ಮರಳಿ ಊರಿಗೆ ಕರೆ ತಂದ ಪೊಲೀಸರು
ಕಲ್ಲುಗುoಡಿಯ ದಂಡಕಜೆಯಿಂದ ನಾಪತ್ತೆಯಾಗಿದ್ದ, ಮಹಿಳೆಯೊಬ್ಬರು ಮೈಸೂರಿನ ನಂಜನಗೂಡಿನಲ್ಲಿ ಪತ್ತೆಯಾಗಿ ಮರಳಿ ಊರಿಗೆ ತಲುಪಿದ ಘಟನೆ ವರದಿಯಾಗಿದೆ.
ಕಲ್ಲುಗುಂಡಿಯ ದಂಡೆಕಜೆ ನಿವಾಸಿ ಗಂಗಾಧರ ಅವರ ಪತ್ನಿ ಜಯಂತಿ (36 ) ಇವರು ಜೂ.27 ರಂದು ಕೆಲಸಕ್ಕೆoದು ಮನೆಯಿಂದ ಹೋದವರು ಸಂಜೆಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದಾಗಿ ಮನೆಯವರು ಗಾಬರಿಯಾಗಿದ್ದರು. ಇದಕ್ಕಿoತ ಮುಂಚೆ ಕೂಡಾ ಮನೆಯಿಂದ ಹೇಳದೆ ಹೋಗಿದ್ದರೂ ಆದರೆ ಎರಡು ದಿನದೊಳಗೆ ಬಂದಿದ್ದರೆನ್ನಲಾಗಿದೆ. ಆದ್ರೆ ಈ ಸಲ ಎರಡು ದಿನವಾದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಪತಿ ಗಂಗಾಧರರು ಸುಳ್ಯ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರು. ಪೊಲೀಸರು ತನಿಖೆ ಆರಂಭಿಸಿದರು.
ಜೂ.27 ರಂದು ಮನೆಯಿಂದ ಹೊರಟಿದ್ದ ಜಯಂತಿಯವರು ನೇರವಾಗಿ ಮೈಸೂರಿನ ನಂಜನಗೂಡಿನಲ್ಲಿ ಇಳಿದು ಅಲ್ಲಿನ ದೇವಸ್ಥಾನಕ್ಕೆ ಹೋಗಿದ್ದರೆನ್ನಲಾಗಿದೆ. ದಿನದ ಮೂರು ಹೊತ್ತೂ ಅಲ್ಲೇ ಊಟ ಮಾಡಿ ದೇವಸ್ಥಾನದ ಆವರಣದಲ್ಲೆ ಮಲಗುತ್ತಿದ್ದರೆಂದು ತಿಳಿದುಬಂದಿದೆ. ಐದನೇ ದಿನ ಅಂದರೆ ಜು.3 ರಂದು ಊರಿಗೆ ವಾಪಸ್ ಹೋಗಬೇಕೆಂಬ ಅಭಿಪ್ರಾಯಕ್ಕೆ ಬಂದ ಅವರು ಸಂಜೆ ನಂಜನಗೂಡು ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ಯುವಕ ನೊಬ್ಬನ ಮೊಬೈಲ್ ಪಡೆದು ತನ್ನ ಗಂಡನಿಗೆ ಕರೆ ಮಾಡಿ, ತಾನು ಮೈಸೂರಿನ ನಂಜನಗೂಡಿನಲ್ಲಿರುವುದಾಗಿಯೂ, ಮರಳಿ ನಾನು ಮನೆಗೆ ಬರುವುದಾಗಿಯೂ ಹೇಳಿದರು. ಬಳಿಕ ನಂಜನಗೂಡಿನ ಸ್ಥಳೀಯ ಯುವಕ, ” ಮಹಿಳೆಯನ್ನು ನಂಜನಗೂಡಿನಿಂದ ಮಡಿಕೇರಿಗೆ ತೆರಳುವ ಬಸ್ ಗೆ ಹತ್ತಿಸಿದ್ದೇನೆ” ಎಂದು ತಿಳಿಸಿದರು.
ಗಂಗಾಧರರು ಕೂಡಲೇ ಕಲ್ಲುಗುಂಡಿ ಹೊರ ಠಾಣೆಗೆ ಹೋಗಿ ವಿಷಯ ತಿಳಿಸಿದರು. ಪೊಲೀಸ್ ಸಿಬ್ಬಂದಿ ಗಂಗಾಧರ್ ರೊಂದಿಗೆ ಮಡಿಕೇರಿಗೆ ತೆರಳಿ, ರಾತ್ರಿ ನಂಜನಗೂಡು ಬಸ್ ನಲ್ಲಿ ಬಂದ ಜಯಂತಿಯವರನ್ನು ಪೊಲೀಸ್ ಠಾಣೆಗೆ ಕರೆತಂದು ಗಂಡನ ವಶಕ್ಕೆ ಒಪ್ಪಿಸಿದರು.
” ಗಂಡನ ಕಿರಿಕಿರಿಯಿಂದ ಬೇಸರವಾಗಿ ನಾನು ಬಸ್ ಹತ್ತಿ ಹೋಗಿದ್ದೆ. ನಂಜನಗೂಡು ದೇವಸ್ಥಾನದಲ್ಲೆ ಇದ್ದು ಊಟ ನಿದ್ದೆ ಮಾಡುತ್ತಿದ್ದೆ. ಊರಿಗೆ ಹಿಂತಿರುಗಬೇಕೆಂದು ಸಂಜೆ ಬಸ್ ನಿಲ್ದಾಣಕ್ಕೆ ಬಂದು ಇದ್ದಾಗ ಅಲ್ಲಿ ಕೆಲವು ಕುಡುಕರೆಲ್ಲ ಇರುವುದನ್ನು ಕಂಡು ಭಯವಾಗಿ ಯುವಕನೊಬ್ಬನ ಸಹಾಯದಿಂದ ಗಂಡನಿಗೆ ಫೋನ್ ಮಾಡಿ ಬಸ್ಸಲ್ಲಿ ಮಡಿಕೇರಿಗೆ ಬಂದೆ. ಅಲ್ಲಿ ಇವರೆಲ್ಲ ಕಾದುನಿಂತು ನನ್ನನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಎಂದು ಮರಳಿ ಬಂದಿರುವ ಜಯಂತಿಯವರು ಸುದ್ದಿಗೆ ತಿಳಿಸಿದ್ದಾರೆ.