ಅಪ್ಪ ಎಂದರೆ ಜಗವು
ಸ್ನೇಹ ಅಕ್ಕರೆಯ ಪ್ರತಿರೂಪವೂ…..
ಮಕ್ಕಳ ಪಾಲಿನ ವಾತ್ಸಲ್ಯಮಯಿ
ತನ್ನೆಲ್ಲಾ ಸುಖವ ಮುಡಿಪಾಗಿಡುವ ತ್ಯಾಗಮಯಿ……
ಹೌದು ಪ್ರತಿಯೊಬ್ಬ ಮಕ್ಕಳ ಪಾಲಿಗೆ ತನ್ನ ಅಪ್ಪನೇ ಮೊದಲ ಹೀರೋ. ಅಪ್ಪ ಎಂದರೆ ಅದೊಂದು ಪದ ಮಾತ್ರವಲ್ಲ. ಆ ಪದವೇ ಮಕ್ಕಳಿಗೆ ಸ್ನೇಹ ಅಕ್ಕರೆಯ ಪ್ರತಿರೂಪ. ಅಪ್ಪ ಜೊತೆಗಿದ್ದರೆ ಆದೇನೋ ಒಂದು ಧೈರ್ಯ ಎಲ್ಲವನ್ನೂ ಗೆಲ್ಲುತ್ತೇನೆ ಎಂಬ ಏನೋ ವಿಶ್ವಾಸ…. ಪ್ರೀತಿ, ವಾತ್ಸಲ್ಯದ ಪ್ರತಿರೂಪ ಅಮ್ಮನಾದರೆ , ಸ್ನೇಹ ಅಕ್ಕರೆಯ ಪ್ರತಿರೂಪದ ಪಾಲು ಅಪ್ಪನದ್ದು. ಎಲ್ಲಾ ರೀತಿಯಲ್ಲೂ ಆದರ್ಶ ಪ್ರಾಯವಾಗುವ ಮಕ್ಕಳ ಆದರ್ಶ ವ್ಯಕ್ತಿಯೇ ಅಪ್ಪ . ದೇಶ ಕಾಯುವ ಸೈನಿಕನಂತೆ ನಮ್ಮ ರಕ್ಷಣೆ ಮಾಡುವ ಕೇಳಿದ್ದನ್ನು ಕೊಡಿಸುವ ” ದಿ ಬೆಸ್ಟ್ “ಅಪ್ಪ.
ಅಪ್ಪ…… ಜಗತ್ತಿನಲ್ಲಿ ತ್ಯಾಗಕ್ಕೆ ಇನ್ನೊಂದು ಹೆಸರು ಅಪ್ಪ. ತನ್ನ ಬದುಕಿನ ಪ್ರತಿ ಗಳಿಗೆಯನ್ನು ಮಕ್ಕಳ ನಲಿವಿಗಾಗಿ ಮೀಸಲಿಡುವ ಜೀವವದು. ಅಪ್ಪನ ಗಂಭೀರ ಮುಖಭಾವ ಹಿಂದೆ ಹೇಳಲಾರದ ನೋವು ಸಂಕಟಗಳು ಇರುತ್ತದೆ. ಮನೆಗಾಗಿ, ಮಕ್ಕಳಿಗಾಗಿ ಹಗಲಿರುಳು ಎನ್ನದೇ ಕಷ್ಟಪಟ್ಟು ದುಡಿಯುತ್ತಾ ಮಕ್ಕಳ ಖುಷಿಯಲ್ಲೇ ತನ್ನ ಖುಷಿಯನ್ನು ಕಾಣುತ್ತಾ ಬದುಕನ್ನು ಸವೆಸುವ ಸೂಪರ್ ಹೀರೋ ಅಪ್ಪ. ಎಂದಿಗೂ ಪ್ರತ್ತುಪಕಾರ ಕೇಳದೆ ತನ್ನ ಜೀವನವನ್ನೆಲ್ಲಾ ಮಕ್ಕಳಿಗೆ ಮೀಸಲಿಡುತ್ತಾ ,ರಕ್ಷಿಸುತ್ತಾ ಬದುಕುವುದು ಅಪ್ಪನ ಗುಣ. ಅದೆಲ್ಲೋ ನೋಡಿದ ನೆನಪು ಅಪ್ಪನನ್ನು ಆಲದ ಮರಕ್ಕೆ ಹೋಲಿಸಿರುವುದು. ಅಪ್ಪನೆಂದರೆ ನಿಜಕ್ಕೂ ಆಲದ ಮರವೇ ಸರಿ. ಇಂತಹ ಅಧ್ಬುತ ವ್ಯಕ್ತಿತ್ವದ ಬಗ್ಗೆ ಹೇಳುತ್ತಾ ಹೊರಟರೇ ಪದಗಳೇ ಸಾಲದು. ಪ್ರಪಂಚದ ನಂಬರ್ 1 ತ್ಯಾಗಮಯಿ ಎಂದೂ ಹೇಳಿದರೂ ತಪ್ಪಾಗದು .
ಆಕಾಶಕ್ಕೆ ಆ ನಕ್ಷತ್ರದ ಬಿಳುಪು ಎಷ್ಟು ಚಂದವೋ, ಪ್ರತಿ ಮಕ್ಕಳ ಪಾಲಿಗೆ ಅಪ್ಪನೇ ಮಿನುಗುವ ನಕ್ಷತ್ರ. ತನ್ನ ಮಕ್ಕಳು ಅತ್ತರೆ ಅದೇನೋ ಮೋಡಿ ಮಾಡಿ, ತುಂಟಾಟ ಮಾಡಿ ಕ್ಷಣಮಾತ್ರದಲ್ಲಿ ನಗಿಸುವ ಸಾಹುಕಾರನೇ ನಮ್ಮಪ್ಪ. ಎಷ್ಟೇ ಸೋಲನ್ನು ಕಂಡರೂ ಗೆಲುವಿನ ಸ್ಪೂರ್ತಿಯ ನೀಡುವ ಗುರುವಾಗುವಿರಿ. ಶುದ್ಧವಾದ ಹೃದಯದಲ್ಲಿ, ಆಕಾಶದಂತಹ ವಿಶಾಲ ಮನಸ್ಸಿನಲ್ಲಿ ತನ್ನ ಮಕ್ಕಳನ್ನು ಬೆಳ್ಳಿಯ ತೆರೆಗಳಂತೆ ಮರೆಸುವ ಮುಗ್ಧನಾದ ಅಪ್ಪ ,ಅದರಲ್ಲೂ ಹೆಣ್ಣುಮಕ್ಕಳ ಪಾಲಿನ ಸೂಪರ್ ಹೀರೋ ಅಪ್ಪನ ಬಗ್ಗೆ ಹೇಳುತ್ತಾ ಹೋದರೆ ದಿನಗಳೂ ಸಾಲದು, ಪದಗಳು ಮುಗಿಯದು.
ಇಂದು ಜೂನ್ 16 ವಿಶ್ವ ಅಪ್ಪಂದಿರ ದಿನಾಚರಣೆ . ಇಂದು ಮಾತ್ರವಲ್ಲ ಪ್ರತಿಯೊಂದು ಕ್ಷಣವನ್ನು ಅಪ್ಪನೊಂದಿಗೆ ಅವರ ಆದರ್ಶದೊಂದಿಗೆ ಕಳೆಯಲು ಬಯಸುತ್ತಾ ಅಪ್ಪಂದಿರಿಗೆ ಮಗದೊಮ್ಮೆ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು….
✍🏻 ಸುಶ್ಮಿತಾ ಯು. ಎಂ
ಉಗ್ರಾಣಿ ಮನೆ ಮಂಡೆಕೋಲು