ರಾಮನ ಆಶೀರ್ವಾದ ಇಂಡಿಯಾ ಒಕ್ಕೂಟಕ್ಕೆ ದೊರೆತಿದೆ : ಜೆ.ಪಿ.
” ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ನಮ್ಮ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿಯವರು ಅತ್ಯುತ್ತಮ ಅಭ್ಯರ್ಥಿಯಾಗಿದ್ದರು. ಅವರನ್ನು ಗೆಲ್ಲಿಸಬೇಕೆಂದು ನಾವು ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ. ಆದರೆ ಗೆಲ್ಲಲಾಗಲಿಲ್ಲ .ಆದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಒಳ್ಳೆಯ ಬೆಂಬಲ ದೊರೆತಿದ್ದು , ರಾಹುಲ್ ಗಾಂಧಿಯವರ ಭಾರತ್ ಜೋಡೊ ನ್ಯಾಯ ದೊರೆತಿದೆ” ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ಹೇಳಿದರು.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೊಷ್ಟಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.” ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಜನ ಕಾಂಗ್ರೆಸ್ ಅಭ್ಯರ್ಥಿಗೆ 63,000 ಮತಗಳನ್ನು ನೀಡಿದ್ದಾರೆ. ಜನರ ತೀರ್ಪನ್ನು ನಾವು ಗೌರವಿಸುತ್ತೇವೆ. ನಮ್ಮಿಂದ ಎಲ್ಲಿ ತಪ್ಪಾಗಿದೆ ಎಂಬ ಬಗ್ಗೆ ಪ್ರತೀ ಗ್ರಾಮದಲ್ಲಿ ಸಭೆ ನಡೆಸಿ ಪರಾಮರ್ಶೆ ನಡೆಸುತ್ತೇವೆ. ರಾಜ್ಯ ಸರಕಾರದ ಗ್ಯಾರಂಟಿಗಳ ಫಲ ಕೊಡಬಹುದೆಂದು ಅಂದುಕೊಂಡಿದ್ದೆವು. ಆದರೆ ಹೆಚ್ಚಿನ ಜನ ಭಾವನ್ಮಾತಕ ವಿಚಾರಕ್ಕೆ ಮತ ಹಾಕಿದ್ದಾರೆ. ಆದರೆ ಇಂಡಿಯಾ ಒಕ್ಕೂಟ ೨೩೬ ಸೀಟು ಗೆದ್ದಿದೆ. ಕಾಂಗ್ರೆಸ್ ಒಂದೇ ೧೦೦ ಸೀಟು ಗೆದ್ದಿದೆ” ಎಂದವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್. ಜಯಪ್ರಕಾಶ ರೈ ಯವರು ಮಾತನಾಡಿ ” ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಜಾಪ್ರಭುತ್ವಕ್ಕೆ ಜಯ ಸಿಕ್ಕಿದೆ. ಸಂವಿಧಾನ ತಿದ್ದುಪಡಿಯ ಮಾತನ್ನಾಡುತ್ತಿದ್ದವರೇ ಸಂವಿಧಾನ ಪುಸ್ತಕಕ್ಕೆ ನಮಸ್ಕರಿಸುವುದನ್ನು ಕಾಣುತ್ತಿದ್ದೇವೆ. ಬಿಜೆಪಿಗೆ ಬಹುಮತ ಬಂದಿಲ್ಲ. ಎನ್.ಡಿ.ಎ. ಅಧಿಕಾರ ಪಡೆದಿದೆ. ಜೆಡಿಯು ಮತ್ತು ಟಿ.ಡಿ.ಪಿ.ಗಳು ಬಿಜೆಪಿಯ ಹಿಡನ್ ಅಜೆಂಡಗಳನ್ನು ಒಪ್ಪುವುದಿಲ್ಲ ಎಂಬ ವಿಶ್ವಾಸ ನಮಗಿದೆ. ಮೋದಿಯವರ ಸರ್ವಾಧಿಕಾರಕ್ಕೆ ಕಡಿವಾಣ ಬಿದ್ದಿದೆ. ರಾಹುಲ್ ಗಾಂಧಿಯವರು ವಿಪಕ್ಷ ನಾಯಕರಾಗಿ ಆಯ್ಕೆಯಾಗಲಿದ್ದಾರೆ” ಎಂದು ಹೇಳಿದರು.
“ಪದ್ಮರಾಜರಿಗೆ ಹಿಂದಿನ ಬಾರಿಗಿಂತ ಹೆಚ್ಚು ಮತಗಳು ಬಿದ್ದಿವೆ. ಬಿ.ಜೆ.ಪಿ.ಗೆ ಸುಳ್ಯ ಕ್ಷೇತ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ೪೭ ಸಾವಿರ ಲೀಡ್ ದೊರೆತಿತ್ತು. ಈ ಬಾರಿ ಅದು ೩೯ ಸಾವಿರಕ್ಕೆ ಇಳಿದಿದೆ”. ಎಂದ ಜಯಪ್ರಕಾಶ್ ರೈಯವರು, ” ರಾಮನ ಆಶೀರ್ವಾದ ಇಂಡಿಯಾಕ್ಕೆ ದೊರೆತಿದೆ. ಅಯೋಧ್ಯೆಯಲ್ಲಿಯೂ ಇಂಡಿಯಾ ಒಕ್ಕೂಟ ಗೆದ್ದಿದೆ” ಎಂದು ಹೇಳಿದರು.
ಸುಳ್ಯ ಬ್ಲಾಕ್ ವ್ಯಾಪ್ತಿಯ ಪ್ರಮುಖ ಕಾಂಗ್ರೆಸ್ ನಾಯಕರ ಬೂತ್‌ಗಳಲ್ಲಿ ಕೂಡಾ ಬಿಜೆಪಿ ಲೀಡ್ ಪಡೆದಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ , ” ನಾವು ಪ್ರತೀ ಮನೆಗೆ ನಮ್ಮ ಗ್ಯಾರೆಂಟಿ ಯೋಜನೆಗಳ ಬಗ್ಗೆ ಹಾಗೂ ನಮ್ಮ ಕೇಂದ್ರ ಸರಕಾರ ಬಂದರೆ, ಏನೇನು ಮಾಡುತ್ತೇವೆ ಎಂಬ ಬಗ್ಗೆ ವಿವರಗಳನ್ನು ಮುಟ್ಟಿಸಿದ್ದೇವೆ. ಆದರೆ ಕರಾವಳಿಯಲ್ಲಿ ಭಾವನಾತ್ಮಕವಾಗಿ ಜನರನ್ನು ತಿರುಗಿಸುವ ಪ್ರಯತ್ನ ಬಿಜೆಪಿಯಿಂದ ನಡೆಯುತ್ತದೆ ” ಎಂದವರು ಹೇಳಿದರಲ್ಲದೆ, ” ಕೆಲವರು ವಾಟ್ಸಾಪ್ ಗಳಲ್ಲಿ ಪದಾಧಿಕಾರಿಗಳ ರಾಜೀನಾಮೆಗೆ ಆಗ್ರಹ ಮುಂದಿಟ್ಟಿದ್ದಾರೆ. ಅವರು ಯಾರೆಂದೇ ನಮಗೆ ತಿಳಿದಿಲ್ಲ”, ಎಂದು ಜಯಪ್ರಕಾಶ್ ರೈ ಹಾಗೂ ಪಿ.ಸಿ . ಜಯರಾಂ ಹೇಳಿದರು.
ಅವಾಚ್ಯ ಬರವಣಿಗೆ ಮತ್ತು ಪ್ರತಿಭಟನೆಯನ್ನು ಕಾಂಗ್ರಸ್ ಖಂಡಿಸುತ್ತದೆ.
ಪಂಜದಲ್ಲಿ ವೆಂಕಪ್ಪ ಎಂಬ ಅಂಗಡಿ ಮಾಲಕರೊಬ್ಬರು ಕಾಂಗ್ರೆಸ್ ಪಕ್ಷ ಮತ್ತು ನಾಯಕರ ವಿರುದ್ಧ ಅವಾಚ್ಯ ಶಬ್ದಗಳುಳ್ಳ ಸ್ಟೇಟಸ್ ಹಾಕಿದ್ದು ಅದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ನಮ್ಮ ಪಕ್ಷದ ನಾಯಕರು ಪೋಲೀಸ್ ದೂರು ಕೊಟ್ಟರೂ, ಆ ರೀತಿ ಅವಾಚ್ಯ ಸ್ಟೇಟಸ್ ಹಾಕಿದ ವ್ಯಕ್ತಿ ಕ್ಷಮೆ ಕೇಳಿ ದಮ್ಮಯ್ಯ ಹಾಕಿದ್ದರಿಂದ ನಮ್ಮ ನಾಯಕರು ಕ್ಷಮಾಪಣೆಯ ಮುಚ್ಚಳಿಕೆ ಪಡೆದು ಬಿಟ್ಟು ಬಿಟ್ಟಿದ್ದರು. ಕೆಲ ದಿನ ಅಂಗಡಿ ಬಂದು ಮಾಡುವುದಾಗಿ ಆತನೇ ಒಪ್ಪಿಕೊಂಡ ಪ್ರಕಾರ ಆತ ಅಂಗಡಿ ಮುಚ್ಚಿದ್ದ. ಕಾಂಗ್ರೆಸಿಗರು ಬಲತ್ಕಾರದಿಂದ ಅಂಗಡಿ ಬಂದ್ ಮಾಡಿಸಿಲ್ಲ. ಆದರೆ ಬಿಜೆಪಿಯವರು ಕಾಂಗ್ರೆಸಿನ ಮೇಲೆ ದಬ್ಬಾಳಿಕೆಯ ಆರೋಪ ಹೊರಿಸಿ ಇವತ್ತು ಪ್ರತಿಭಟನೆ ಮಾಡಿದ್ದಾರೆ. ಇದನ್ನೂ ನಾವು ಖಂಡಿಸುತ್ತೇವೆ. ಪಂಜ ವಲಯದ ಪಕ್ಷ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ಹೋರಾಟ ರೂಪಿಸುತ್ತೇವೆ” ಎಂದು ಪಿ.ಸಿ.ಜಯರಾಂ ಹಾಗೂ ಜಯಪ್ರಕಾಶ್ ರೈ ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ಶಶಿಧರ್ ಸ್ವಾಗತಿಸಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ವಂದಿಸಿದರು. ನಂದರಾಜ್ ಸಂಕೇಶ, ಮುತ್ತಪ್ಪ ಪೂಜಾರಿ, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.