತಮ್ಮ ವ್ಯಕ್ತಿಗತ ಜೀವನದಲ್ಲಿ ಕಾರ್ಮಿಕರಿಗೆ ಶಕ್ತಿತುಂಬುವ ಕೆಲಸ ಮಾಡಿದವರು. ನನ್ನ ಬೆಳವಣಿಗೆಯಲ್ಲಿ ಕಾಮತರ ಪಾಲು ತುಂಬಾ ಇದೆ. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿ ಪಕ್ಷ ಮತ್ತು ಕಾರ್ಯಕರ್ತರಿಗೆ ಶಕ್ತಿಯಾಗಿದ್ದವರು ಎಂದು ಹೇಳಿ ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಬೋಳ ಪ್ರಭಾಕರ ಕಾಮತ್ ಕಾರ್ಕಳ, ನಾಗೇಶ್ ಕಿಣಿ, ಪ್ರಮೋದ್ ಕಾಮತ್, ಪ್ರಸಾದ್ ಕಾಮತ್, ಸುಧಾಕರ ಕಾಮತ್ ಅವರ ಅಳಿಯ ಡಾ. ಮಯೂರ್ ಕಾಮತ್, ಕಾರ್ಮಿಕರ ಪರವಾಗಿ ಶ್ರೀಮತಿ ಲೀಲಾವತಿ, ಶ್ರೀಮತಿ ರೇವತಿ ಅವರು ದಿ. ಉಪೇಂದ್ರ ಕಾಮತ್ ಅವರ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.
ಕೊನೆಯಲ್ಲಿ ಸುಧಾಕರ ಕಾಮತ್ ಅವರು ಮಾತನಾಡಿ ತಂದೆಯೊಂದಿಗಿನ ಸುದೀರ್ಘ ಅರವತ್ತು ವರ್ಷಗಳ ಜೀವನವನ್ನು ನೆನಪಿಸಿಕೊಂಡು ಮಾತನಾಡಿ 1973ರಲ್ಲಿ ಕಾಸರಗೋಡಿನಿಂದ ಇಲ್ಲಿಗೆ ಬಂದಾಗ ನನಗೆ ಹತ್ತು ವರ್ಷ ಪ್ರಾಯ. ಆಗ ತಂದೆಯವರು ಒಬ್ಬರೇ ಕಷ್ಟಪಡುವುದನ್ನು ನಾನು ಕಂಡದವನು. ಅವರ ಧೈರ್ಯ ಮತ್ತು ಸ್ಥಿತಪ್ರಜ್ಞಾಶೀಲತೆಯ ಬದುಕು ನಮಗೆ ಆದರ್ಶವಾಗಿದೆ. ನಾನು ನನ್ನ ಗ್ರಾಜ್ಯುವೇಶನ್ ಮುಗಿಸಿ ಈ ಫ್ಯಾಕ್ಟರಿಗೆ ಬಂದಾಗ ಕಾರ್ಖಾನೆಯ ಪ್ರತೀ ಸೆಕ್ಷನ್ ನಲ್ಲಿ ಕಾರ್ಮಿಕರೊಂದಿಗೆ ಸೇರಿ ಕೆಲಸ ಮಾಡಲು ಸಲಹೆ ನೀಡಿದ್ದರು ಎಂದು ತಂದೆ ದಿ. ಉಪೇಂದ್ರ ಕಾಮತ್ ಅವರನ್ನು ನೆನಪಿಸಿಕೊಂಡರು.
ವೇದಿಕೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಗಿರಿಧರ ಕಾಮತ್ ಕಾಸರಗೋಡು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಿ. ಉಪೇಂದ್ರ ಕಾಮತ್ ಅವರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ ಕಾಮತ್, ಸೊಸೆ ಶ್ರೀಮತಿ ಶುಭ ಎಸ್. ಕಾಮತ್, ಮೊಮ್ಮಕ್ಕಳಾದ ಡಾ. ಸಿಂಧೂ ಕಾಮತ್, ಡಾ. ಮಯೂರ್ ಕಾಮತ್, ಶ್ರೀಮತಿ ಸುಮನ್ ಕಾಮತ್, ವಿಕ್ರಂಸಿಂಹ ನಾಯಕ್ ಸೇರಿದಂತೆ ಕುಟುಂಬಸ್ಥರು, ಸುಳ್ಯದ ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರುಗಳು, ಉದ್ಯಮಿಗಳು, ಗೇರುಬೀಜ ಕಾರ್ಖಾನೆಯ ಸಿಬ್ಬಂದಿಗಳು, ಕಾರ್ಮಿಕರು, ವಿವೇಕಾನಂದ ವಿದ್ಯಾಸಂಸ್ಥೆಯ ಶಿಕ್ಷಕ ವೃಂದ, ಉಪೇಂದ್ರ ಕಾಮತರ ಹಿತೈಷಿಗಳು, ಅಭಿಮಾನಿಗಳು ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಿರೀಶ್ ಕುಮಾರ್ ಅವರು ವೈಯಕ್ತಿಕ ಗೀತೆ ಹಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಸಹಸೇವಾ ಪ್ರಮುಖ್ ನ.ಸೀತಾರಾಮ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.