ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆರ್. ಪದ್ಮರಾಜ್ ಪೂಜಾರಿ ಸುಳ್ಯಕ್ಕೆ ಭೇಟಿ : ಕಾರ್ಯಕರ್ತರಿಗೆ ಅಭಿನಂದನಾ ಸಭೆ

0

ಚುನಾವಣೆ ಸಂದರ್ಭದಲ್ಲಿ ನನ್ನ ಹಾಗೂ ಪಕ್ಷದ ಪರವಾಗಿ ದುಡಿದ ಎಲ್ಲಾ ಕಾರ್ಯಕರ್ತರು ಮತ್ತು ನಾಯಕರುಗಳಿಗೆ ನಾನು ಚಿರಋಣಿ : ಆರ್. ಪದ್ಮರಾಜ್ ಪೂಜಾರಿ

ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್ ಪದ್ಮರಾಜ್ ಪೂಜಾರಿಯವರ ಪರವಾಗಿ ಚುನಾವಣಾ ಸಂದರ್ಭದಲ್ಲಿ ದುಡಿದ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರುಗಳಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮೇ.೨೨ರಂದು ಸುಳ್ಯದ ಕಾಂಗ್ರೆಸ್ ಪ್ರಚಾರ ಕಛೇರಿಯಲ್ಲಿ ಅಭಿನಂದನಾ ಸಭೆಯನ್ನು ನಡೆಸಲಾಯಿತು.


ಅಭಿನಂದನಾ ಸಭೆಯಲ್ಲಿ ಭಾಗವಹಿಸಿದ ಅಭ್ಯರ್ಥಿ ಆರ್. ಪದ್ಮರಾಜ್ ಪೂಜಾರಿಯವರು ಚುನಾವಣೆಯಲ್ಲಿ ಸಹಕರಿಸಿದ ಮತ್ತು ಮತ ನೀಡಿ ಸಹಕರಿಸಿದ ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿ “ಚುನಾವಣೆ ಎಂದರೆ ಸೋಲು , ಗೆಲುವು ಸಹಜವಾಗಿರುತ್ತದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಗೆದ್ದರೂ ಸೋತರೂ ನಾನು ಸದಾ ಕಾರ್ಯಕರ್ತರ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ನನಗೆ ನೂರಕ್ಕೆ ನೂರು ಇದೆ. ವಿಶೇಷವಾಗಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ವಿಧಾನಸಭೆ ಚುನಾವಣೆ ಮತ್ತು ಅದರ ಬಳಿಕ ನಡೆದ ಕೆಲವು ಘಟನೆಗಳಿಂದ ನಮ್ಮ ಕಾರ್ಯಕರ್ತರಲ್ಲಿ ಹುಮ್ಮಸ್ಸು ಕಡಿಮೆ ಇತ್ತು ಎಂದು ನಾನು ಅಂದುಕೊಂಡಿದ್ದೆ . ಆದರೆ ಚುನಾವಣಾ ಸಂದರ್ಭದಲ್ಲಿ ಇಲ್ಲಿಯ ಕಾರ್ಯಕರ್ತರು ಮತ್ತು ನಾಯಕರುಗಳು ಒಗ್ಗಟ್ಟಿನಿಂದ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡು ನೀಡಿದ ಪ್ರೀತಿ ವಿಶ್ವಾಸವನ್ನು ಎಂದಿಗೂ ನಾನು ಮರೆಯುವುದಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗಾಗಿ ನಾನು ಕೂಡ ಓರ್ವ ಕಾರ್ಯಕರ್ತನಂತೆ ತಮ್ಮೊಂದಿಗೆ ಬೆರೆತು ಕಷ್ಟ ಸುಖಗಳಲ್ಲಿ ಭಾಗಿಯಾಗಿರುತ್ತೇನೆ ಎಂದು ವಿಶ್ವಾಸ ನುಡಿಗಳನ್ನು ನೀಡಿದರು.


ಸಂಸದನಾಗದಿದ್ದರೂ ಕೂಡ ತಿಂಗಳಿಗೊಮ್ಮೆ ಸುಳ್ಯಕ್ಕೆ ಬಂದು ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಶಿಕ್ಷಕರ ಮತ್ತು ಪದವಿಧರ ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ನಾವು ಒಟ್ಟಾಗಿ ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು. ಸರ್ಕಾರದ ಯೋಜನೆಯನ್ನು ನೀಡುವ ಸಂದರ್ಭ ಮತದಾರರು ಯಾವ ಪಕ್ಷಕ್ಕೆ ಮತ ನೀಡಿದ್ದಾರೆ ಎಂಬುದನ್ನು ನೋಡದೇ ಪ್ರತಿಯೊಬ್ಬರ ಮನೆಗಳಿಗೂ ಸರ್ಕಾರ ಯೋಜನೆಗಳು ಮುಟ್ಟಿಸುವ ಕೆಲಸ ಕಾರ್ಯಗಳು ಆಗಬೇಕು. ಈ ರೀತಿಯಾಗಿ ಜನತೆಗೆ ಪಕ್ಷದ ವತಿಯಿಂದ ಸಹಾಯ ಮಾಡಬೇಕೆಂದು ಕರೆ ನೀಡಿದರು. ದೇಶದಲ್ಲಿಯೇ ಈ ಬಾರಿ ಇಂಡಿಯಾ ಮೈತ್ರಿ ಕೂಟದ ಬಗ್ಗೆ ಮತದಾರರು ಒಲವನ್ನು ತೋರಿಸಿದ್ದು ದೇಶ ಮತ್ತು ಸಂವಿಧಾನ ಉಳಿಯಲು ಹಾಗೂ ಜನರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಮಾತ್ರವೇ ಪರಿಹಾರ ಎಂದು ದೇಶದ ಜನತೆ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಏರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.


ಬಳಿಕ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಮಮತಾ ಗಟ್ಟಿ, ಸುಳ್ಯದಲ್ಲಿ ಈ ಮೊದಲು ಯಾವುದೇ ಭಿನ್ನಮತಗಳು ಇದ್ದರು ಅವೆಲ್ಲಾವನ್ನು ಮರೆತು ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಪಕ್ಷದ ಗೆಲುವಿಗಾಗಿ ಈ ಬಾರಿ ದುಡಿದಿದ್ದಾರೆ. ಅವರ ಈ ದುಡಿಮೆಯ ಫಲದಿಂದ ಕಾಂಗ್ರೆಸ್ ಅಭ್ಯರ್ಥಿ ಆರ್ ಪದ್ಮರಾಜ್ ಪೂಜಾರಿಯವರ ಗೆಲುವು ಖಚಿತ ಎಂದು ಹೇಳಿದರು.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಮಾತನಾಡಿ, ನಮ್ಮ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರು ಓರ್ವ ಜನ ಸ್ನೇಹಿ ವ್ಯಕ್ತಿಯಾಗಿದ್ದು ಅವರ ಗೆಲುವಿಗಾಗಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಎಲ್ಲಾ ಸಮಸ್ಯೆಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ದುಡಿದಿದ್ದೀರಿ ಇದರ ಪ್ರತಿಫಲವಾಗಿ ನಮಗೆ ಗೆಲುವು ಖಚಿತ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.


ಸಭೆಗೂ ಮುನ್ನ ಪ್ರಸ್ತಾವಿಕ ಮತನಾಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ್ ಈ ಬಾರಿ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ ಸರ್ಕಾರ ಪಂಚ ಗ್ಯಾರೆಂಟಿ ಯೋಜನೆಗಳ ಬಗ್ಗೆ ಮನೆಮನೆಗಳಿಗೆ ತೆರಳಿ ಮತದಾರರಿಗೆ ಮಾಹಿತಿ ನೀಡುವ ಕಾರ್ಯಗಳನ್ನು ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಪ್ರತಿ ಬೂತ್‌ಗಳಲ್ಲಿ ೫೦ ಮತಗಳ ಹೆಚ್ಚಿನ ಅಂತರವನ್ನು ನಾವು ಪಡೆಯಲಿದ್ದು ಬಿಜೆಪಿಗೆ ಸರಿ ಸಮಾನವಾದ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಲಿದ್ದೇವೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇತ್ತೀಚೆಗೆ ವಾಹನ ಅಪಘಾತದಿಂದ ಮೃತಪಟ್ಟ ಪಕ್ಷದ ಮುಖಂಡ ಶಿವಕುಮಾರ್ ಕೌಡಿಚ್ಚಾರ್ ಅವರ ಪಕ್ಷ ಸಂಘಟನೆಯ ಕೆಲಸ ಕಾರ್ಯಗಳನ್ನು ನೆನಪಿಸಿ ಮಾತನಾಡಿ ಒಬ್ಬ ಉತ್ತಮ ನಾಯಕನನ್ನು ಪಕ್ಷ ಕಳೆದುಕೊಂಡಿದೆ ಎಂದು ಹೇಳಿದರು. ಬಳಿಕ ಸಭೆಯಲ್ಲಿ ಒಂದು ನಿಮಿಷದ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ , ಡಿಸಿಸಿ ಉಪಾಧ್ಯಕ್ಷ ಎನ್ . ಜಯಪ್ರಕಾಶ್ ರೈ , ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಎಂ.ವೆಂಕಪ್ಪ ಗೌಡ , ಪಕ್ಷದ ಮುಖಂಡರುಗಳಾದ ದಿನೇಶ್ ಅಂಬೆಕಲ್ಲು , ಮೊದಲಾದವರು ಮಾತನಾಡಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಣೆಗಾಗಿ ಪಕ್ಷದ ಮುಖಂಡರುಗಳು ಸುಳ್ಯ ಭಾಗಕ್ಕೆ ವಿಶೇಷ ಕಾಳಜಿಯನ್ನು ನೀಡಿ ಸೂಕ್ತ ವ್ಯಕ್ತಿಗಳಿಗೆ ಸ್ಥಾನಮಾನಗಲನ್ನು ನೀಡುವ ಮೂಲಕ ಕಾರ್ಯಕರ್ತರುಗಳ ಸಮಸ್ಯೆಗಳಿಗೆ ಸ್ಪಂದಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು. ಅಲ್ಲದೇ ನಮ್ಮ ಸುಳ್ಯದ ಕಾರ್ಯಕರ್ತಗಳಿಗೆ ಸದಾ ಸ್ಪಂದನೆಯನ್ನು ನೀಡುವ ಹಿರಿಯರಾದ ಮಾಜಿ ಸಚಿವ ರಮಾನಾಥ ರೈ ರವರಿಗೆ ವಿಶೇಷ ಸ್ಥಾನಮಾನವನ್ನು ನೀಡುವಂತೆ ಆಗ್ರಹಿಸಿದರು.

ವೇದಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ , ಅರೆಭಾಷೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ ಜನತ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕಿರಣ್ ಬುಡ್ಲೆಗುತ್ತು, ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ , ಯುವ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ , ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ್ ಎಡಮಲೆ, ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ , ಗ್ಯಾರೆಂಟಿ ಅನುಷ್ಠಾನ ಜಿಲ್ಲಾ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ, ಕಾರ್ಮಿಕ ಮುಖಂಡ ಚಂದ್ರಲಿಂಗಂ, ಜಿಲ್ಲಾ ಸಮಿತಿ ಸದಸ್ಯೆ ಪ್ರವೀಣ ಮರುವಂಜ, ಕಿಸಾನ್ ಘಟಕದ ಅಧ್ಯಕ್ಷ ಸುರೇಶ್ ಅಮೈ, ಎಸ್ ಟಿ ಘಟಕದ ಅಧ್ಯಕ್ಷ ಪರಮೇಶ್ವರ ಕೆಂಬಾರೆ, ಪಂಚಾಯತ್ ರಾಜ್ ಸದಸ್ಯರ ಒಕ್ಕೂಟದ ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ, ಎನ್ ಎಸ್ ಯು ಐ ಅಧ್ಯಕ್ಷ ಧನುಷ್ ಕುಕ್ಕೇಟಿ ಮೊದಲಾದವರು ಉಪಸ್ಥಿತರಿದ್ದರು.


ಸಭೆಯಲ್ಲಿ ಯುವ ಕಾಂಗ್ರೆಸ್ ಬಲವರ್ದನೆಗೊಳಿಸುವ ಬಗ್ಗೆ ಜಿಲ್ಲಾ ಯುತ್ ಕಾಂಗ್ರೆಸ್ ಕಾರ್ಯಧ್ಯಕ್ಷ ಗಿರೀಶ್ ಆಳ್ವ ಮಾತನಾಡಿದರು. ವಿಧಾನಪರಿಷತ್ ಚುನಾವಣೆಯಲ್ಲಿ ಶಿಕ್ಷಕರ ಮತ್ತು ಪದವಿಧರ ಕ್ಷೇತ್ರದ ಚುನಾವಣೆಗೆ ಸಜ್ಜಾಗುವ ಬಗ್ಗೆ ಉಸ್ತುವಾರಿಗಳಾದ ಭಾಸ್ಕರ ಗೌಡ ಹಾಗೂ ಪ್ರದೀಪ್ ಕುಮಾರ್ ರೈ ಪಾಂಬಾರು ಮಾಹಿತಿ ನೀಡಿದರು. ಪಿಸಿ ಜಯರಾಮ್ ಸ್ವಾಗತಿಸಿ , ಎನ್ ಜಯಪ್ರಕಾಶ್ ರೈ ವಂದಿಸಿದರು. ನೂರಾರು ಸಂಖ್ಯೆಯಲ್ಲಿ ಪಕ್ಷದ ನಾಯಕರುಗಳು , ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.