ಅಧಿಕಾರಿಗಳು ಭೇಟಿ ನೀಡಿ ಭರವಸೆ ನೀಡಿ ನಿರ್ಲಕ್ಷ್ಯ ವಹಿಸಿದ್ದಾರೆ- ಗೋಕುಲ್ ದಾಸ್ ಆರೋಪ
ಸುಳ್ಯ ನಗರ ಪಂಚಾಯತ್ ನಿಂದ ಆಲೆಟ್ಟಿ ಗ್ರಾಮದ ಕಲ್ಚೆರ್ಪೆಯಲ್ಲಿ ಶೇಖರಣೆ ಮಾಡಿದ ಘನತ್ಯಾಜ್ಯವು ಇದೀಗ ಮಳೆ ಬಂತೆಂದರೆ ಅರಣ್ಯ ಪ್ರದೇಶದಿಂದ ಹರಿದು ಬರುವ ನೀರಿನೊಂದಿಗೆ ಕೊಚ್ಚಿಕೊಂಡು ಬಂದು ಸುಳ್ಯದ ಜೀವನದಿ ಯಾಗಿರುವ ಪಯಸ್ವಿನಿಯ ಒಡಲಿಗೆ ಸೇರುತ್ತಿದೆ.
ನಾಗಪಟ್ಟಣದಲ್ಲಿ ಕುಡಿಯುವ ನೀರು ಶೇಖರಣೆ ಮಾಡುವ ಉದ್ದೇಶದಿಂದ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಇಡೀ ಸುಳ್ಯ ನಗರ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯಲು ನೀರು ಇಲ್ಲಿಂದ ಸರಬರಾಜು ಮಾಡಲಾಗುತ್ತಿದೆ.
ಕಲ್ಚೆರ್ಪೆಯ ತ್ಯಾಜ್ಯದೊಂದಿಗೆ ಹರಿದು ಬರುವ ಕೊಳಚೆ ನೀರು ನದಿಗೆ ಸೇರುವುದರಿಂದ ಅದೇ ನೀರು ಸಾರ್ವಜನಿಕರು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ಸಮಸ್ಯೆ ಬಗ್ಗೆ ಹಲವಾರು ಬಾರಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು ಅಧಿಕಾರಿಗಳು ಪರಿಸರಕ್ಕೆ ಭೇಟಿ ನೀಡಿ ಭರವಸೆ ನೀಡಿರುವುದಲ್ಲದೆ ಯಾವುದೇ ಕ್ರಮ ಜರುಗಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ನಗರ ಪಂಚಾಯತ್ ಮಾಜಿ ಸದಸ್ಯ ಗೋಕುಲ್ ದಾಸ್ ಖಂಡಿಸಿದ್ದಾರೆ.